ಅ.13ರಿಂದ ಚಾಮರಾಜನಗರದಲ್ಲಿ ದಸರಾ ಮಹೋತ್ಸವ
ಚಾಮರಾಜನಗರ

ಅ.13ರಿಂದ ಚಾಮರಾಜನಗರದಲ್ಲಿ ದಸರಾ ಮಹೋತ್ಸವ

October 10, 2018

ಚಾಮರಾಜನಗರ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಚಾಮರಾಜನಗರ ದಲ್ಲೂ ಅ.13ರಂದು ಚಾಲನೆ ನೀಡಲಾಗುವುದು.

ಜಿಲ್ಲಾ ಕೇಂದ್ರವಾದ ಬಳಿಕ ಚಾಮರಾಜ ನಗರದಲ್ಲಿ 5ನೇ ವರ್ಷದ ದಸರಾ ಕಾರ್ಯಕ್ರಮವನ್ನು ಇಲ್ಲಿನ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ನಡೆಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ.

ಅ.13ರಿಂದ 16ರವರೆಗೆ (4 ದಿನಗಳು) ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರು ಪಾಲ್ಗೊಳ್ಳುತ್ತಿರುವುದರಿಂದ ಮಹೋತ್ಸವಕ್ಕೆ ಮತ್ತಷ್ಟು ಮೆರಗು ನೀಡಿದೆ. ಅ.13ರಂದು ಬೆಳಿಗ್ಗೆ 10ಗಂಟೆಗೆ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಚಾಮರಾಜೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಸಂಜೆ 5 ಗಂಟೆಗೆ ದೇವಸ್ಥಾನದ ಆವರಣದಲ್ಲಿ ನಿರ್ಮಾಣವಾಗಿರುವ ಬೃಹತ್ ವೇದಿ ಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾ ಟಿಸಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್, ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಆರ್.ನರೇಂದ್ರ, ಸಿ.ಎಸ್.ನಿರಂಜನ್‍ಕುಮಾರ್ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ ಜಿಪಂ ಅಧ್ಯಕ್ಷೆ ಶಿವಮ್ಮ, ಸೇರಿದಂತೆ ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

5ನೇ ದಸರಾ ಮಹೋತ್ಸವ: ಚಾಮ ರಾಜನಗರ ಜಿಲ್ಲೆ ಪ್ರತ್ಯೇಕ ಜಿಲ್ಲೆ ಆಗುವ ಮುನ್ನ ಮೈಸೂರು ಜಿಲ್ಲೆಗೆ ಸೇರ್ಪಡೆ ಆಗಿತ್ತು. 1997 ಆಗಸ್ಟ್ 15ರಂದು ಚಾಮ ರಾಜನಗರ ಜಿಲ್ಲೆ ಅಸ್ತಿತ್ವಕ್ಕೆ ಬಂತು. ಚಾಮರಾಜನಗರ ಜಿಲ್ಲೆ ಮೈಸೂರಿನಿಂದ ಬೇರ್ಪಟ್ಟರೂ ಸಹ ಈ ಎರಡೂ ಜಿಲ್ಲೆಗಳ ಅವಿನಾ ಭಾವ ಸಂಬಂಧ ಈಗಲೂ ಮುಂದುವರೆದಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ 2014ರಿಂದ ಜಿಲ್ಲೆಯಲ್ಲೂ ಸಹ ದಸರಾ ಮಹೋತ್ಸವ ಆಚರಿಸಲಾಗುತ್ತಿದೆ. 2014ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರ ವಿಶೇಷ ಕಾಳಜಿಯಿಂದ ಚಾಮರಾಜನಗರದಲ್ಲಿ ದಸರಾ ಕಾರ್ಯಕ್ರಮ ಆರಂಭವಾಯಿತು. ಅಂದಿನಿಂದ ಕಳೆದ 2017ರವರೆಗೂ ದಸರಾ ಅಂಗವಾಗಿ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದಿದ್ದವು. ಅದರಂತೆ ಈ ವರ್ಷವೂ ಸಹ 4 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಹಾಗೂ ದೇವಸ್ಥಾನದ ಎದುರುಗಡೆ ಇರುವ ಎರಡು ಬದಿಯ ಉದ್ಯಾನದ ಮಧ್ಯ ಇರುವ ಜಾಗದಲ್ಲಿ ಅದ್ಧೂರಿ ವೇದಿಕೆಯನ್ನು ಸಿದ್ಧಗೊಳಿಸಲಾಗುತ್ತಿದೆ.

ಜಿಲ್ಲೆಯಲ್ಲಿ 2014ರಲ್ಲಿ ಮೊದಲ ಬಾರಿಗೆ ನಡೆದಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯ ಪ್ರಕಾಶ್, ವಸುಂದರಾ ದಾಸ್ ಸೇರಿದಂತೆ ಇನ್ನಿತರ ಖ್ಯಾತ ಕಲಾವಿದರು ಪಾಲ್ಗೊಂ ಡಿದ್ದರು. ನಂತರದ ವರ್ಷದಲ್ಲಿ ನಡೆದಿದ್ದ ದಸರಾ ಕಾರ್ಯಕ್ರಮದಲ್ಲಿ ಗುರುಕಿರಣ್ ಪಾಲ್ಗೊಂಡಿದ್ದರು. ಕಳೆದ ವರ್ಷ (2017) ರಲ್ಲಿ ರಾಜೇಶ್ ಕೃಷ್ಣನ್, ಸಂತೋಷ್ ವೆಂಕಿ ಭಾಗವಹಿಸಿದ್ದರು.

ಮೊದಲ ದಿನ ಅರ್ಜುನ್‍ಜನ್ಯ ಮೋಡಿ

ಚಾಮರಾಜನಗರ ದಸರಾ ಮಹೋತ್ಸವದ ಮೊದಲ ದಿನದ(ಅ.13) ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್‍ಜನ್ಯ ಅವರ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅಂದು ಸಂಜೆ 4.30 ರಿಂದ 4.50ರವರೆಗೆ ಬನ್ನೂರು ಗ್ರಾಮದ ರಂಗಸ್ವಾಮಿ ಕಲಾವಿದರ ತಂಡದಿಂದ ನಗಾರಿ, 4.50ರಿಂದ 5.20ರವರೆಗೆ ಗುಂಡ್ಲುಪೇಟೆ ಬಿ.ಸಿದ್ದನಗೌಡ ಅವರಿಂದ ಹಿಂದೂಸ್ಥಾನಿ ಸಂಗೀತ, 5.20 ರಿಂದ 5.45ರವರೆಗೆ ಬಿ.ಆರ್.ಹಿಲ್ಸ್‍ನ ಪುಷ್ಪಮಾಲೆ ಕಲಾ ಸಂಘದಿಂದ ಸೋಲಿಗರ ಗೊರುಕನ ನೃತ್ಯ, 5.45 ರಿಂದ 6.45ರವರೆಗೆ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 6.45 ರಿಂದ 10.30ರವರೆಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ಎರಡನೇ ದಿನ ಸಂಗೀತ ಕಟ್ಟಿ ಗಾಯನರಡನೇ ದಿನ ಸಂಗೀತ ಕಟ್ಟಿ ಗಾಯನ

ದಸರಾ ಮಹೋತ್ಸವದ ಎರಡನೇ ದಿನದ(ಅ.14) ಕಾರ್ಯಕ್ರಮದಲ್ಲಿ ಗಾಯಕಿ ಸಂಗೀತ ಕಟ್ಟಿ ಅವರ ನವರಸ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅಂದು ಸಂಜೆ 4.30 ರಿಂದ 4.50ರವರೆಗೆ ರಾಮ ಸಮುದ್ರದ ರಾಜಪ್ಪ ಮತ್ತು ತಂಡದಿಂದ ಜನಪದ ಸಂಗೀತ, 4.50ರಿಂದ 5.20ರವರೆಗೆ ರಾಮಸಮುದ್ರದ ಶ್ರೀ ಮಲೆಮಹದೇಶ್ವರ ಕಲಾ ತಂಡದಿಂದ ಬೀಸು ಕಂಸಾಳೆ, 5.20 ರಿಂದ 5.40ರವರೆಗೆ ಯಳಂದೂರಿನ ಅರುಣ್‍ಕುಮಾರ್ ತಂಡದಿಂದ ಭಾವಗೀತೆ, 5.40 ರಿಂದ 6 ರವರೆಗೆ ಚಾಮರಾಜನಗರ ಶಾರದ ನೃತ್ಯ ಶಾಲೆಯಿಂದ ಭರತನಾಟ್ಯ, 6 ರಿಂದ 7 ರವರೆಗೆ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, 7 ರಿಂದ 8.15ರವರೆಗೆ ಪ್ರಭಾತ್ ಕಲಾವಿದರಿಂದ ನೃತ್ಯ ವೈಭವ ಹಾಗೂ 8.15 ರಿಂದ 10.30ರವರೆಗೆ ಸಂಗೀತ ಕಟ್ಟಿ ಮತ್ತು ತಂಡದಿಂದ ನವರಸ ಗಾಯನ ಕಾರ್ಯಕ್ರಮ ನಡೆಯಲಿದೆ.

ಮೂರನೇ ದಿನ ನಿಕೋಬಾರಿ ನೃತ್ಯ, ಚೋರ ಚರಣದಾಸ ನಾಟಕ

ದಸರಾ ಮಹೋತ್ಸವದ ಮೂರನೇ ದಿನದ(ಅ.15) ಕಾರ್ಯಕ್ರಮದಲ್ಲಿ ನಿಕೋಬಾರಿ ನೃತ್ಯ, ಚೋರ ಚರಣದಾಸ ನಾಟಕ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅಂದು ಸಂಜೆ 4.30 ರಿಂದ 5 ರವರೆಗೆ ಹನೂರು ಕೆಂಪಮಹದೇಶ್ವರ ಸೋಲಿಗರ ನೃತ್ಯ ತಂಡದಿಂದ ಪಿನಾಶಿ ನೃತ್ಯ, 5 ರಿಂದ 5.30ರವರೆಗೆ ಗುಂಡ್ಲುಪೇಟೆ ನಾರಾ ಯಣ್ ಮತ್ತು ಪರಿವರ್ತನ ತಂಡದಿಂದ ತತ್ವಪದ ಮತ್ತು ಜನಪದ ಸಂಗೀತ, 5.30 ರಿಂದ 5.45ರವರೆಗೆ ಕೊಳ್ಳೇಗಾಲ ಎಂ.ಸಿ.ಸಿಂಚನ ಬಿನ್ ವಿ.ಚಂದ್ರಪ್ಪ ತಂಡದಿಂದ ನೃತ್ಯ, 5.45 ರಿಂದ 6.05ರವರೆಗೆ ಗುಂಡ್ಲುಪೇಟೆ ಮೋಹನ್‍ಕುಮಾರ್ ತಂಡದಿಂದ ಜಾನಪದ ನೃತ್ಯ, 6.05ರಿಂದ 6.30ರವರೆಗೆ ಚಾಮರಾಜನಗರದ ಮಹೇಶ್ ಮತ್ತು ತಂಡದಿಂದ ಜಾನಪದ ಸಂಗೀತ, 6.30 ರಿಂದ 7.30ರವರೆಗೆ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 7.30 ರಿಂದ 8.00ರವರೆಗೆ ಅಂಡಮಾನ್ ಮತ್ತು ನಿಕೋಬಾರ್, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ನಿಕೋಬಾರ್ ನೃತ್ಯ, 8.00 ರಿಂದ 10.30ರವರೆಗೆ ಮೈಸೂರಿನ ನಟನ ತಂಡದಿಂದ ಚೋರ ಚರಣದಾಸ ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ನಾಲ್ಕನೇ ದಿನ ಹೇಮಂತ್‍ಕುಮಾರ್ ಸ್ಯಾಂಡಲ್‍ವುಡ್ ಸಂಜೆ

ದಸರಾ ಮಹೋತ್ಸವದ ನಾಲ್ಕನೇ ದಿನದ(ಅ.16) ಕಾರ್ಯಕ್ರಮದಲ್ಲಿ ಗಾಯಕ ಹೇಮಂತ್‍ಕುಮಾರ್ ಅವರ ಸ್ಯಾಂಡಲ್‍ಹುಡ್ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅಂದು ಸಂಜೆ 4.30 ರಿಂದ 4.45ರವರೆಗೆ ರಾಮಸಮುದ್ರದ ಆರ್.ಸಿ.ಸಿದ್ದರಾಜು ಮತ್ತು ತಂಡದಿಂದ ಡೋಲು ಕುಣಿತ, 4.45ರಿಂದ 5 ರವರೆಗೆ ಗುಂಡ್ಲುಪೇಟೆ ಪೃಥ್ವಿ ಬುದ್ಧಿಮಾಂದ್ಯ ಶಾಲೆ ತಂಡದಿಂದ ಜನಪದ ನೃತ್ಯ, 5 ರಿಂದ 5.30ರವರೆಗೆ ಮಲೆಯೂರು ಡಾ.ಪ್ರೀತಮ್ ಅವರಿಂದ ಸುಗಮ ಸಂಗೀತ ಮತ್ತು ದೇವರನಾಮ, 5:30 ರಿಂದ 6:00ರವರೆಗೆ ಕೊಳ್ಳೇಗಾಲದ ಸಿದ್ದಯ್ಯನಪುರ ಎಂ.ಕೈಲಾಸಮೂರ್ತಿ ತಂಡದಿಂದ ಜಾನಪದ ಗಾಯನ, 6.00ರಿಂದ 6.30ರವರೆಗೆ ಯಳಂದೂರು ಅಂಬಳೆ ಗ್ರಾಮದ ಎಸ್.ಜೈಗುರು ಮತ್ತು ತಂಡದಿಂದ ಸುಗಮ ಸಂಗೀತ ಮತ್ತು ಜಾನಪದ, 6.30 ರಿಂದ 7.30ರವರೆಗೆ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಹಾಗೂ 7.30ರಿಂದ 10.30ರವರೆಗೆ ಹೇಮಂತ್ ಮತ್ತು ತಂಡದಿಂದ ಸ್ಯಾಂಡಲ್‍ವುಡ್ ಸಂಜೆ ಕಾರ್ಯಕ್ರಮ ನಡೆಯಲಿದೆ.

Translate »