- ಜಿಲ್ಲಾಧಿಕಾರಿ ಆದೇಶ ಎತ್ತಿಹಿಡಿದ ರಾಜ್ಯ ನ್ಯಾಯಾಲಯ
- 50 ಲಕ್ಷ ವಸೂಲಿಯೊಂದಿಗೆ ಕಟ್ಟಡ ತೆರವಿಗೆ 4 ವಾರ ಗಡುವು
- ಅಕ್ರಮಕ್ಕೆ ಸಹಕರಿಸಿದ್ದ ಅಧಿಕಾರಿಗಳ ಅಮಾನತು, ತಲಾ 5 ಸಾವಿರ ದಂಡ
ಹಾಸನ: ನಗರಸಭೆ ನಿಯಮ ಪಾಲಿಸದೆ ಅಕ್ರಮವಾಗಿ ನಿರ್ಮಾಣವಾಗಿದ್ದ 7 ಅಂತಸ್ತಿನ ವಾಣಿಜ್ಯ ಕಟ್ಟಡ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಮಾಲೀಕನಿಗೆ 50 ಲಕ್ಷ ರೂ. ದಂಡ ವಿಧಿಸಿದೆ.
ನಗರದ ವಾರ್ಡ್ ನಂ.1ರ ಬಿಎಂ ರಸ್ತೆಯಲ್ಲಿ ನಿವೇಶನ ಸಂಖ್ಯೆ 104ರಲ್ಲಿ ನಿರ್ಮಾಣವಾಗುತ್ತಿದ್ದ ಬೃಹತ್ ಕಟ್ಟಡ(9859 ಚ.ಅಡಿ) ಉದ್ಯಮಿ ಎನ್.ನೀಲಕುಮಾರ್‍ಗೆ ಸೇರಿದ್ದು, ನಗರಸಭೆ ನಿಯಮ ಉಲ್ಲಂಘನೆ ಹಾಗೂ ಸ್ಥಳ ಒತ್ತುವರಿ ಮಾಡಿರುವ ಕುರಿತು ಸಾರ್ವಜನಿಕರು ದೂರಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜು.21ರಂದು ನಗರಸಭೆ ಆಯುಕ್ತರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ಈ ವೇಳೆ ಕಟ್ಟಡ ಮಾಲೀಕ ಪರವಾನಗಿ ಪಡೆಯದೆ ಹಾಗೂ ನಗರಸಭೆ ನಿಯಮ ಗಾಳಿಗೆ ತೂರಿ ಅಕ್ರಮವಾಗಿ ಬಹುಮಹಡಿ ಕಟ್ಟಡ ನಿರ್ಮಿಸುತ್ತಿರುವುದು ದೃಢಪಟ್ಟಿತ್ತು. ಅಲ್ಲದೆ ನಗರಸಭೆ ಕೆಲ ಅಧಿಕಾರಿಗಳು ಕಟ್ಟಡ ಮಾಲೀಕರೊಂದಿಗೆ ಶಾಮೀಲಾಗಿರುವುದು ತಿಳಿದು ಬಂತು. ಈ ಹಿನ್ನೆಲೆ ಜಿಲ್ಲಾಧಿಕಾರಿ ಕೂಡಲೇ ಕಟ್ಟಡ ತೆರವುಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ನಗರಸಭೆ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ಕಟ್ಟಡ ತೆರವಿಗೆ ಆಗುವ ಖರ್ಚನ್ನು ಕಟ್ಟಡ ಮಾಲೀಕರಿಂದಲೇ ವಸೂಲು ಮಾಡುವಂತೆಯೂ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದಂತೆ ಕರ್ನಾಟಕ ಮುನಿಸಿಪಲ್ ಆಕ್ಟ್ 1964ರ ಸೆಕ್ಷನ್ 187ರಡಿ 915.93 ಚ.ಮೀ.(9,859 ಚ.ಅಡಿ)ನ ಕಟ್ಟಡ ತೆರವುಗೊಳಿಸಲು ನಗರಸಭೆ ಆಯುಕ್ತರು ನೋಟೀಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಉದ್ಯಮಿ ಎನ್.ನೀಲಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿದ್ದು, ನಗರಸಭೆ ಆಯುಕ್ತರ ಮೇಲುಸ್ತುವಾರಿಯಲ್ಲಿ 50 ಲಕ್ಷ ರೂ. ಪಾವತಿಸಿ ಕಟ್ಟಡ ತೆರವುಗೊಳಿಸುವಂತೆ ಉದ್ಯಮಿಗೆ ತಾಕೀತು ಮಾಡಿದ್ದು, 4 ವಾರಗಳ ಗಡುವು ನೀಡಿದೆ. ಅಲ್ಲದೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ್ದ ನಗರಸಭೆ ಅಧಿಕಾರಿಗಳನ್ನು ಅಮಾನತು ಮಾಡುವಂತೆ ನಗರಸಭೆಗೆ ಸೂಚನೆ ನೀಡಿದ್ದು, ತಲಾ 5,000 ದಂಡ ವಸೂಲಿ ಮಾಡುವಂತೆಯೂ ಆದೇಶ ನೀಡಿದೆ. ನ್ಯಾಯಾಲಯದ ಈ ಆದೇಶ ಜಿಲ್ಲಾಧಿಕಾರಿಗಳ ಆದೇಶಕ್ಕೆ ಮತ್ತಷ್ಟು ಮಹತ್ವ ಸಿಕ್ಕಂತಾಗಿದೆ.