ಮಡಿಕೇರಿ,ಜು.20- ಕೊಡಗಿನಾದ್ಯಂತ ಇಂದು ಸುರಿದ ಭಾರೀ ಮಳೆಗೆ ಮಡಿಕೇರಿ ಸಮೀಪದ ಜೋಡುಪಾಲ ಬಳಿ ನಿರ್ಮಾಣ ಹಂತದ ಮನೆ ಯೊಂದು ಕುಸಿದು ಬಿದ್ದಿದೆ. ಅಲ್ಲದೇ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಒಂದು
ಕಡೆ ಗುಡ್ಡ ಕುಸಿದಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ ಇಂದಿನಿಂದ ಕೊಡಗಿನಲ್ಲಿ ಮಳೆ ಬಿರುಸುಗೊಂಡಿದೆ. ಮಧ್ಯಾಹ್ನದ ವೇಳೆಗೆ ಮದೆನಾಡು ಗ್ರಾಪಂ ವ್ಯಾಪ್ತಿಯ ಜೋಡುಪಾಲ ಬಳಿ ನಿರ್ಮಾಣ ಹಂತದ ಮನೆಯೊಂದು ಸಂಪೂರ್ಣ ವಾಗಿ ಕುಸಿದು ಬಿದ್ದಿದೆ. ಇದೇ ಸ್ಥಳದಲ್ಲಿದ್ದ ಹಳೆಯ ಮನೆ ಕಳೆದ ವರ್ಷ ಸಂಭವಿಸಿದ್ದ ಪ್ರಕೃತಿ ವಿಕೋಪದಲ್ಲಿ ಕುಸಿದಿತ್ತು. ಈ ಸ್ಥಳವು ಮನೆ ಕಟ್ಟಲು ಸೂಕ್ತವಲ್ಲ. ಆದ್ದರಿಂದ ಕಟ್ಟಡ ಕಟ್ಟಬಾರದು ಎಂದು ಗ್ರಾಮ ಪಂಚಾಯಿತಿ ಸೂಚಿಸಿದ್ದರೂ ಕೂಡ ಮನೆ ಮಾಲೀಕರು ಅದೇ ಸ್ಥಳದಲ್ಲಿ ಆರ್‍ಸಿಸಿ ಮನೆ ಕಟ್ಟುತ್ತಿದ್ದರು. ಇಂದು ಆ ಮನೆ ಕುಸಿದಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ತಪ್ಪಿದೆ.
ರಾತ್ರಿ 8.30ರ ಸುಮಾರಿನಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿದು ಮಣ್ಣು ಸಂಪೂರ್ಣವಾಗಿ ರಸ್ತೆಗೆ ಬಿದ್ದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಮಡಿಕೇರಿ ಗ್ರಾಮಾಂತರ ಪೊಲೀಸರು ಮಣ್ಣನ್ನು ತೆರೆವುಗೊಳಿಸಿ, ರಸ್ತೆ ಸಂಚಾರ ಸುಗಮಗೊಳಿಸಿದರು.