ಹಾಸನ ಹಾಲು ಒಕ್ಕೂಟದಿಂದ ಸಂತ್ರಸ್ತರಿಗೆ ನೆರವು
ಹಾಸನ

ಹಾಸನ ಹಾಲು ಒಕ್ಕೂಟದಿಂದ ಸಂತ್ರಸ್ತರಿಗೆ ನೆರವು

August 19, 2018

ಹಾಸನ: ಸತತ ಮಳೆ, ಗಾಳಿ, ಪ್ರವಾಹದಿಂದ ತತ್ತರಿಸಿರುವ ಕೊಡಗಿನ ಸಂತ್ರಸ್ತರಿಗೆ ಹಾಸನ ಹಾಲು ಒಕ್ಕೂಟದಿಂದ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಆಹಾರ ಸಾಮಾಗ್ರಿ ತುಂಬಿದ 3 ಲಾರಿಗಳಿಗೆ ಹಸಿರು ನಿಶಾನೆ ತೋರಿದರು.

ನಗರದ ಹಾಲು ಒಕ್ಕೂಟದ ಆವರಣದಲ್ಲಿ 3 ಲಾರಿಗಳಲ್ಲಿ 30,000ಲೀ. ಹಾಲು, 5,000 ಬಿಸ್ಕತ್, 200 ಕ್ವಿಂಟಾಲ್ ಅಕ್ಕಿ, 5 ಕ್ವಿಂಟಾಲ್ ಬೇಳೆ ಹಾಗೂ ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳು ತುಂಬಿ ಕಳುಹಿಸಲಾಯಿತು. ಅಗತ್ಯಬಿದ್ದರೆ ಮತ್ತಷ್ಟು ನೆರವು ಒದಗಿಸಲಾ ಗುವುದು ಎಂದು ರೇವಣ್ಣ ತಿಳಿಸಿದ್ದು, ಇಂದು ರೂ. 15 ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳನ್ನು ರವಾನೆ ಮಾಡಲಾಗಿದೆ. ಕೆಲವು ದಾನಿಗಳು ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ತರಿಗೆ ನೆರವು ನೀಡಲು ಮುಂದೆ ಬಂದಿದ್ದು, ದಾನಿಗಳಿಂದ ಸಂಗ್ರಹ ವಾದುದ್ದನ್ನು ಸಂತ್ರಸ್ತರಿಗೆ ನೀಡಲಾಗುವುದು. ಹಾಸನ ಹಾಲು ಒಕ್ಕೂಟದ ಸಿಬ್ಬಂದಿಯ ಇಂದು ದಿನದ ವೇತನ(10 ಲಕ್ಷ) ವನ್ನು ದೇಣಿಗೆ ನೀಡಲಾಗುವುದು ಎಂದು ರೇವಣ್ಣ ಹೇಳಿದರು. ಇದೇ ವೇಳೆ ಜಿಲ್ಲೆಯ ರಾಮನಾಥಪುರದ ಸಂತ್ರಸ್ತರಿಗೆ 3000 ಲೀ. ಹಾಲು, 1000 ಬಿಸ್ಕತ್ ಹಾಗೂ ಹೊದಿಕೆಗಳನ್ನು ಕಳುಹಿಸಲಾಯಿತು. ಸಕಲೇಶಪುರ ತಾಲೂಕಿನ ಸಂತ್ರಸ್ತ ಗ್ರಾಮಕ್ಕೂ ಹಾಲು ಪೂರೈಸಲಾಯಿತು. ಈ ಸಂದರ್ಭದಲ್ಲಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಇನ್ನಿತರರಿದ್ದರು.

Translate »