ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಯೋಜನೆಗೆ  ಹೋಟೆಲ್ ಮಾಲೀಕರ ಸಂಘ ಸ್ವಾಗತ
ಮೈಸೂರು

ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಯೋಜನೆಗೆ  ಹೋಟೆಲ್ ಮಾಲೀಕರ ಸಂಘ ಸ್ವಾಗತ

November 20, 2018

ಮೈಸೂರು: ಕೆಆರ್‌ಎಸ್‌ ಉದ್ಯಾನ ವನವನ್ನು ಅಮೆರಿಕದ ಪ್ರವಾಸಿ ತಾಣವಾದ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸುವ 1200 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯನ್ನು ಹೋಟೆಲ್ ಮಾಲೀಕರ ಸಂಘ ಸ್ವಾಗತಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಈ ಯೋಜನೆ ಅನುಷ್ಠಾನದಿಂದ ಮೈಸೂರು ಹಾಗೂ ಸುತ್ತಮುತ್ತಲ ಜನತೆಗೆ ಸಾಕಷ್ಟು ಅನುಕೂಲ ಆಗಲಿದೆ. ಉದ್ಯೋಗ ಸೃಷ್ಟಿಯಾಗುವ ಜೊತೆಗೆ ರೈತರ ಭೂಮಿಗೆ ಉತ್ತಮ ಬೆಲೆ ದೊರೆಯಲಿದೆ. ಇದರಿಂದ ಮೈಸೂರು ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ ಎಂದು ತಿಳಿಸಿದರು.

ಕೆಆರ್‌ಎಸ್‌ ಅಣೆಕಟ್ಟೆಗೆ ಹಾನಿಯಾಗುವಂತೆ ಮಾಡಿ ಎಂದು ನಾವು ಹೇಳುತ್ತಿಲ್ಲ. ಅಣೆಕಟ್ಟೆಯಿಂದ 20 ಕಿ.ಮೀ. ದೂರದಲ್ಲಿ ಯೋಜನೆ ಅನುಷ್ಠಾನ ಮಾಡುವ ಉದ್ದೇಶವನ್ನು ರಾಜ್ಯ ಸರ್ಕಾರ ವ್ಯಕ್ತಪಡಿಸಿದೆ. ಹಾನಿಯಾಗದಂತೆ ಉನ್ನತ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ ಎಂದೂ ಹೇಳಲಾಗಿದೆ. ಒಂದು ವೇಳೆ ಅಣೆಕಟ್ಟೆ ಬಳಿ ಸಾಧ್ಯವಿಲ್ಲವಾದರೆ ಮೈಸೂರು ಸುತ್ತಮುತ್ತ ಎಲ್ಲಿಯಾದರೂ ಮಾಡಲಿ. ಒಟ್ಟಾರೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಈ ಯೋಜನೆ ಕೈಬಿಡಬಾರದು ಎಂದು ಒತ್ತಾಯಿಸಿದರು.

ಮೈಸೂರು ಮಹಾರಾಜರ ಕಾಲದಲ್ಲಿ ಅನುಷ್ಠಾನಗೊಂಡ ಬೃಹತ್ ಯೋಜನೆಗಳೇ ಇಂದಿಗೂ ಮೈಸೂರಿನ ಪ್ರವಾಸೋದ್ಯಮದ ಜೀವನಾಡಿ ಆಗಿದ್ದು, ಈಗಲಾದರೂ ಒಂದು ಬೃಹತ್ ಯೋಜನೆ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೈಗೂಡಿದರೆ ಪ್ರವಾಸೋದ್ಯಮದ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ ಆಗಲಿದೆ. ಈ ಯೋಜನೆ ಯಿಂದ ಹೋಟೆಲ್ ಉದ್ಯಮ, ಕರಕುಶಲ ಉದ್ಯಮ, ಟ್ರಾವೆಲ್ಸ್ ಉದ್ಯಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆದಾಯ ಲಭಿಸಲಿದ್ದು, ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಲಭಿಸಲಿದೆ ಎಂದು ತಿಳಿಸಿದರು.

ಈ ಯೋಜನೆ ಅನುಷ್ಠಾನದಿಂದ ಮೈಸೂರು ಸುತ್ತ ಮುತ್ತಲಿನ ಪ್ರವಾಸಿ ತಾಣಗಳ ಆದಾಯ ದ್ವಿಗುಣಗೊಳ್ಳ ಲಿದೆ. ಸರ್ಕಾರದ ಬೊಕ್ಕಸಕ್ಕೂ ತೆರಿಗೆ ರೂಪದಲ್ಲಿ ಹಣ ಬರಲಿದೆ. ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿ ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯವೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಈ ರೀತಿ ಬೃಹತ್ ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದರು.

ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಈ ಯೋಜನೆ ವಿರೋಧಿಸುವುದು ಸರಿಯಲ್ಲ. ಅಭಿವೃದ್ಧಿಗೆ ಪೂರಕವಾದ ಇಂತಹ ಯೋಜನೆಗಳನ್ನು ಅನಗತ್ಯ ಕಾರಣಗಳನ್ನು ಒಡ್ಡಿ ಕಳೆದುಕೊಂಡ ಉದಾಹರಣೆ ಇವೆ. ಚಾಮುಂಡಿಬೆಟ್ಟಕ್ಕೆ `ರೋಪ್ ವೇ’ ಹಾಗೂ ಬಿಡದಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಗಳನ್ನು ಕ್ಷುಲ್ಲಕ ಕಾರಣಕ್ಕೆ ಕೈಬಿಡಲಾಗಿದೆ ಎಂದು ವಿಷಾದಿಸಿದ ಅವರು, ಕೆಆರ್‌ಎಸ್‌ ಅಣೆಕಟ್ಟೆಗೆ ಯಾವುದೇ ಹಾನಿಯಾಗದಂತೆ ಉನ್ನತ ತಂತ್ರಜ್ಞಾನ ಬಳಸಿಕೊಂಡು ಹಾಗೂ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಹೋಟೆಲ್ ಮಾಲೀಕರ ಸಂಘದ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ರವಿಶಾಸ್ತ್ರಿ, ಉಪಾಧ್ಯಕ್ಷ ಸುರೇಶ್ ಉಗ್ರಯ್ಯ, ಕಾರ್ಯ ದರ್ಶಿ ಸುಬ್ರಹ್ಮಣ್ಯ ಆರ್.ತಂತ್ರಿ, ಹೋಟೆಲ್ ಮಾಲೀಕರ ಸಂಘದ ಖಜಾಂಚಿ ಕೆ.ಭಾಸ್ಕರ್ ಶೆಟ್ಟಿ ಗೋಷ್ಠಿಯಲ್ಲಿದ್ದರು.

Translate »