ಹೆಚ್‍ಎಂಟಿ ಡೆಲ್ಲಿಗೆ ಹೋಗೋದು ಖಚಿತ
ಮೈಸೂರು

ಹೆಚ್‍ಎಂಟಿ ಡೆಲ್ಲಿಗೆ ಹೋಗೋದು ಖಚಿತ

April 25, 2019

ಹಾಸನ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‍ನ ಹೆಚ್‍ಎಂಟಿ (ಹಾಸನ, ಮಂಡ್ಯ, ತುಮ ಕೂರು) ಅಭ್ಯರ್ಥಿಗಳು ಗೆಲ್ಲುವುದು ನೂರಕ್ಕೆ ನೂರರಷ್ಟು ಖಚಿತವಾಗಿದ್ದು, ಸಂಸದರಾಗಿ ಡೆಲ್ಲಿಗೆ ಹೋಗುತ್ತಾರೆ. ಜೊತೆಗೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲೊಂದರಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ ಮುಖಂಡರು ಕಾಯು ತ್ತಿದ್ದಾರೆ. ಆದರೆ ಹಾಸನ, ಮಂಡ್ಯ ಹಾಗೂ ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಪಡೆದು ಡೆಲ್ಲಿಗೆ ಜೊತೆ ಹೋಗುವುದು ಸತ್ಯ. ಇವರ ಜೊತೆಗೆ ಪಕ್ಷದ ಇನ್ನು ಮೂರು ಜನ ಅಭ್ಯರ್ಥಿಗಳು ಕೂಡ ಹೋಗಲಿದ್ದಾರೆ ಎಂದರು.

ಈಶ್ವರಪ್ಪ ಮತ್ತು ಶ್ರೀರಾಮುಲು ರಾಜಕೀಯಕ್ಕೆ ಈಗ ಬಂದವರು. ಇವರೆಲ್ಲಾ ಮೇ 23ರ ನಂತರ ಮೈತ್ರಿ ಸರ್ಕಾರ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಹೇಳಿಕೆ ನೀಡುತ್ತಿದ್ದಾರೆ. 9 ದಿನ ಬಾಂಬೆ ಹೋಟೆಲ್‍ಗೆ ಹೋಗಿ ಬಂದವರು, ಈಗ ಮತ್ತೆ ಎಲ್ಲಿಗೆ ಹೋಗಲು ಸಿದ್ಧರಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜ್ಯದ ಮೈತ್ರಿ ಸರ್ಕಾರದಲ್ಲಿ 5 ವರ್ಷ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಇರುತ್ತಾರೆ. ಕಳೆದ 9 ತಿಂಗಳಲ್ಲಿ ರಾಜ್ಯದೊಳಗೆ ಮೈತ್ರಿ ಸರ್ಕಾರ ತೆಗೆಯಲು ಸತತವಾಗಿ ಕಾಯುತ್ತಿ ರುವುದು ಅವರ ಭ್ರಮೆ. ರಾಜ್ಯದ ಅಭಿವೃದ್ಧಿ ಬಗ್ಗೆ ಯಾವ ಚಿಂತನೆಯೂ ಇಲ್ಲ. ರಾಮನ ಭಜನೆ ಹೋಗಿ ಪ್ರಸ್ತುತ ಮೋದಿ ಭಜನೆ ಆಗಿದೆ. ಏನೇ ಮಾಡಿದರೂ ರಾಜ್ಯದಲ್ಲಿ ಮೈತ್ರಿ ಸರ್ಕಾ ರಕ್ಕೆ ಯಾವ ಧಕ್ಕೆಯೂ ಇಲ್ಲ ಎಂದು ತಿರುಗೇಟು ನೀಡಿದರು.

ಆಲೂಗಡ್ಡೆ ಬಗ್ಗೆ ಸಭೆ: ಆಲೂಗಡ್ಡೆ ಬೆಳೆಗಾರರ ಹಿತ ಕಾಪಾಡಲು ಸಭೆ ಮಾಡಿ ಸಂಬಂಧಪಟ್ಟ ಇಲಾಖೆ ಯೊಂದಿಗೆ ಮಾತ ನಾಡಿದ್ದೇನೆ. ಮೇ 23 ಕಳೆದ ನಂತರ ಈ ಬಗ್ಗೆ ನಿರ್ಧರಿಸುವುದಾಗಿ ಹೇಳಿದರು. ಶೇ. 50ರ ಸಬ್ಸಿಡಿ ಕೊಡಬೇಕು ಎಂದು ಸಭೆ ಮಾಡಿ ಬೆಂಗಳೂರಿಗೆ ವರದಿ ಕಳುಹಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಹಿಂದೆ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತಿತ್ತು. ರಾಜ್ಯದಲ್ಲಿಯೇ ನಂಬರ್ 1 ಬೆಳೆಯನ್ನು ಇಲ್ಲಿ ಬೆಳೆಯಲಾಗುತಿತ್ತು. ಈಗ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿದೆ. ಈ ಬಾರಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲು ಬಿತ್ತನೆ ಬೀಜದ ಬೇಡಿಕೆ ಬಂದಿದೆ. ಸಬ್ಸಿಡಿ ಔಷಧಿಗೆ ಇದ್ದು, ಬಿತ್ತನೆ ಬೀಜಕ್ಕೆ ಬೆಲೆ ಮೇ 23ರ ನಂತರ ನಿರ್ಧಾರ ಆಗಲಿದೆ ಎಂದರು.

Translate »