ಯಗಚಿ ಹಳೇ ಸೇತುವೆ ದುರಸ್ತಿಗೆ ಕರವೇ ಪ್ರತಿಭಟನೆ
ಹಾಸನ

ಯಗಚಿ ಹಳೇ ಸೇತುವೆ ದುರಸ್ತಿಗೆ ಕರವೇ ಪ್ರತಿಭಟನೆ

October 10, 2018

ಬೇಲೂರು: ಶಿಥಿಲಗೊಂಡಿರುವ ಇಲ್ಲಿನ ಯಗಚಿ ನದಿಯ ಹಳೇ ಸೇತುವೆ ದುರಸ್ತಿಗೆ ಆಗ್ರಹಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಸೇತುವೆ ಮೇಲೆ ಸಂಚಾರ ನಿಷೇಧಿಸಿ, ಅಡುಗೆ ತಯಾರಿಸುವ ಮೂಲಕ ಪ್ರತಿಭಟಿಸಿದರು.

ಶಿಥಿಲಗೊಂಡಿರುವ ಪಟ್ಟಣ ಬಳಿಯ ಯಗಚಿ ನದಿಯ ಹಳೇ ಸೇತುವೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಡಿಸಿದರಲ್ಲದೆ, ಸೇತುವೆಯ ಮೇಲೆ ಅಡುಗೆ ತಯಾರಿಸುವ ಮೂಲಕ ಪ್ರತಿಭಟನೆಯನ್ನು ಇನ್ನಷ್ಟು ಚುರುಕುಗೊಳಿಸಿದರು.

ಈ ಸಂದರ್ಭ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್, 150 ವರ್ಷ ಹಳೆಯದಾದ ಅಪರೂಪದ ಸೇತುವೆ ಇಂದು ಅವನತಿಯತ್ತ ಸಾಗುತ್ತಿದೆ. ಪ್ರತಿವರ್ಷ ಕರವೇ ಘಟಕದಿಂದ ಪ್ರತಿಭಟಿಸಿ ಎಚ್ಚರಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಪ್ರತಿಭಟನೆ ವೇಳೆ ಸ್ಥಳಕ್ಕಾಗಮಿಸುವ ಅಧಿಕಾರಿಗಳು ಏನಾದರೊಂದು ಸಬೂಬು ಹೇಳಿ ಶೀಘ್ರವೇ ಕೆಲಸ ಆರಂಭಿಸುವ ಭರವಸೆ ನೀಡಿ ತೆರಳುತ್ತಾರೆ ಹೊರುತು ದುರಸ್ತಿಗೆ ಮುಂದಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೇತುವೆಯ ಎರಡು ಬದುಗಳಲ್ಲಿ ಗಿಡಗಂಟಿಗಳು ಬೆಳೆದು ಸೇತುವೆ ಕಲ್ಲುಗಳು ಉದುರುತ್ತಿದ್ದರೂ ಯಾರೂ ಗಮನ ಹರಿಸುತ್ತಿಲ್ಲ. ಈ ಹಿಂದೆ ನೆಪಮಾತ್ರಕ್ಕೆ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ ಮೇಲ್ನೋಟಕ್ಕೆ ಚಂದ ಕಾಣುವಂತೆ ಡಾಂಬರ್ ಹಾಕಿಸಿ, ಗಿಡಗಂಟಿಗಳನ್ನು ಕತ್ತರಿದ್ದರು. ಆದರೆ ಕೆಲದಿನಗಳ ನಂತರ ಗಿಡಗಳು ಮರಗಳಾಗಿ ಬೆಳೆದಿವೆ. ಡಾಂಬರ್ ಕಿತ್ತು ಗುಂಡಿ ಬಿದ್ದಿದೆ. ಈ ಸೇತುವೆ ಮೇಲೆ ಭಾರೀ ವಾಹನಗಳು ಸೇರಿದಂತೆ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದು, ಅಪಾಯ ಸಂಭವಿಸುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಶಾಸಕರಿಗಾಗಲಿ, ಜಿಪಂ, ತಾಪಂ ಸದಸ್ಯರಿಗಾಗಲಿ ಸೇತುವೆ ದುಸ್ಥಿತಿ ಕಣ್ಣಿಗೆ ಕಂಡಿಲ್ಲವೆ ಎಂದು ಪ್ರಶ್ನಿಸಿದರು. ಸೇತುವೆ ದುರಸ್ತಿ ಮಾಡಿಸಲು ಆಗದಿದ್ದರೆ ಕರವೇ ಘಟಕಕ್ಕೆ ಸೇತುವೆ ನಿರ್ವಹಣೆ ಜವಾಬ್ದಾರಿ ನೀಡಲಿ. ನಾವೇ ನಿರ್ವಹಿಸಿ ತೋರಿಸುತ್ತೇವೆ. ಹಳೇಯ ಸೇತುವೆ ಉಳಿಸುತ್ತೇವೆ ಎಂದು ಸವಾಲು ಹಾಕಿದರು.

ಕರವೇ ಕಾರ್ಯದರ್ಶಿ ಖಾದರ್ ಮಾತನಾಡಿ, 9 ಕಮಾನುಗಳುಳ್ಳ ಅಪರೂಪದ ಸೇತುವೆ ಇದಾಗಿದೆ. ಸೇತುವೆ ಕೆಳಭಾಗದಲ್ಲಿ ಫೌಂಡೇಶನ್ ಕಲ್ಲುಗಳು ಉದುರಿವೆ. ತಳಪಾಯದ ಬಳಿ ಇದ್ದ ಮರದ ತುಂಡುಗಳನ್ನು ಕಳವು ಮಾಡಿರುವುದರಿಂದ ಸೇತುವೆ ದುಸ್ಥಿತಿ ತಲುಪುತ್ತಿದೆ. 15 ದಿನದಲ್ಲಿ ದುರಸ್ತಿ ಕಾಮಗಾರಿ ಆರಂಭಿಸದೇ ಇದ್ದರೆ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಬೀಗಿ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜೂನಿಯರ್ ಇಂಜಿನಿಯರ್ ಜ್ಯೋತಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೆಕ್ಷನ್ ಆಫೀಸರ್ ಬಡ್ತಿ ಹೊಂದಿ ತೆರಳಿದ್ದಾರೆ. ಇಂದು ಮೇಲಾಧಿಕಾರಿಗಳು ಇರದ ಕಾರಣ ನಾನು ಸ್ಥಳಕ್ಕೆ ಬಂದಿದ್ದೇನೆ. ನನಗೆ ಇಲ್ಲಿನ ಸೇತುವೇ ಸ್ಥಿತಿ ತಿಳಿದಿದ್ದು, ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.

ಪ್ರತಿಭಟನೆ ವೇಳೆ ಕರವೇ ಉಪಾಧ್ಯಕ್ಷ ಚಂದ್ರೇಗೌಡ, ನಗರಾಧ್ಯಕ್ಷ ಪ್ರಸನ್ನ, ಕಾರ್ಮಿಕ ಘಟಕದ ಹನುಮಂತು, ಯುವ ಘಟಕದ ಮೋಹನ್, ಡಾ.ರಾಜ್ ಸಂಘದ ತೀರ್ಥಂಕರ್, ವಿಜಯಲಕ್ಷ್ಮಿ, ಹೋಬಳಿ ಘಟಕದ ದಯಾನಂದ್, ಅಫ್ಸರ್, ಈಶ್ವರ್, ಚಿಕ್ಕಯ್ಯ, ಪ್ರಸನ್ನ, ಹನೀಫ್ ಇತರರಿದ್ದರು.

Translate »