3ನೇ ಮದುವೆಗೆ 2ನೇ ಪತ್ನಿ ಕೊಂದ ಪತಿರಾಯ
ಹಾಸನ

3ನೇ ಮದುವೆಗೆ 2ನೇ ಪತ್ನಿ ಕೊಂದ ಪತಿರಾಯ

September 27, 2018

ಚನ್ನರಾಯಪಟ್ಟಣ: ತಾಲೂಕಿನ ವಡ್ಡರಹಳ್ಳಿ ಜಾಕ್ವೆಲ್ ಬಳಿ ನಡೆದ ಮಹಿಳೆ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, 3ನೇ ಮದುವೆಯಾಗಲು ಪತಿಯೇ 2ನೇ ಪತ್ನಿಯನ್ನು ಸಿನೀಮಿಯ ರೀತಿಯಲ್ಲಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಲೂಕಿನ ನಂದಿಹಳ್ಳಿಯ ಸುಮಾ (26) ಹತ್ಯೆಗೀಡಾದ ಮಹಿಳೆ. ತುಮ ಕೂರು ಜಿಲ್ಲೆಯ ಶಿರಾ ಮೂಲದ ಶಿವಣ್ಣ (38) ಪತ್ನಿಯನ್ನು ಕೊಲೆಗೈದ ಪತಿ.

ಬೆಂಗಳೂರಿನಲ್ಲಿರುವ ಪ್ರಸಿದ್ಧ ಆಟೋ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ಮೊದಲೇ ಒಂದು ಮದುವೆಯಾಗಿ, ಮೊದಲ ಪತ್ನಿಗೆ ಇಬ್ಬರು ಮಕ್ಕಳನ್ನು ಕರುಣಿಸಿದ್ದ. ನಂತರ ಆಕೆಯನ್ನು ಬಿಟ್ಟು ತಾಲೂಕು ನಂದಿ ಹಳ್ಳಿಯ ವಿಧವೆ ಸುಮಾಳನ್ನು 2ನೇ ಮದುವೆಯಾಗಿ ಬೆಂಗಳೂರಿನ ಬಾಗಲಕುಂಟೆಯಲ್ಲಿ ವಾಸಗಿದ್ದ. ಶಿವಣ್ಣ, ಸುಮಾ ದಂಪತಿಗೆ ಸದ್ಯ ಹೆಣ್ಣು ಮಗು ಇತ್ತು.

ಪತ್ನಿ ಮೇಲೆ ಅನುಮಾನ ಹೊಂದಿದ್ದ ಶಿವಣ್ಣ, ಆಗಾಗ ಮನೆಯಲ್ಲಿ ಜಗಳ ಮಾಡುತ್ತಿದ್ದ. ಪತ್ನಿ ಸುಮಾಗೂ ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ನಂಟು ಇದೆ ಎಂಬುದು ತಿಳಿದಿತ್ತು. ಇದರಿಂದ ಸಂಸಾರದಲ್ಲಿ ಕಲಹ ಏರ್ಪಡುತ್ತಿತ್ತು. ಹಾಗಾಗಿ 2ನೇ ಪತ್ನಿಯನ್ನು ಮುಗಿಸಿ 3ನೇ ಮದುವೆಯಾಗಲು ನಿರ್ಧರಿಸಿದ್ದ. ಇದಕ್ಕಾಗಿ ತನ್ನ ಪ್ರಿಯತಮೆಯೊಂದಿಗೆ ಚರ್ಚಿಸಿ ಸುಮಾಳನ್ನು ಸಾಯಿಸಲು ಯೋಜನೆ ರೂಪಿಸಿ, ನಿಂಬಿಹಳ್ಳಿಯ ಸಂಬಂಧಿಕರೊಬ್ಬರ ಮನೆಯ ಗೃಹಪ್ರವೇಶದ ಸಂದರ್ಭವನ್ನು ಬಳಸಿಕೊಂಡಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ಸೆ.23ರಂದು ಗೃಹಪ್ರವೇಶ ನೆಪದಲ್ಲಿ ಮಗಳು, ಪತ್ನಿಯನ್ನು ನಿಂಬಿಹಳ್ಳಿಗೆ ಕರೆದುಕೊಂಡು ಬಂದಿದ್ದ. ಗೃಹಪ್ರವೇಶ ಮುಗಿದ ಬಳಿಕ ಬೈಕ್‍ನಲ್ಲಿ ನಾಲೆ ವೀಕ್ಷಣೆಗೆಂದು ಗ್ರಾಮದ ಬಳಿಯ ಕಾಲುವೆಗೆ ಪತ್ನಿ ಕರೆತಂದು ತಳ್ಳಿ ಸಾಯಿಸಿದ್ದಾನೆ. ನಂತರ ಸ್ಥಳೀಯರನ್ನು ನಂಬಿಸಲು ಪತ್ನಿ ನಾಲೆಗೆ ಬಿದ್ದುಬಿಟ್ಟಳು ಎಂದು ಚೀರಾಡಿ ನಾಟಕವಾಡಿದ್ದ. ಶವ ಬಾಗೂರು ಸಮೀಪದ ವಡ್ಡರಹಳ್ಳಿ ಜಾಕ್ ಬಳಿ ದೊರೆತಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪಟ್ಟಣ ಪೊಲೀಸರು ಶಿವಣ್ಣನ್ನು ಸಂಶಯದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ. ಕಳೆದೆರಡು ವರ್ಷಗಳಿಂದ ತಾನು ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ಮದುವೆಯಾಗಲು ಪತ್ನಿ ಸುಮಾಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಿಯಕರಿಗೆ ಸಹಾಯ ಮಹಿಳೆಯೂ ಜೈಲು ಪಾಲಾಗಿದ್ದಾಳೆ.

Translate »