ಸಚಿವ ಡಿಕೆಶಿಗೆ ಬಂಧನ ಭೀತಿ
ಮೈಸೂರು

ಸಚಿವ ಡಿಕೆಶಿಗೆ ಬಂಧನ ಭೀತಿ

February 3, 2019

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಬೃಹತ್ ನೀರಾವರಿ ಸಚಿವ ಡಿ.ಕೆ. ಶಿವ ಕುಮಾರ್ ಅವರಿಗೆ ಕಂಟಕ ಎದುರಾಗಿದ್ದು, ಬಂಧನದ ಭೀತಿಯಲ್ಲಿದ್ದಾರೆ.

ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶಿವಕುಮಾರ್ ಮತ್ತು ಈ ಪ್ರಕರಣದ ಇತರ ಆರೋಪಿಗಳಿಗೆ ಖುದ್ದು ದೆಹಲಿ ಕಚೇರಿ ಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಬೇನಾಮಿ ಆಸ್ತಿ ಪ್ರಕರಣ ಸಂಬಂಧ ಶಿವಕುಮಾರ್, ಆರೋಪಿಗಳಾದ ಸಚಿನ್ ನಾರಾಯಣ್, ಸುನೀಲ್ ಶರ್ಮ, ಆಂಜನೇಯ ಮತ್ತು ರಾಜೇಂದ್ರ ದೆಹಲಿಯಲ್ಲಿ ಇಡಿ ಮುಂದೆ ವಿಚಾರಣೆಗೆ ಖುದ್ದು ಹಾಜರಾಗಬೇಕಿದೆ.

ಜ.17ರಂದೇ ಸಮನ್ಸ್ ಜಾರಿ ಆಗಿದ್ದು, ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಮ್ಮನ್ನು ಬಂಧಿಸಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಇವರುಗಳು ನಿರೀಕ್ಷಣಾ ಜಾಮೀನು ಪಡೆ ಯಲು ಯತ್ನಿಸುತ್ತಿದ್ದಾರೆ. ದೆಹಲಿಯ ಫ್ಲ್ಯಾಟ್ ಮೇಲೆ ನಡೆದ ದಾಳಿ ವೇಳೆ 3 ಕೋಟಿ ರೂ.ಗೂ ಹೆಚ್ಚು ನಗದು ಪತ್ತೆಯಾಗಿತ್ತಲ್ಲದೆ, ಈ ಹಣ ಡಿ.ಕೆ.ಶಿವಕುಮಾರ್ ಅವರದು ಎಂಬುದು ತನಿಖೆಯಿಂದ ವ್ಯಕ್ತವಾಗಿತ್ತು.

ಬರಬೇಕಾಗಿದ್ದ ಸಮನ್ಸ್‍ಗಳೆಲ್ಲಾ ಬಂದಿವೆ… ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ…

ಬರಬೇಕಾಗಿದ್ದ ಸಮನ್ಸ್‍ಗಳೆಲ್ಲಾ ಬಂದಿದೆ, ಈಗ ಏನನ್ನೂ ಪ್ರತಿಕ್ರಿಯಿಸುವುದಿಲ್ಲ, ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ಜಾರಿ ನಿರ್ದೇ ಶನಾಲಯದ ಸಮನ್ಸ್ ಕಾನೂನಾತ್ಮಕ ವಿಷಯವಾಗಿದೆ, ಈ ಬಗ್ಗೆ ಏನೂ ಹೇಳುವು ದಿಲ್ಲ, ಸಮಯ ಬಂದಾಗ ಪ್ರಸ್ತಾಪಿಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಯಾವ ಗೊಂದಲವೂ ಇಲ್ಲ, ನಮ್ಮ ಸರ್ಕಾರ ಸುಭದ್ರವಾಗಿದೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೂರ್ವ ನಿಗದಿಯಂತೆ ಬಜೆಟ್ ಮಂಡಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತ್ರ ತುಂಬಾ ಅರ್ಜೆಂಟ್‍ನಲ್ಲಿದ್ದಾರೆ, ಅವರಿಗೆ ಶುಭವಾಗಲಿ. ಬರೀ ಆರು ಜನ ಶಾಸಕರ ರಾಜೀನಾಮೆ ಏಕೆ, ಕಾಂಗ್ರೆಸ್‍ನ ಎಲ್ಲಾ ಶಾಸಕರಿಂದಲೂ ರಾಜೀನಾಮೆ ಕೊಡಿಸಲಿ ಎಂದು ಅವರು ತಿರುಗೇಟು ನೀಡಿದರು.

Translate »