ನಾನು ವೈಯಕ್ತಿಕವಾಗಿ ಭಾವನಾತ್ಮಕ ಜೀವಿ
ಮೈಸೂರು

ನಾನು ವೈಯಕ್ತಿಕವಾಗಿ ಭಾವನಾತ್ಮಕ ಜೀವಿ

October 28, 2018

ಮೈಸೂರು: ನಾನು ವೈಯಕ್ತಿಕವಾಗಿ ಭಾವನಾತ್ಮಕ ಜೀವಿ. ಹಾಗಾಗಿ ಉದ್ದೇಶಪೂರ್ವಕವಾಗಿ ನನ್ನನ್ನು ಎಮೋಷನಲ್ ಬ್ಲಾಕ್‍ಮೇಲ್ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಬೇಸರ ಹೊರಹಾಕಿದರು.

ಮೈಸೂರಿನ ಕೆಪಿಎನಲ್ಲಿ ಪ್ರೊಬೆಷನರಿ ಡಿವೈಎಸ್‍ಪಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಮಂಡ್ಯದ ಸಭೆಯಲ್ಲಿ ಹೇಳಿರೋದು ಆರೋಗ್ಯ ಪರಿಸ್ಥಿತಿ ಸರಿ ಇಲ್ಲದಿದ್ದರೂ ಜನರ ರಕ್ಷಣೆಗಾಗಿ ಬದುಕಿರುವವರೆಗೂ ದುಡಿಯುತ್ತೇನೆ ಎಂದು ಎಂದರು.

ನಾನು ಎಲ್ಲಾ ವಿಚಾರಗಳನ್ನೂ ಭಾವನಾತ್ಮಕವಾಗಿ ನೋಡುತ್ತೇನೆ. ನನ್ನದು ಮೊಸಳೆ ಕಣ್ಣೀರು ಎಂಬುವವರಿಗೆ ಮಾನವೀಯತೆ ಇಲ್ಲ. ನನ್ನ ಆರೋಗ್ಯದ ಜೊತೆ ಯಾರೂ ಚೆಲ್ಲಾಟವಾಡಬೇಡಿ. ಬಡವರ ಬಗ್ಗೆ ನನಗಿರುವ ಕಾಳಜಿ ಬಗ್ಗೆ ಅನುಮಾನ ಬೇಡ. ನನ್ನ ಆರೋಗ್ಯಕ್ಕಿಂತ ನನ್ನ ಮೇಲಿರುವ ಜವಾಬ್ದಾರಿ ನಿರ್ವಹಿಸುವುದೇ ಮುಖ್ಯ ಎಂದು ಅವರು ನುಡಿದರು.

ಸಾಯುವವರೆಗೂ ಮುಖ್ಯಮಂತ್ರಿಯಾಗಿರುತ್ತೇನೆಂದು ಕೊಂಡಿಲ್ಲ. ಮುಖ್ಯಮಂತ್ರಿಯಾಗಿರುವವರೆಗೆ ನಾಡಿನ ಜನರ ಸೇವೆ ಮಾಡುತ್ತೇನೆ. ಅಧಿಕಾರ ಇಲ್ಲದಿದ್ದರೂ ಸಹ ಬಡವರ ಬದುಕಿಸುವ ಕೆಲಸವನ್ನು ನಿಷ್ಕಲ್ಮಷವಾಗಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ನುಡಿದರು.

ಹೂ ಈಸ್ ಯೋಗೇಶ್ವರ್?: ವರ್ಗಾವಣೆ ಹಣದಲ್ಲಿ ಸಿಎಂ ಚುನಾವಣೆ ಮಾಡುತ್ತಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ಆರೋಪಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿಎಂ ‘ಹೂ ಈಸ್ ಯೋಗೇಶ್ವರ್?’. ಜೀವನದಲ್ಲಿ ಒಂದು ನಿವೇಶನ ಖರೀದಿ ಮಾಡಬೇಕೆಂದು ಕನಸೊತ್ತ ಬಡವರ ಹಣ ದೋಖಾ ಮಾಡಿ ಕೊಂಡಿರುವ ಯೋಗೇಶ್ವರ್‌ಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತೀಕ್ಷ್ಣವಾಗಿ ನುಡಿದರು.

ಮೆರಿಟ್ ಆಧಾರದಲ್ಲಿ ಅಧಿಕಾರಿಗಳ ನೇಮಕ ಮಾಡಿದ್ದೇನೆಯೇ ಹೊರತು ಪೇಮೆಂಟ್ ಆಧಾರದಲ್ಲಲ್ಲ. ನಾನು ಓಪನ್ ಚಾಲೆಂಜ್ ಮಾಡುತ್ತೇನೆ. ಯಾವುದೇ ಒಬ್ಬರಿಂದ ಪೇಮೆಂಟ್ ತೆಗೆದುಕೊಂಡಿದ್ದರೆ ಸಾಬೀತು ಪಡಿಸಲಿ ಎಂದ ಕುಮಾರಸ್ವಾಮಿ, ಈ ಹಿಂದೆ ಅರಣ್ಯ ಸಚಿವರಾಗಿದ್ದ ಯೋಗೇಶ್ವರ್ ಟ್ರಾನ್ಸ್‌ಫರ್‌ನಲ್ಲಿ ಹಣ ಪಡೆದು ಖಾತೆ ನಿರ್ವಹಿಸಿದ್ದರೆ? ಆ ಹಣದಲ್ಲಿ ಚುನಾವಣೆ ಎದುರಿಸಿದ್ದರೆ ಎಂದು ಪ್ರಶ್ನಿಸಿದರು.

ಉಗ್ರಪ್ಪ ಪರ ಪ್ರಚಾರ: ಉಗ್ರಪ್ಪ ಅವರು ಮೈತ್ರಿಕೂಟದ ಅಭ್ಯರ್ಥಿ. ನಾನು ಬಳ್ಳಾರಿಗೆ ತೆರಳಿ ಮೂರು ದಿನಗಳ ಕಾಲ ಚುನಾವಣೆ ಪ್ರಚಾರ ಮಾಡುತ್ತೇನೆ. ಹೆಚ್.ಡಿ.ದೇವೇಗೌಡರೂ ಪ್ರಚಾರ ಮಾಡುತ್ತಾರೆ ಎಂದ ಕುಮಾರಸ್ವಾಮಿ ಅವರು, ನಾನು ಬಳ್ಳಾರಿಗೆ ಹೋಗುವುದಿಲ್ಲ ಎಂದು ಯಾರೋ ತಪ್ಪು ಮಾಹಿತಿ ಹರಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಯಂಕ, ನಾಣಿ, ಸೀನ: ಕುಟುಂಬ ರಾಜಕಾರಣದ ಆರೋಪಕ್ಕೆ ನಸು ನಗುತ್ತಲೇ ಉತ್ತರಿಸಿದ ಸಿಎಂ, ಯಂಕ, ನಾಣಿ, ಸೀನ ಇಟ್ಟುಕೊಂಡೇ ರಾಜ್ಯ ಆಳುತ್ತಿದ್ದೇವೆ. ನಾನೇನೂ ವಿಧಾನಪರಿಷತ್ ಮೂಲಕ ಅಧಿಕಾರ ಪಡೆ ದವನಲ್ಲ. ಜನರ ಬಳಿ ಹೋಗಿ ಆಯ್ಕೆಯಾಗಿ ಬಂದವನು. ಜೆಡಿಎಸ್‍ನಲ್ಲಿ ಮಾತ್ರ ಅಪ್ಪ-ಮಗ, ಅಣ್ಣ-ತಮ್ಮ ಇರೋದಾ, ಬಿಜೆಪಿಯಲ್ಲಿಲ್ವಾ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಮಗ ಬಿಟ್ಟು ಇನ್ಯಾರೂ ಅಭ್ಯರ್ಥಿ ಇರ್ಲಿಲ್ವಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಈ ಯಂಕ, ನಾಣಿ, ಸೀನ ಎಲ್ಲಾ ಯಡಿಯೂರಪ್ಪ ನವರಿಗೆ ನಮಗಲ್ಲ. ಎಷ್ಟು ಪಕ್ಷದಲ್ಲಿ ಅಪ್ಪ-ಮಗ, ಅಣ್ಣ-ತಮ್ಮ ಇಲ್ಲ ಹೇಳಿ ಎಂದೂ ಸಿಎಂ ಮರು ಪ್ರಶ್ನಿಸಿದರು.

ಮೀ-ಟೂ ಬಗ್ಗೆ ಗೊತ್ತಿಲ್ಲ: ಮೀ-ಟೂ ಅಭಿಯಾನದ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಮಾಡಲು ಬೇಕಾದಷ್ಟು ಕೆಲಸ ಇದೆ ಎಂದು ಪತ್ರಕರ್ತರ ಪ್ರಶ್ನೆಗೆ ಮುಗುಳ್ನಗೆಯಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನಗೆ ಟೈಂ ಇಲ್ಲ ಎಂದು ಮುಂದೆ ಸಾಗಿದರು.

ರಾಜ್ಯ ಸುಭಿಕ್ಷವಾಗಿದೆ: ರಾಜ್ಯದ ಬೊಕ್ಕಸದಲ್ಲಿ ಹಣ ಖಾಲಿಯಾಗಿದೆ ಎಂಬ ಯಡಿಯೂರಪ್ಪ ಹೇಳಿಕೆಗೆ, ರಾಜ್ಯ ಸುಭಿಕ್ಷವಾಗಿದೆ, ಬೊಕ್ಕಸಕ್ಕೆ ದಾರಿದ್ರ್ಯ ಬಂದಿಲ್ಲ. ರಾಜ್ಯದ ಜನರು ಸಮೃದ್ಧಿಯಾಗಿ ಕೊಟ್ಟಿದ್ದಾರೆ. ಈಗಾ ಗಲೇ ಸಾಲ ಮನ್ನಾ ಮಾಡಿದ್ದೇವೆ. ಎಲ್ಲವನ್ನೂ ಒಂದೇ ದಿನದಲ್ಲಿ ಮಾಡೋಕಾಗಲ್ಲ. ಸ್ವಲ್ಪ ಸಮಯ ಬೇಕು. ಇನ್ನೊಂದ ಹದಿನೈದು ದಿನ ಕಾಯೋಕೆ ಯಡಿಯೂರಪ್ಪ ಗೇನು ಕಷ್ಟ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಲೋಡ್ ಶೆಡ್ಡಿಂಗ್ ಇಲ್ಲ: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಕಲ್ಲಿದ್ದಲಿನ ಕೊರತೆಯಿಂದಾಗಿ ಪೀಕ್ ಹವರ್‍ನಲ್ಲಿ ಬೇಡಿಕೆ ಜಾಸ್ತಿ ಇರುವ ಕಾರಣ ಒಂದೆರಡು ಬಾರಿ ತೊಂದರೆಯಾಗಬಹುದಷ್ಟೆ. ಉಳಿದಂತೆ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಪೂರೈಸುತ್ತಿದ್ದೇವೆ ಎಂದ ಮುಖ್ಯಮಂತ್ರಿಗಳು, ಮಾಧ್ಯಮಗಳಲ್ಲಿ ‘ರಾಜ್ಯ ವನ್ನು ಕಗ್ಗತ್ತಲಿಗೆ ದೂಡಿದ ಕುಮಾರ’ ಎಂಬ ಸುದ್ದಿ ತಮಗೆ ಆಘಾತ ನೀಡಿತು ಎಂದರು.

Translate »