ಮೈಸೂರು: ದಸರಾ ಮಹಿಳಾ ಕುಸ್ತಿಯ ಎಲ್ಲಾ ವಿಭಾಗಗಳಲ್ಲಿ ಮೊದಲ 3 ಸ್ಥಾನಗಳನ್ನು ಪಡೆದ ಸ್ಪರ್ಧಿ ಗಳಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ನೀಡಲಾಗು ವುದು ಎಂದು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಪ್ರಕಟಿಸಿದರು.
ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಹಿಳೆಯರ ರಾಜ್ಯಮಟ್ಟದ ಪಾಯಿಂಟ್ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕುಸ್ತಿಯಲ್ಲಿ ಗೆಲುವು ಪಡೆದವರ ವಿಳಾಸ ಮತ್ತು ಇತರ ಮಾಹಿತಿಗಳನ್ನು ಕಳುಹಿಸಿಕೊಡುವಂತೆ ಸಂಘಟಕರಿಗೆ ಸೂಚಿಸಿದರಲ್ಲದೆ, ಮಹಿಳಾ ಕುಸ್ತಿಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನನ್ನ ಸಂಸ್ಥೆಯಿಂದ ಸಾಧ್ಯವಾದಷ್ಟು ನೆರವು ನೀಡುವುದಾಗಿ ಭರವಸೆ ನೀಡಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕುಸ್ತಿಯನ್ನು ವೀಕ್ಷಿಸಿದರಲ್ಲದೆ, ಸ್ಪರ್ಧಿಗಳನ್ನು ಹುರಿದುಂಬಿಸಿದರು.