ಕೊಚ್ಚಿ ಹೋಗುತ್ತಿದೆ ಕೊಡಗು
ಕೊಡಗು

ಕೊಚ್ಚಿ ಹೋಗುತ್ತಿದೆ ಕೊಡಗು

August 18, 2018

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಆರ್ಭಟಿಸುತ್ತಿರುವ ಆಶ್ಲೇಷಾ ಮಳೆಯ ಮರಣ ಮೃದಂಗಕ್ಕೆ ಎರಡು ದಿನದಲ್ಲಿ ಒಟ್ಟು 7 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಬಿರುಗಾಳಿ ಮಳೆಯಿಂದಾಗಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಭಾರೀ ಭೂ ಕುಸಿತದ ದುರಂತಗಳ ಸರಮಾಲೆಯೇ ಮುಂದುವರೆದಿದ್ದು, ಕೊಡಗಿನ ಭೂಪಟದ ನಕ್ಷೆಯಿಂದ ಈಗಾಗಲೇ ಹಲವು ಗ್ರಾಮಗಳು ಅಳಿಸಿ ಹೋಗಿವೆ. ಹಿಂದೆಂದೂ ಕಂಡು ಕೇಳರಿಯದ ಮಹಾ ಪ್ರಳಯಕ್ಕೆ ಕಾವೇರಿ ತವರು ಮೂಕ ಸಾಕ್ಷಿಯಾಗಿದ್ದು, ಎತ್ತ ನೋಡಿದರೂ ಭೂಕುಸಿತ, ನದಿ ನೀರಿನ ಪ್ರವಾಹ ಕಂಡು ಬರುತ್ತಿದೆ. ಮರಣಮಳೆ ಕರುಣೆ ತೋರದೇ ಮುಂದುವರಿದಿದ್ದೇ ಆದಲ್ಲಿ ಕರ್ನಾಟಕದ ಭೂಪಟ ದಿಂದ ಕೊಡಗು ಜಿಲ್ಲೆಯ ನಕ್ಷೆ ಶಾಶ್ವತವಾಗಿ ಮಾಯ ವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಮಡಿಕೇರಿಯ ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರದ, ಬೆಟ್ಟ ತಪ್ಪಲು ಗಳೂ ಸಂಪೂರ್ಣ ಕುಸಿದಿದ್ದು, ನೂರಾರು ಮನೆ ಗಳು ಭೂ ಸಮಾಧಿಯಾಗಿವೆ. ಅಂದಾಜು ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಗಂಜಿ ಕೇಂದ್ರ ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಈ ಬಡಾವಣೆಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಭೂ ಕುಸಿತದ ಸರಣಿ ಮುಂದು ವರಿಯುತ್ತಿದ್ದು, ಮತ್ತಷ್ಟು ಮನೆಗಳು ಕುಸಿದು ಬೀಳುವ ಹಂತ ತಲುಪಿವೆ.

ಮಡಿಕೇರಿ ಸಮೀಪದ ಉದಯಗಿರಿ ಗ್ರಾಮದಲ್ಲಿ ಅಂದಾಜು 2 ಸಾವಿರ ಎಕರೆ ಬೆಟ್ಟ ಪ್ರದೇಶ ಪ್ರಪಾತಕ್ಕೆ ಕುಸಿದಿದ್ದು, 60ಕ್ಕೂ ಹೆಚ್ಚು ಮನೆಗಳು ಮಣ್ಣಿನಡಿ ಸಿಲುಕಿವೆ. ಭೂ ಕುಸಿತ ಸಂದರ್ಭ ವ್ಯಕ್ತಿಯೋರ್ವ ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆಯೂ ನಡೆದಿದ್ದು, ಮೃತದೇಹವನ್ನು ಹೊರತೆಗೆಯಲು ಅಸಾಧ್ಯವಾಗಿದೆ. ಮೃತವ್ಯಕ್ತಿಯ ಗುರುತು ಕೂಡ ಪತ್ತೆಯಾಗಿಲ್ಲ. ಮಕ್ಕಂದೂರು ಸಮೀಪದ ಹೆಮ್ಮೆತ್ತಾಳು, ಮೇಘತ್ತಾಳು, ಬಡಿಗೆರೆ ವ್ಯಾಪ್ತಿಯಲ್ಲಿ 5 ಸಾವಿರ ಎಕರೆಯಷ್ಟು ಕಾಫಿ ತೋಟಗಳ ಬೆಟ್ಟ ಕುಸಿದು 300ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಸಂತ್ರಸ್ಥರಾಗಿದ್ದಾರೆ. 25ಕ್ಕೂ ಹೆಚ್ಚು ಮನೆಗಳು ಮಣ್ಣು ಮಿಶ್ರಿತ ಕೆಸರು ನೀರಿನೊಂದಿಗೆ ಹಟ್ಟಿಹೊಳೆಯ ಗರ್ಭ ಸೇರಿವೆ. ಮನೆ ಯೊಳಗಿದ್ದ ತಾಯಿ ಮಗ ಕೂಡ ಭೂಕುಸಿತದಿಂದ ದುರಂತ ಸಾವನ್ನಪ್ಪಿದ್ದು ಮೃತ ದೇಹದ ಪತ್ತೆ ಕಾರ್ಯ ಕೂಡ ಅಸಾಧ್ಯವಾಗಿ ಪರಿಣಮಿಸಿದೆ.

ಮಡಿಕೇರಿ ಸಮೀಪದ ದೇವಸ್ತೂರಿನ ಇಡೀ ಗ್ರಾಮವೇ ಭೂಕುಸಿತಕ್ಕೆ ಒಳಗಾಗಿದ್ದು 7 ವರ್ಷದ ಬಾಲಕನೊಬ್ಬ ಮೃತಪಟ್ಟ ಬಗ್ಗೆ ವರದಿಯಾಗಿದೆ. ಇಡೀ ಗ್ರಾಮವೇ ಭೂಕುಸಿತದಿಂದ ನಾಮಾವಶೇಷವಾಗಿದ್ದು, ಹಲವು ಮನೆಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಈ ಭೂ ಕುಸಿತದಿಂದ ಗ್ರಾಮದ ಸಂಪರ್ಕ ರಸ್ತೆಗಳೆಲ್ಲಾ ಕೊಚ್ಚಿ ಹೋಗಿದ್ದು, ಅಳಿದುಳಿದ ವಸ್ತುಗಳೊಂದಿಗೆ ಗ್ರಾಮ ತೊರೆದು ಅಲ್ಲಿನ ನಿವಾಸಿಗಳು ಮಡಿಕೇರಿ ಕಡೆಗೆ ಆಗಮಿಸಿದ್ದಾರೆ. ಪ್ರಕೃತಿ ವಿಕೋಪ ಪರಿಹಾರ ತಂಡ, 60ಕ್ಕೂ ಹೆಚ್ಚು ಗ್ರಾಮಸ್ಥರನ್ನು ರಕ್ಷಿಸಿ ವಾಹನದಲ್ಲಿ ಮಡಿಕೇರಿಗೆ ಕರೆತಂದು ಗಂಜಿ ಕೇಂದ್ರಗಳಲ್ಲಿ ಆಶ್ರಯ ಒದಗಿಸಿದ್ದಾರೆ. ಕಾಲೂರು, ಮೊಣ್ಣಂಗೇರಿ, ಕೋಪಟ್ಟಿ, ಹಾಲೇರಿ, ಗಾಳಿಬೀಡು, ಪುಷ್ಪಗಿರಿ, ಕೋಟೆಬೆಟ್ಟ ಸೇರಿದಂತೆ ಹಲವು ಗುಡ್ಡಗಳು ಬಿರುಕು ಬಿಟ್ಟು ಕುಸಿಯುವ ಹಂತಕ್ಕೆ ತಲುಪಿದ್ದು, ಗ್ರಾಮಸ್ಥರು ಹೊರ ಜಗತ್ತಿನಿಂದ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ಈ ವ್ಯಾಪ್ತಿಯ ಎಲ್ಲಾ ಮನೆಗಳನ್ನು ಖಾಲಿ ಮಾಡಲಾಗಿದ್ದು, ಗ್ರಾಮಗಳ ನಕ್ಷೆಗಳೇ ಭೌಗೋಳಿಕವಾಗಿ ಬದಲಾಗಿ ಹೋಗಿವೆ.

ಮಡಿಕೇರಿ ತಾಲೂಕು ಅತೀ ಹೆಚ್ಚಿನ ಪ್ರಕೃತಿ ವಿಕೋಪಕ್ಕೆ ಸಾಕ್ಷಿಯಾಗಿದ್ದು, ಮಂಜಿನ ನಗರಿಯ ಗಂಜಿ ಕೇಂದ್ರಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಸಂತ್ರಸ್ತರ ಆರ್ತನಾದ ಕೇಳಿ ಬರುತ್ತಿದೆ. ಸಂಪಾಜೆ, ಕರಿಕೆ ವ್ಯಾಪ್ತಿಯ ಬೆಟ್ಟ ಗುಡ್ಡಗಳು ಸಹ ಕುಸಿದಿದ್ದು, ನೂರಕ್ಕೂ ಹೆಚ್ಚು ಮಂದಿ ಬೆಟ್ಟದ ತುದಿಗಳಲ್ಲಿ ಮನೆ ಕಳೆದುಕೊಂಡು ಸುರಿಯುವ ಮಳೆಯಲ್ಲೇ ಆಶ್ರಯ ಪಡೆದಿರುವ ಮಾಹಿತಿ ಲಭಿಸಿದೆ. ಸಂತ್ರಸ್ತರ ಸಂಪರ್ಕ ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ಕೂಡ ಅಸಾಧ್ಯವಾಗಿ ಪರಿಣಮಿಸಿದೆ.

ಗ್ರಾಮಗಳನ್ನು ತೊರೆದಿರುವ ಜನರು ಎತ್ತ ಕಡೆ ತೆರಳಿದ್ದಾರೆ ಎನ್ನುವ ಮಾಹಿತಿಯೇ ಯಾರಿಗೂ ಲಭಿಸದಾಗಿದ್ದು, ಕೊರೆಯುವ ಚಳಿ, ಧಾರಾಕಾರ ಮಳೆ, ಬಿರುಗಾಳಿಗೆ ಭೂ ಕುಸಿತಕ್ಕೆ ಒಳಗಾಗಿರುವ ಗ್ರಾಮಗಳ ಜನರ ಸ್ಥಿತಿ ವಿಷಮದ ಕಡೆ ತಿರುಗಿದೆ.

ಜೋಡುಪಾಲ ವ್ಯಾಪ್ತಿಯಲ್ಲಿ ಭಾರಿ ಕುಸಿತ ಸಂಭವಿಸಿ 4 ಮನೆಗಳು ಸಂಪೂರ್ಣ ಧ್ವಂಸಗೊಂಡಿದ್ದು, 25ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಮಾಹಿತಿ ಲಭಿಸಿದೆ. ನಿಶಾನಿ ಬೆಟ್ಟದ ಕೆಳಭಾಗ ಕುಸಿತವಾಗಿದ್ದು, ಹಲವು ಮಂದಿ ಉಕ್ಕಿ ಹರಿಯುತ್ತಿರುವ ಪಯಸ್ವಿನಿ ನದಿಯಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ.

ದ್ವೀಪವಾದ ಕೊಡಗುಮಹಾಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆ ‘ಉತ್ತರಾಖಂಡ್’ನಲ್ಲಿ ಸಂಭವಿಸಿದ ಘನಘೋರ ದುರಂತವನ್ನು ನೆನಪಿಸುತ್ತಿದ್ದು, ಸಂಪೂರ್ಣ ದ್ವೀಪದಂತಾಗಿದೆ.

ಜಿಲ್ಲೆಯನ್ನು ಸಂಪರ್ಕಿಸುವ ರಾಷ್ಟ್ರ ಮತ್ತು ರಾಜ್ಯ ಹೆದ್ದಾರಿಗಳು ಸಂಪೂರ್ಣ ಕುಸಿತಕ್ಕೆ ಒಳಗಾಗಿದ್ದು, ಕೊಡಗು ಜಿಲ್ಲೆ ರಸ್ತೆ, ಸೇತುವೆಯ ಸಂಪರ್ಕವನ್ನು ಕಳೆದುಕೊಂಡಿದೆ. ಮಡಿಕೇರಿ-ಮಂಗಳೂರು ಹೆದ್ದಾರಿಯುದ್ದಕ್ಕೂ 8 ರಿಂದ 10 ಕಡೆಗಳಲ್ಲಿ ಭಾರಿ ಭೂಕುಸಿತಗೊಂಡಿದ್ದು ಕಳೆದ 6 ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಮಡಿಕೇರಿ-ಸೋಮವಾರಪೇಟೆ ರಸ್ತೆ ಹಾಲೇರಿ ಸಮೀಪ ಭೂಕುಸಿತಕ್ಕೆ ಒಳಗಾಗಿ 8 ಸಾವಿರ ಅಡಿ ಪ್ರಪಾತಕ್ಕೆ ಉರುಳಿದೆ. ಸೋಮವಾರಪೇಟೆ-ಶಾಂತಳ್ಳಿ-ಸಕಲೇಶಪುರ ರಾಜ್ಯ ಹೆದ್ದಾರಿ ಶಾಂತಳ್ಳಿ ಬಳಿ 100 ಮೀಟರ್ ಉದ್ದಕ್ಕೂ ಅಂದಾಜು 7 ಅಡಿ ಕುಸಿತಕ್ಕೆ ಒಳಗಾಗಿದೆ. ಮಡಿಕೇರಿ-ವಿರಾಜಪೇಟೆ ಸಂಪರ್ಕ ರಸ್ತೆ ಮೇಕೇರಿ ಬಳಿ ಭೂಕುಸಿತದಿಂದ ಸಂಪರ್ಕ ಕಳೆದುಕೊಂಡಿದೆ. ಪೊನ್ನಂಪೇಟೆ-ಕುಟ್ಟ-ಕೇರಳ ಅಂತರಾಜ್ಯ ಹೆದ್ದಾರಿಯೂ ಕುಸಿತಗೊಂಡಿದ್ದು, ಕೊಡಗು ಜಿಲ್ಲೆ ಅಕ್ಷರಶಃ ದ್ವೀಪದಂತಾಗಿದೆ.

ಜಲಪ್ರಳಯದ ಭೀಕರತೆ ಜಿಲ್ಲೆಯಾದ್ಯಂತ ಎಡೆಬಿಡದೆ ವರುಣ ಆರ್ಭಟಿಸುತ್ತಿರುವುದರಿಂದ ನಗರ-ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಪ್ರವಾಹ ಉಕ್ಕಿ ಹರಿದಿದೆ. ಕಾವೇರಿ, ಲಕ್ಷ್ಮಣ ತೀರ್ಥ, ಕುಮಾರಧಾರ ಸೇರಿದಂತೆ ಅವುಗಳ ಉಪನದಿಗಳು ಮತ್ತು ತೊರೆಗಳು ಪ್ರವಾಹ ಸ್ವರೂಪ ಪಡೆದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಪರ್ಕ ಸೇತುವೆಗಳು ಮತ್ತು ರಸ್ತೆಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದು, ಕೃಷಿ ಭೂಮಿಗಳು ಜಲಪ್ರಳಯಕ್ಕೆ ತುತ್ತಾಗಿವೆ. ಭಾಗಮಂಡಲ-ಅಯ್ಯಂಗೇರಿ ರಸ್ತೆ, ಭಾಗಮಂಡಲ-ತಲಕಾವೇರಿ ರಸ್ತೆ, ನಾಪೋಕ್ಲು-ಮೂರ್ನಾಡು ರಸ್ತೆ, ಕೊಂಡಗೇರಿ, ಕೊಟ್ಟಮುಡಿ, ಕಕ್ಕಬ್ಬೆ, ದೇವಸ್ತೂರು, ದಕ್ಷಿಣ ಕೊಡಗಿನ ಬಾಳೆಲೆ -ನಿಟ್ಟೂರು, ಕಾರ್ಮಾಡು ಗ್ರಾಮಗಳು ನದಿನೀರಿನ ಪ್ರವಾಹಕ್ಕೀಡಾಗಿವೆ. ಕದನೂರು ಹೊಳೆಯ ಪ್ರವಾಹಕ್ಕೆ ನೂರಾರು ಎಕರೆ ಭತ್ತದ ಗದ್ದೆ, ಕಾಫಿ ತೋಟಗಳೂ ಮುಳುಗಡೆಯಾಗಿದೆ. ಬೇತ್ರಿ ಸೇತುವೆ ಮುಳುಗಡೆಯಾಗಿದ್ದು, ಸೇತುವೆಯ ಮೇಲೆ 2 ಅಡಿ ನೀರು ಹರಿಯುತ್ತಿದೆ. ಹೀಗಾಗಿ ಮೂರ್ನಾಡು-ವಿರಾಜಪೇಟೆ ರಸ್ತೆ ಸಂಪರ್ಕ ಬಂದ್ ಆಗಿದೆ. ಸೇತುವೆಯ ಎರಡೂ ಬದಿಯನ್ನು ಬಂದ್ ಮಾಡಲಾಗಿದ್ದು, ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ನದಿ ಪ್ರವಾಹದಿಂದ ಸಂಕಷ್ಟ ಪರಿಸ್ಥಿತಿ ತಲೆದೋರಿರುವ ಕಡೆಗಳಲ್ಲಿ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿ ಶಾಮಕ ದಳದವರನ್ನು ನಿಯೋಜಿಸಲಾಗಿದ್ದು, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಬೋಟ್ ವ್ಯವಸ್ಥೆ ಮಾಡಲಾಗಿದೆ.

ಸಿದ್ದಾಪುರದ ನೆಲ್ಯಹುದಿಕೇರಿ-ಕರಡಿಗೋಡು, ಬೆಟ್ಟದಕಾಡು ಮತ್ತಿತ್ತರ ಕಡೆಗಳಲ್ಲಿ ಕಾವೇರಿ ನದಿ ಪ್ರವಾಹ ಉಕ್ಕೇರಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳು ಕುಸಿತಕ್ಕೆ ಒಳಗಾಗಿದ್ದು, ಬಡ ಕುಟುಂಬಗಳು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಮಾಹಿತಿ ಲಭಿಸಿದೆ. ಹಾರಂಗಿ ಜಲಾನಯನ ವ್ಯಾಪ್ತಿಯ ಮಡಿಕೇರಿ, ಮಾದಾಪುರ, ಹಟ್ಟಿಹೊಳೆ, ಮುಕ್ಲೋಡು, ಹಮ್ಮಿಯಾಲ, ಸೂರ್ಲಬ್ಬಿ ಮತ್ತಿತ್ತರ ಕಡೆಗಳಲ್ಲಿ ಹಗಲಿರುಳು ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಹಟ್ಟಿಹೊಳೆ ಮತ್ತು ಮಾದಾಪುರ ಹೊಳೆಗಳು ಪ್ರವಾಹ ಮಟ್ಟವನ್ನು ಮೀರಿ ಹರಿಯುತ್ತಿವೆ. ಈ ನದಿಗಳ ದಡದಲ್ಲಿದ್ದ ಮನೆಗಳು, ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು, ಹಾರಂಗಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಕಳೆದ 3 ದಿನಗಳಿಂದ ನಿರಂತರವಾಗಿ 80 ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿದು ಬಿಡಲಾಗುತ್ತಿದೆ. ಹಾರಂಗಿ ಜಲಾಶಯ ನಿರ್ಮಾಣವಾದ ಬಳಿಕ ಇದೆ ಮೊದಲ ಬಾರಿಗೆ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸುತ್ತಿರುವುದರಿಂದ ಕುಶಾಲನಗರದ ಅರ್ಧಭಾಗವೇ ನೀರಿನಲ್ಲಿ ಮುಳುಗಿದಂತಾಗಿದ್ದು, ಜನ ಜೀವನ ಸ್ಥಬ್ಧಗೊಂಡಿದೆ.

ಕುಶಾಲನಗರ-ಮಾದಾಪಟ್ಟಣ ಹೆದ್ದಾರಿಯ ತಾವರೆಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಹೆದ್ದಾರಿಯ ಮೇಲೆ 4 ಅಡಿ ನೀರು ಹರಿಯುತ್ತಿದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ಅತ್ತೂರು-ಹಾರಂಗಿ-ಗುಡ್ಡೆಹೊಸೂರು ಮಾರ್ಗದಲ್ಲಿ ಸಂಚರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಹಾರಂಗಿ ಜಲಾಶಯದಿಂದ ಭಾರೀ ನೀರು ಹರಿಸಿದ ಪರಿಣಾಮ ಕೂಡಿಗೆ, ಶಿರಂಗಾಲ, ಕಣಿವೆ, ತೊರೆನೂರು ವ್ಯಾಪ್ತಿಯಲ್ಲಿ ನದಿ ನೀರು ಕೃಷಿ ಗದ್ದೆ ಮತ್ತು ಮನೆಗಳಿಗೆ ನುಗ್ಗಿರುವ ಬಗ್ಗೆ ವರದಿಯಾಗಿದೆ. ನದಿ ನೀರಿನ ಹರಿವಿನಿಂದಾಗಿ ಕೂಡಿಗೆ-ಹಾಸನ ಸಂಪರ್ಕಿಸಿರುವ ಸೇತುವೆ ಕೂಡ ಬಿರುಕು ಬಿಟ್ಟಿದ್ದು, ಸಂಚಾರ ವ್ಯವಸ್ಥೆ ಬಂದ್ ಆಗಿದೆ.

ರಕ್ಷಣಾ ತಂಡ

ಜಿಲ್ಲೆಯಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದಿಂದ ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು ಬೆಂಗಳೂರಿನಿಂದ 150 ಮಂದಿ ಭಾರತೀಯ ಸೇನಾ ಯೋಧರನ್ನು ಕೊಡಗಿಗೆ ಕಳುಹಿಸಲಾಗಿದೆ. ಮೈಸೂರು, ಹಾಸನದಿಂದ ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕೂಡ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅದರೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಪ್ರಕೃತಿ ವಿಕೋಪ ಸಂತ್ರಸ್ಥರ ನೆರವಿಗೆ ಧಾವಿಸಿದ್ದಾರೆ.

ಸಿಎಂಗೆ ಗಂಟೆಗೊಮ್ಮೆ ಮಾಹಿತಿ

ಜಿಲ್ಲೆಯಲ್ಲಾಗುತ್ತಿರುವ ಪ್ರಕೃತಿ ವಿಕೋಪಗಳ ಕುರಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಕ್ಷಣ-ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಕೊಡಗಿನಲ್ಲಿದ್ದು, ಪ್ರಕೃತಿ ವಿಕೋಪದ ಮಾಹಿತಿ ಪಡೆದಿದ್ದಾರೆ. ಜಿಲ್ಲಾಧಿಕಾರಿ ಶ್ರೀವಿದ್ಯಾ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡ ಹಿರಿಯ ಅಧಿಕಾರಿಗಳು, ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಚಿವರುಗಳು ಸಭೆ ನಡೆಸಿ, ತುರ್ತು ಪರಿಹಾರ ಮತ್ತು ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಹೆಚ್ಚುವರಿ ವೈದ್ಯರು ಮತ್ತು ಯೋಧರ ತಂಡವನ್ನು ಕೂಡ ವಿಪತ್ತು ಪರಿಹಾರ ಕಾರ್ಯಕ್ಕೆ ನಿಯೋಜಿಸುವುದಾಗಿ ಸಚಿವರುಗಳು ಭರವಸೆ ನೀಡಿದ್ದಾರೆ. ಶಾಸಕರುಗಳಾದ ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ ಅವರುಗಳು ಪ್ರಕೃತಿ ವಿಕೋಪದ ಕುರಿತು ಸಚಿವರುಗಳ ಗಮನ ಸೆಳೆದರು.

ಗಂಜಿ ಕೇಂದ್ರಗಳಲ್ಲಿ ಆಶ್ರಯ

ಮಳೆಹಾನಿ ಸಂತ್ರಸ್ತರಿಗಾಗಿ ಜಿಲ್ಲೆಯಾದ್ಯಂತ ಸುರಕ್ಷಿತ ಸ್ಥಳಗಳಲ್ಲಿ 20 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. 3 ತಾಲೂಕುಗಳ ಹಲವು ಗ್ರಾಮಗಳಲ್ಲಿಯೂ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಗಂಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ಆಶ್ರಯ ನೀಡಿವೆ. ಮನೆಗಳನ್ನು ಕಳೆದುಕೊಂಡವರು, ಪ್ರವಾಹ ಮತ್ತು ಭೂಕುಸಿತ ಪೀಡಿತರ ಪೈಕಿ ಕೆಲವರು ಸಂಬಂಧಿಕರ ಮನೆಗಳಿಗೆ ತೆರಳಿದರೆ, ಹೆಚ್ಚಿನ ಮಂದಿ ಗಂಜಿ ಕೇಂದ್ರಗಳಲ್ಲಿ ನೆಲೆ ನಿಂತಿದ್ದಾರೆ. ಹಾಲುಕುಡಿಯುವ ಪುಟಾಣಿಗಳಿಂದ ವಯೋವೃದ್ಧರವರೆಗೂ ಗಂಜಿ ಕೇಂದ್ರವೇ ಸದ್ಯದ ಮಟ್ಟಿಗೆ ಆಶ್ರಯ ತಾಣವಾಗಿದೆ. ಗಂಜಿ ಕೇಂದ್ರಗಳಲ್ಲಿ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಔಷಧಿಗಳನ್ನು ಕೂಡ ದಾಸ್ತಾನು ಮಾಡಲಾಗಿದೆ. ದೇವಾಲಯ, ಮಸೀದಿ, ಚರ್ಚ್‍ಗಳೂ ಕೂಡ ಸಂತ್ರಸ್ತರಿಗೆ ಆಶ್ರಯ ಒದಗಿಸಿವೆ.

ಇಂದು ಕೊಡಗಿಗೆ ಸಿಎಂ ಕುಮಾರಸ್ವಾಮಿ

ಮಡಿಕೇರಿ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಕೊಡಗಿನ ರಕ್ಷಣಾ ಕಾರ್ಯಗಳನ್ನು ಪರಿ ಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ನಾಳೆ (ಆ. 18) ಕೊಡ ಗಿಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊಡಗಿನಲ್ಲಿ ಮಳೆಯಿಂದ ಭಾರೀ ಅನಾಹುತ ಸಂಭವಿಸಿದೆ. ಸರ್ಕಾರವು ರಕ್ಷಣಾ ಕಾರ್ಯಗಳನ್ನು ಕೈಗೊಂಡಿದೆ. ಈಗಾಗಲೇ ಹಲವರನ್ನು ರಕ್ಷಿಸಲಾ ಗಿದೆ. ಇನ್ನೂ ಹಲವರನ್ನು ರಕ್ಷಿಸಬೇಕಾಗಿದೆ. ಹವಾ ಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್‍ನಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿಯವರಿಗೆ ಗಂಟೆಗೊಂದು ಬಾರಿ ಇಲ್ಲಿನ ವರದಿಗಳನ್ನು ನೀಡಲಾಗುತ್ತಿದೆ. ಅವರಿಂದ ಸೂಕ್ತ ಮಾರ್ಗದರ್ಶನವನ್ನೂ ಪಡೆಯಲಾಗುತ್ತಿದೆ. ಇನ್ನಷ್ಟು ಬಿರುಸಾಗಿ ರಕ್ಷಣಾ ಕಾರ್ಯ ನಡೆಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

Translate »