ತಿ.ನರಸೀಪುರ: ತಾಲೂಕಿನ ಎಡದೊರೆ ಗ್ರಾಮದ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಕಳ್ಳರು ಹುಂಡಿ ಒಡೆದು ಹಣ ದೋಚಿರುವ ಘಟನೆ ತಡರಾತ್ರಿ ನಡೆದಿದೆ. ದೇವಾಲಯ ಹುಂಡಿಯನ್ನು ಕಳೆದ ಒಂದು ವರ್ಷದಿಂದ ತೆರೆದಿರಲಿಲ್ಲ ಎನ್ನ ಲಾಗಿದ್ದು, ಕಳ್ಳರು ತಮ್ಮ ಕೈ ಚಳಕ ತೋರಿ ಹುಂಡಿಯನ್ನು ಒಡೆದು ಲಕ್ಷಾಂತರ ರೂಪಾಯಿ ಹಣ ದೋಚಿದ್ದಾರೆ. ಬಳಿಕ ಹುಂಡಿಯನ್ನು ಸುಮಾರು 500 ಮೀಟರ್ ದೂರದಲ್ಲಿ ಬಿಸಾಡಿ ಹೋಗಿದ್ದಾರೆ. ವಿಷಯ ತಿಳಿದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
