ನಮ್ಮೂರ ಶಾನುಭೋಗರ ಮಾತು ಕೇಳಿ ಲಾ ಮಾಡದೇ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗ್ತಿರಲಿಲ್ಲಾ…
ಮೈಸೂರು

ನಮ್ಮೂರ ಶಾನುಭೋಗರ ಮಾತು ಕೇಳಿ ಲಾ ಮಾಡದೇ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗ್ತಿರಲಿಲ್ಲಾ…

February 3, 2019

ಸುತ್ತೂರು: ನಾನು ನಮ್ಮೂರಿನ ಶಾನುಭೋಗರ ಮಾತನ್ನು ಕೇಳಿ ಲಾ ಓದದಿದ್ದರೆ ಮುಖ್ಯಮಂತ್ರಿಯಾಗು ತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕಾನೂನು ಪದವಿ ಪಡೆದ ಪರಿಶ್ರಮದ ಹಿಂದಿನ ಕಥೆಯನ್ನು ಬಿಚ್ಚಿಟ್ಟರು.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಇಂದು ನಡೆದ ರಾಜ್ಯ ಮಟ್ಟದ ಭಜನಾ ಮೇಳವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಕುರುಬರೆಲ್ಲಾ ಲಾ ಓದೋಕಾಗುತ್ತಾ? ಅದೇನಿದ್ದರೂ ಬ್ರಾಹ್ಮಣರ ಕೆಲಸ ಎಂದು ನಮ್ಮೂರ ಶಾನುಭೋಗರು ನಮ್ಮಪ್ಪನಿಗೆ ಹೆದರಿಸಿಬಿಟ್ಟಿದ್ದರು. ನಮ್ಮಪ್ಪ ಶಾನುಭೋಗರ ಮಾತನ್ನೇ ತಪ್ಪದೇ ಕೇಳ್ತಾ ಇದ್ರು. ನಾನು ಲಾ ಓದಬೇಕು ಅಂದಾಗ ಅವರು ಶಾನುಭೋಗರ ಸಲಹೆ ಯನ್ನು ಕೇಳಿದರು. ಆಗ ಶಾನುಭೋಗರು ಕುರುಬರು ಲಾ ಓದೋಕಾಗುತ್ತಾ, ಲಾಯರ್‍ಗಿರಿ ಏನಿದ್ದರೂ ಬ್ರಾಹ್ಮಣರ ಕೆಲಸ ಅಂತಾ ಹೇಳಿ ಕಳ್ಸಿಬಿಟ್ಟರು.

ಆಗ ನಮ್ಮಪ್ಪ ಲಾ ಓದೋದು ಬೇಡ ಅಂದ್ಬಿಟ್ರು. ನಾನಂತೂ ಲಾ ಓದೋದು ಬೇಡ ಅಂದ್ರೆ ಆಸ್ತೀಲಿ ನನ್ನ ಪಾಲ್ ಕೊಟ್ಬಿಡು ಎಂದು ಮನೇಲಿ ಗಲಾಟೆ ಮಾಡ್ದೆ. ಆಮೇಲೆ ಊರ್ನಲ್ಲಿ ನಮ್ಮಪ್ಪ ಪಂಚಾಯ್ತಿ ಸೇರಿಸಿದ್ರು. ಲಾ ಓದೋದಕ್ಕೆ ಪರ್ಮಿಷನ್ ಸಿಕ್ತು ಎಂದು ಅವರು ಲಾ ಓದಿದ ಹಿಂದಿನ ಪರಿಶ್ರಮದ ಕಥೆಯನ್ನು ಬಿಚ್ಚಿಟ್ಟಿದ್ದಲ್ಲದೇ, `ಆ ಶಾನುಭೋಗರ ಮಾತು ಕೇಳಿದ್ರೆ ನಾನು ಸಿಎಂ ಆಗ್ತಿದ್ನಾ? ಆಗ ಲಾಯರ್ ಆಗಿದ್ದಕ್ಕೇ ನಾನು ಮುಖ್ಯಮಂತ್ರಿ ಆದೆ’ ಎಂದು ಅವರು ಹೇಳಿದರು.

ಆ ಜನ್ಮದಲ್ಲಿ ಹಾಗಿದ್ದೆ, ಈ ಜನ್ಮದಲ್ಲಿ ಹೀಗಿದ್ದೀನಿ ಎಂಬ ಕರ್ಮದ ಮಾತುಗಳನ್ನು ನಂಬಬೇಡಿ. ಅದೊಂದು ಸುಳ್ಳಿನ ಕಂತೆ. ಪಾಪ ಮಾಡಿದ್ರೆ ಕುರಿ, ಕೋಳಿ, ನಾಯಿ ಆಗ್ತಾರೆ ಅನ್ನೋದೆಲ್ಲಾ ಸುಳ್ಳು. ನಾನಂತೂ ಯಾವ ಕರ್ಮವನ್ನೂ ನಂಬೋಲ್ಲ, ನೀವೂ ನಂಬಬೇಡಿ ಎಂದ ಸಿದ್ದರಾಮಯ್ಯ, ಈ ವಿಷಯದಲ್ಲಿ ಬಸವಣ್ಣನವರ ತತ್ವ ಬಹಳ ಹತ್ತಿರವಾಗಿದೆ. ಅವರ ಕಾಯಕವೇ ಕೈಲಾಸ ಎಂಬ ಮಾತು ಬಾಳಿಗೆ ಬೆಳಕನ್ನು ನೀಡುತ್ತೆ. ಅದೇ ರೀತಿ ಸುತ್ತೂರು ಶ್ರೀಮಠ ಬದುಕಿಗೆ ದಾರಿಯನ್ನು ತೋರಿಸುತ್ತೆ. ಹಸಿವನ್ನು ನೀಗಿಸಿ ಜ್ಞಾನವನ್ನು ಬೆಳಗುತ್ತಿದೆ ಎಂದರು.

ಸೋಲಿನ ಕಹಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಅನುಭವಿಸಿದ ಸೋಲಿನ ಕಹಿಯನ್ನು ಸ್ಮರಿಸಿಕೊಂಡು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ನಾನು ಜನರಿಗಾಗಿ ಎಷ್ಟೆಲ್ಲಾ ಕೆಲ್ಸ ಮಾಡ್ದೆ. ಆದ್ರೂ ಚಾಮುಂಡೇಶ್ವರಿ ಜನರು ನನ್ನನ್ನ ಸೋಲ್ಸಿದ್ರು.

ಅದೆಲ್ಲೋ ದೂರದ ಬಾದಾಮಿ ಜನರು ನನ್ನ ಕೈಹಿಡಿದು ನಿಲ್ಸಿದ್ರು. ಬಹುಶಃ ವರುಣಾದಲ್ಲೇ ನಿಂತಿದ್ರೆ ನೀವೆಲ್ಲಾ ನನಗೆ ಆಶೀರ್ವಾದ ಮಾಡ್ತಾ ಇದ್ರಿ ಎಂದು ಸಿದ್ದರಾಮಯ್ಯ ಭಾವುಕರಾ ದರು. ತಮ್ಮ ಪುತ್ರ ಡಾ.ಯತೀಂದ್ರ ಅವರನ್ನು ಗೆಲ್ಲಿಸಿದ ವರುಣಾ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ, ನಾನು ಪ್ರತೀ ಬಾರಿಯೂ ಸುತ್ತೂರು ಜಾತ್ರೆಗೆ ಬರುತ್ತೇನೆ. ಇದು ನನ್ನ ವರುಣಾ ಕ್ಷೇತ್ರದಲ್ಲಿದೆ. ಇಲ್ಲಿ ಈಗ ನನ್ಮಗ ಶಾಸಕನಾಗಿದ್ದಾನೆ. ಇಲ್ಲಿನ ಜನರು ನನಗಿಂತ ಹೆಚ್ಚು ಬಹುಮತದಿಂದ ಅವನನ್ನ ಗೆಲ್ಸಿದ್ದಾರೆ. ಹೀಗಾಗಿ ನಾನು ವರುಣಾ ಕ್ಷೇತ್ರದ ಜನರಿಗೆ ಚಿರ ಋಣಿಯಾಗಿದ್ದೇನೆ ಎಂದರು.

ಮತ್ತೆ ಭಲೇ ಜೋಡಿ: ವಿಧಾನಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ಅವರು ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರ ನಡುವಿನ ಬಾಂಧವ್ಯವೇ ಮುರಿದು ಬಿದ್ದಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಇಬ್ಬರು ನಾಯಕರು ಒಟ್ಟಿಗೇ ಕಾಣಿಸಿಕೊಂಡೇ ಇರಲಿಲ್ಲ. ಆದರೆ ಸುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಭಜನಾ ಮೇಳ ಉದ್ಘಾಟನಾ ಸಮಾರಂಭದಲ್ಲಿ ಈ ಇಬ್ಬರೂ ನಾಯಕರು ವೇದಿಕೆ ಹಂಚಿಕೊಂಡಿದ್ದು ಪರಸ್ಪರ ಮಾತನಾಡುತ್ತಾ ಊಹಾ-ಪೋಹಗಳಿಗೆ ತೆರೆ ಎಳೆದರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಇಂದು ಸಂಜೆ ನಡೆದ ಸಮಾರಂಭದಲ್ಲಿ ಭಾಗವಹಿಸಿದ ಚಿತ್ರನಟ ದರ್ಶನ್ ಅವರನ್ನು ನೋಡಲು ಅವರ ಅಭಿಮಾನಿಗಳು ಮುಗಿ ಬಿದ್ದಾಗ ನೂಕಾಟ-ತಳ್ಳಾಟ ಉಂಟಾಯಿತು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

Translate »