ಕಗ್ಗತ್ತಲಲ್ಲಿ ಹುಣಸೂರು: ನಗರಸಭೆಯಲ್ಲಿ ಕಾವೇರಿದ ಚರ್ಚೆ
ಮೈಸೂರು

ಕಗ್ಗತ್ತಲಲ್ಲಿ ಹುಣಸೂರು: ನಗರಸಭೆಯಲ್ಲಿ ಕಾವೇರಿದ ಚರ್ಚೆ

September 7, 2018

ಹುಣಸೂರು: ಇಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬೀದಿ ದೀಪ, ಕುಡಿಯುವ ನೀರು, ಸಾರ್ವ ಜನಿಕ ರಸ್ತೆ ಒತ್ತುವರಿ, ಸ್ಮಶಾನ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾವೇರಿದ ಚರ್ಚೆ ನಡೆಯಿತು. ಹಾಗಾಗಿ ಗದ್ದಲವೂ ಉಂಟಾಯಿತು.

ನಗರಸಭಾ ಅಧ್ಯಕ್ಷ ಎಂ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಸಾಮಾನ್ಯ ಸಭೆಯಲ್ಲಿ ಮೊದಲಿಗೆ ಅಗಲಿದ ಮಾಜಿ ಪ್ರಧಾನಿ ವಾಜಪೇಯಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಸಂತಾಪ ಸೂಚಿಸಲಾಯಿತು. ನಂತರ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ನಗರ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ಶಾಸಕರು ಕಾಮಗಾರಿ ಆದೇಶಪತ್ರ ನೀಡಿದರು. ನಂತರ ಮಾತನಾಡಿದ ವಿಶ್ವನಾಥ್ ಅವರು, ನಗರದ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರದಿಂದ ಬರುವ ಅನುದಾನವನ್ನು ಎಲ್ಲರಿಗೂ ವ್ಯವಸ್ಥಿತವಾಗಿ ವಿತರಿಸಿ ಸರ್ವರಿಗೂ ಅವಕಾಶ ಕಲ್ಪಿಸಬೇಕು ಎಂದರು.

ರಾಜೀವ್ ಗಾಂಧಿ ಹೌಸಿಂಗ್ ಕಮಿಷನ್ ವತಿಯಿಂದ ಎಲ್ಲರಿಗೂ ಮನೆ ಕಟ್ಟಿಕೊಡುವ ಕಾರ್ಯಕ್ರಮವಿದ್ದು, ಪ್ರತಿ ಫಲಾನುಭವಿಗೆ 3.70 ಲಕ್ಷ ಹಣವನ್ನು ಸರ್ಕಾರ ನೀಡುತ್ತದೆ. ಸರ್ಕಾರದ ಕಾರ್ಯಕ್ರಮಗಳನ್ನು ಸದಸ್ಯರ ಗಮನಕ್ಕೆ ತಂದು ಕ್ರಿಯಾ ಯೋಜನೆಗಳನ್ನು ರೂಪಿಸಬೇಕು ಎಂದರು.

ಶಾಸಕರು ಸಭೆಯಿಂದ ಹೊರ ಹೋಗುತ್ತಿದ್ದಂತೆ ಶಿವರಾಜು, ಶ್ರೀನಿವಾಸ್, ಯೋಗಾನಂದ ಶರವಣ ಸೇರಿದಂತೆ ಬಹುತೇಕ ಸದಸ್ಯರು ಹುಣಸೂರು ನಗರ ಕಗ್ಗತ್ತಲಲ್ಲಿ ಮುಳುಗಿದೆ, ಬೀದಿ ದೀಪ ನಿರ್ವಹಣೆಗುತ್ತಿಗೆ ಪಡೆದಿರುವ ಗುತ್ತಿಗೆದಾರ ಯಾವುದೇ ನಿರ್ವಹಣೆ ಮಾಡುತ್ತಿಲ್ಲ. ಆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಒತ್ತಾಯಿಸಿದರು.

ಅಧ್ಯಕ್ಷರು ಮತ್ತು ಆಯುಕ್ತರು ಸೇರಿ ಕೊಂಡು ಸದಸ್ಯರ ಮಾತಿಗೆ ಬೆಲೆ ನೀಡದೆ ಗುತ್ತಿಗೆದಾರರನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ನೀವು ಏನು ಮಾಡುತ್ತಿದ್ದೀರಿ ಎಂದು ಬೀದಿ ದೀಪ ನಿರ್ವಹಣೆಯ ಇಂಜಿನಿಯರ್ ಅನುಪಮಾ ಅವರನ್ನು ಶಿವರಾಜ್, ಶರವಣ, ಸುನಿತಾಜಯರಾಮೇ ಗೌಡ, ಕೃಷ್ಣರಾಜ ಗುಪ್ತ, ಪ್ರೇಮನಂಜಪ್ಪ, ಜಾಕಿರ್ ಹುಸೇನ್ ಸೇರಿದಂತೆ ಸದಸ್ಯರು ತರಾಟೆಗೆ ತೆಗೆದುಕೊಂಡರು.

ಇಂಜಿನಿಯರ್ ಅನುಪಮಾ ಮಾತನಾಡಿ, ನಾವು ಅಸಹಾಯಕರಾಗಿದ್ದೇವೆ. ಸರ್ಕಾರದಿಂದ ನಿರ್ವಹಣಾ ವೆಚ್ಚ ಸಂದಾಯವಾಗಿಲ್ಲ. ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ನಾವು ಸರ್ಕಾರ ಮತ್ತು ಪೌರಾಯುಕ್ತರಿಗೆ ವಿಷಯ ತಿಳಿಸಿದ್ದೇವೆ ಎಂದರು.

ಅಧ್ಯಕ್ಷರು ಮತ್ತು ಆಯುಕ್ತರು ಸೇರಿಕೊಂಡು ಸಭಾ ನಡುವಳಿಯನ್ನು ಬೇಕಾದ ಹಾಗೆ ಬರೆದುಕೊಂಡು ಗುತ್ತಿಗೆದಾರನೊಂದಿಗೆ ಷಾಮೀಲಾಗಿ ಅವ್ಯವಸ್ಥೆಗೆ ಕಾರಣರಾಗಿದ್ದಾರೆ. ಬೀದಿ ದೀಪ ಮತ್ತು ಕುಡಿಯುವ ನೀರಿನ ಬೋರ್‍ವೆಲ್‍ಗಳ ನಿರ್ವಹಣೆಗೆ ಪ್ರತಿವರ್ಷ ಟೆಂಡರ್ ಕರೆದು ಗುತ್ತಿಗೆ ನೀಡಬೇಕು. ಆದರೆ ಕಳೆದ ನಾಲ್ಕು ವರ್ಷಗಳಿಂದ ಒಬ್ಬರೇ ಗುತ್ತಿಗೆದಾರರಿಗೆ ನಿರ್ವಹಣೆಯ ಜವಾಬ್ದಾರಿ ನೀಡುತ್ತಿರು ವುದು ಸರಿಯಲ್ಲ ಎಂದರು.

ತಾಲೂಕು ಕಚೇರಿ ಪಕ್ಕದಲ್ಲಿರುವ ಸ್ಮಶಾನ ದಲ್ಲಿ ಕುಡಿಯುವ ನೀರಿನ ಬೋರ್‍ವೆಲ್ ಕೆಟ್ಟು, ವರ್ಷವಾದರೂ ರಿಪೇರಿ ಮಾಡಿಸಲು ಸಾಧ್ಯವಾಗಿಲ್ಲ. ಸಭೆಯಲ್ಲಿ 6-7 ಕೋಟಿ ಬಜೆಟ್ ಮಂಡಿಸುತ್ತೀರಿ. ಮೊದಲು ಶವ ಸಂಸ್ಕಾರ ಮಾಡುವ ಸ್ಮಶಾನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಸದಸ್ಯ ಜಿ.ಶ್ರೀನಿವಾಸ್ ಕಿಡಿಕಾರಿದರಲ್ಲದೆ ನಗರದ ಹಳೆ ಸೇತುವೆ ಮೇಲೆ ಭಾರೀ ವಾಹನಗಳು ತಿರುಗಾಡದಂತೆ ತಡೆಯ ಬೇಕು ಎಂದು ಅವರು ಒತ್ತಾಯಿಸಿದರು.

ಸಾರ್ವಜನಿಕ ರಸ್ತೆ ಒತ್ತುವರಿ: ನ್ಯೂ ಮಾರುತಿ ಬಡಾವಣೆಯ ಕೇಂಬ್ರಿಡ್ಜ್ ಶಾಲೆಯವರು 20×200 ಅಡಿ ಅಳತೆಯ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿ ಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ ಸಾರ್ವಜನಿಕ ಅನುಕೂಲಕ್ಕೆ ಬಿಡಿಸಿಕೊಡ ಬೇಕೆಂದು ಸದಸ್ಯ ಹೆಚ್.ಪಿ.ಸತೀಶ್‍ಕುಮಾರ್ ಒತ್ತಾಯಿಸಿದರು. ಆಯುಕ್ತರಾದ ಶಿವಪ್ಪ ನಾಯಕ ಈ ಬಗ್ಗೆ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ನೌಕರರಿಗೆ ಸಂಬಳ ನೀಡಿ: ನಗರ ಸಭೆಯ ಕೆಲವು ಅಧಿಕಾರಿಗಳು ಸರ್ಕಾರಿ ಆದೇಶ ವಿದ್ದರೂ ಕೆಲವು ನೌಕರರುಗಳಿಂದ ಕೆಲಸ ಮಾಡಿಸಿಕೊಂಡು ಅವರಿಗೆ ಸಂಬಳ ನೀಡದೇ ಇರುವುದು ಸರಿಯಲ್ಲ. ನೌಕರರಿಗೆ ಕೂಡಲೇ ಸಂಬಳ ನೀಡುವಂತೆ ಸದಸ್ಯರು ಒತ್ತಾಯಿಸಿದರು.

Translate »