ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೈಟೆಕ್ ಸ್ಪರ್ಶ ಶೀಘ್ರದಲ್ಲೇ ಅತ್ಯಾಧುನಿಕ ಸಿಟಿ  ಸ್ಕ್ಯಾನಿಂಗ್ ಕಾರ್ಯಾರಂಭ
ಕೊಡಗು

ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೈಟೆಕ್ ಸ್ಪರ್ಶ ಶೀಘ್ರದಲ್ಲೇ ಅತ್ಯಾಧುನಿಕ ಸಿಟಿ  ಸ್ಕ್ಯಾನಿಂಗ್ ಕಾರ್ಯಾರಂಭ

August 7, 2018

ಮಡಿಕೇರಿ: ನಗರದ ಜಿಲ್ಲಾಸ್ಪತ್ರೆಗೆ ಆಧುನಿಕ ತಂತ್ರಜ್ಞಾನದ ವೈದ್ಯಕೀಯ ಸ್ಪರ್ಶ ದೊರಕಿದ್ದು, ಜಿಲ್ಲೆಯ ಜನತೆಯ ಹಲವು ದಶಕಗಳ ಕನಸು ನನಸಾಗಿದೆ. ಜಿಲ್ಲಾಸ್ಪತ್ರೆಗೆ ರಾಜ್ಯ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಸಿಟಿ ಸ್ಕ್ಯಾನಿಂಗ್ ಯಂತ್ರ ಅಳವಡಿಸಲಾಗಿದ್ದು, ಕೆಲವೇ ದಿನಗಳಲ್ಲಿ ಆರೋಗ್ಯ ಸೇವೆಗೆ ಲಭ್ಯವಾಗಲಿದೆ.

ಅಂದಾಜು 2 ಕೋಟಿ ರೂ.ಗಳ ವೆಚ್ಚದ ಸಿಟಿ ಸ್ಕ್ಯಾನಿಂಗ್ ಮಿಷಿನ್ ಅಳವಡಿಸಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ರೋಗಿಗಳಿಗೆ ತುರ್ತು ಸೇವೆಯ ಆಧಾರದ ಮೇಲೆ ಸ್ಕ್ಯಾನಿಂಗ್ ಸೇವೆ ನೀಡಲಾಗಿದೆ. ಜಿಲ್ಲೆಯ ಕೆಲ ಬೆರಳೆಣಿಕೆಯ ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಲಭ್ಯವಿದ್ದ ಸಿಟಿ ಸ್ಕ್ಯಾನಿಂಗ್ ಯಂತ್ರ ಇದೀಗ ಜಿಲ್ಲಾಸ್ಪತ್ರೆಯಲ್ಲೂ ಲಭ್ಯವಿದ್ದು, ಆಗಸ್ಟ್ 15ರ ಸ್ವಾತಂತ್ರೋತ್ಸವದಂದು ಅಧಿಕೃತವಾಗಿ ವೈದ್ಯಕೀಯ ಸೇವೆಗೆ ಲಭ್ಯವಾಗುವ ಸಾಧ್ಯತೆಗಳಿದೆ.

ನಗರದ ಜಿಲ್ಲಾಸ್ಪತ್ರೆಯ ಪ್ರವೇಶ ದ್ವಾರ ದಲ್ಲೇ ಸಂಪೂರ್ಣ ಹವಾನಿಯಂತ್ರಿತ ಸುಸಜ್ಜಿತ ಕೊಠಡಿಯಲ್ಲಿ ಸಿಟಿ ಸ್ಕ್ಯಾನಿಂಗ್ ಯಂತ್ರ ಅಳವಡಿಸಿದ್ದು, ಹನ್ನೆರಡು ಮಂದಿ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗಿದೆ. ದಿನದ 24 ಗಂಟೆ ಅಗತ್ಯವಿರುವ ರೋಗಿಗಳಿಗೆ ಸಿಟಿ ಸ್ಕ್ಯಾನಿಂಗ್ ಸೇವೆ ಪಡೆಯ ಬಹುದಾಗಿದ್ದು, ಈ ಸೇವೆ ಸಂಪೂರ್ಣ ಉಚಿತವಾಗಿರುವುದು ಜನರ ನೆಮ್ಮದಿಗೆ ಕಾರಣವಾಗಲಿದೆ.
ಆಧುನಿಕ ಸಿಟಿ ಸ್ಕ್ಯಾನಿಂಗ್ ಯಂತ್ರ ‘3ಡಿ’ ತಂತ್ರಜ್ಞಾನ ಒಳಗೊಂಡಿದ್ದು, ಏಕಕಾಲ ದಲ್ಲಿ 16 ಚಿತ್ರಗಳನ್ನು ಸಂಗ್ರಹಿಸುವ ಸಾಮಥ್ರ್ಯ ಹೊಂದಿದೆ. ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಸರ್ಕಾರಿ ವೈದ್ಯರಿಂದ ದೃಢೀಕರಿಸಲ್ಪಟ್ಟ ಚೀಟಿ ಪಡೆದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ಸೌಲಭ್ಯ ಪಡೆಯಬಹುದಾಗಿದೆ.

ಸಿಟಿ ಸ್ಕ್ಯಾನಿಂಗ್ ಯಂತ್ರ ದಾಖಲಿಸುವ ವರದಿಯನ್ನು ಆನ್‍ಲೈನ್ ಮುಖಾಂತರ ಸಂಬಂಧಿಸಿದ ವೈದ್ಯರಿಗೆ  ರವಾನಿಸುವ ಸೌಲಭ್ಯವೂ ಇರುವುದರಿಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆಯನ್ನು ಸೂಕ್ತ ಸಮಯ ದಲ್ಲೇ ನೀಡಲು ಸಹಕಾರಿಯಾಗಿದೆ.

ರಾಜ್ಯ ಸರ್ಕಾರ ಪೂನಾದ ಕೃಷ್ಣ ಡಯೋಗ್ನಾಸ್ಟಿಕ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿ ಕೊಂಡಿದ್ದು, ರಾಜ್ಯದ 14 ಜಿಲ್ಲಾ ಆಸ್ಪತ್ರೆ ಗಳಲ್ಲಿ ಅತ್ಯಾಧುನಿಕ ಸಿಟಿ ಸ್ಕ್ಯಾನಿಂಗ್ ಕೇಂದ್ರಗಳನ್ನು ತೆರೆದಿದೆ. ಈ ಕೇಂದ್ರಗಳಲ್ಲಿ ಖಾಸಗಿ ಸಂಸ್ಥೆಯೇ ಎಲ್ಲಾ ಸಿಬ್ಬಂದಿಗಳನ್ನು ನೇಮಿಸಿದ್ದು, ಜಿಲ್ಲಾಸ್ಪತ್ರೆಗಳ ವೈದ್ಯ ಕೀಯ ಸಿಬ್ಬಂದಿಗಳು ಸಹಾಯಕರಾಗಿ ನಿಯೋಜಿ ಸಲ್ಪಟ್ಟಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್‍ನೊಂದಿಗೆ ಕಂಟ್ರ್ಯಾಸ್ಟ್ ಇಂಜೆಕ್ಟ್ ಸ್ಕ್ಯಾನಿಂಗ್ ವ್ಯವಸ್ಥೆಯೂ ಲಭ್ಯ ವಿರುವುದು ಮತ್ತೊಂದು ವಿಶೇಷವಾಗಿದೆ.

ಸಿಟಿ ಸ್ಕ್ಯಾನಿಂಗ್‍ನ ಅಗತ್ಯತೆ, ಉಪ ಯೋಗ ಮತ್ತು ಬಳಕೆಯ ಸಾಮಥ್ರ್ಯದ ಬೇಡಿಕೆಗಳನ್ನು ಆಧರಿಸಿ ಮುಂದಿನ ದಿನ ಗಳಲ್ಲಿ ‘ಎಂಆರ್‍ಐ’ ಸ್ಕ್ಯಾನಿಂಗ್ ಘಟಕವನ್ನು ಕೂಡ ಜಿಲ್ಲಾಸ್ಪತ್ರೆಯಲ್ಲಿ ತೆರೆಯಲು ಯೋಜನೆ ರೂಪಿಸಲಾಗುತ್ತಿದೆ. ಸಿಟಿ ಸ್ಕ್ಯಾನಿಂಗ್ ಸೇವೆ ಪಡೆಯುವವರು ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಡಿತರ ಚೀಟಿ ಅಥವಾ ಪಾಸ್ಪೋರ್ಟ್ ದಾಖಲೆಗಳ ಪೈಕಿ ಯಾವುದಾದರೂ ಒಂದರ ಜೆರಾಕ್ಸ್ ಪ್ರತಿಯನ್ನು ನೀಡಿ ಉಚಿತ ಸೇವೆ ಪಡೆಯಬಹುದಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಆರು ಹಾಸಿಗೆಗಳುಳ್ಳ ‘ಡಯಾಲಿಸಿಸ್’ ಕೇಂದ್ರ ಕಾರ್ಯಾರಂಭಗೊಂಡಿದ್ದು, ಕಿಡ್ನಿ ಸಮಸ್ಯಯಿಂದ ಬಳಲುತ್ತಿರುವವರಿಗೆ ಉಚಿತ ಸೇವೆ ನೀಡಲಾಗುತ್ತಿದೆ. ಪ್ರತಿ ತಿಂಗಳು 45 ಮಂದಿ ಈ ಸೇವೆ ಪಡೆಯುತ್ತಿದ್ದಾರೆ. ಇದೀಗ ಅತ್ಯಾಧುನಿಕ ಸಿಟಿ ಸ್ಕ್ಯಾನಿಂಗ್ ಕೇಂದ್ರ ಕೂಡ ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿದ್ದು, ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕ್ಷೇತ್ರದಲ್ಲಿ ಹೊಸಬೆಳಕು ಮೂಡಿದಂತಾಗಿದೆ.

Translate »