ರಾಜ್ಯದಲ್ಲಿ ಮತ್ತೆ `ಯಶಸ್ವಿನಿ’ ವಿಮಾ ಯೋಜನೆ ಜಾರಿ
ಮೈಸೂರು

ರಾಜ್ಯದಲ್ಲಿ ಮತ್ತೆ `ಯಶಸ್ವಿನಿ’ ವಿಮಾ ಯೋಜನೆ ಜಾರಿ

February 3, 2019

ಸುತ್ತೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ವಿಮಾ ಯೋಜನೆಯಿಂದ ರಾಜ್ಯದ ಅನಾರೋಗ್ಯ ಪೀಡಿತರಿಗೆ ಉಪಯೋಗವಾಗದೇ ಇರುವುದನ್ನು ಗಮನಿಸಿ, ಮತ್ತೆ `ಯಶಸ್ವಿನಿ’ ವಿಮಾ ಯೋಜನೆ ಜಾರಿಗೆ ತರಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಗೆ ಆಗಮಿಸಿ, ಇಲ್ಲಿ ಹೊಸದಾಗಿ ನಿರ್ಮಿಸಿರುವ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ವನ್ನು ಉದ್ಘಾಟಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾರೂ ಮಾಡದೆ ಇರುವ ಕಾರ್ಯಕ್ರಮ ಜಾರಿಗೆ ತಂದಿರುವುದಾಗಿ ಕೋಟ್ಯಾಂತರ ರೂ ಖರ್ಚು ಮಾಡಿ ಜಾಹೀರಾತು ನೀಡುತ್ತಿದ್ದಾರೆ. ಹೀಗೆ ಆಯುಷ್ಮಾನ್ ಭಾರತ್ ವಿಮಾ ಯೋಜನೆ ಕುರಿತು ಜಾಹೀರಾತು ನೀಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಜಾಹೀರಾತು ಹೆಚ್ಚಾ ಗುತ್ತಿದ್ದು, ರಾಜ್ಯದ ಜನತೆ ದಾರಿ ತಪ್ಪಬಾರದು. ಕರ್ನಾಟಕದಲ್ಲಿ 8-10 ವರ್ಷದ ಹಿಂದೆಯೇ ಯಶಸ್ವಿನಿ, ಆರೋಗ್ಯ ಶ್ರೀ ಯೋಜನೆ ಯಡಿ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದೆ.

ಇದಕ್ಕಾಗಿ 700 ಕೋಟಿ ರೂ.ಗಿಂತಲೂ ಹೆಚ್ಚು ಹಣ ಮೀಸಲಿಟ್ಟಿದ್ದೇವೆ ಎಂದರು. ಕೇಂದ್ರ ಸರ್ಕಾರದ ಕೋರಿಕೆ ಮೇರೆಗೆ ಕರ್ನಾಟಕ ಆರೋಗ್ಯ ಶ್ರೀ ಯೋಜನೆಯನ್ನು ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವಿಲೀನ ಮಾಡಲಾಗಿತ್ತು. ಆದರೆ ಈ ಯೋಜನೆಗೆ ಕೇಂದ್ರ ಕೇವಲ 200 ಕೋಟಿ ರೂ. ನೀಡುತ್ತಿದ್ದು, ರಾಜ್ಯ ಸರ್ಕಾರ 800 ಕೋಟಿ ರೂ. ನೀಡಿದೆ. ಹೆಚ್ಚಿನ ಪ್ರಮಾಣದ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದರೆ, ಕೇಂದ್ರ ಸರ್ಕಾರ ಯೋಜನೆಗೆ ಹೆಸರಿಟ್ಟು ಪ್ರಚಾರಗಿಟ್ಟಿಸಿ ಕೊಳ್ಳುತ್ತಿದೆ. ಇದರಿಂದ ರಾಜ್ಯದ ಜನರಿಗೆ ಆಯುಷ್ಮಾನ್ ಯೋಜನೆ ಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಇದನ್ನು ಮನಗಂಡು ಈ ಸಾಲಿನ ಬಜೆಟ್ ನಲ್ಲಿ ರಾಜ್ಯದಲ್ಲಿ ಮತ್ತೆ ಯಶಸ್ವಿನಿ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದ್ದೇನೆ ಎಂದರು.

ದೋಖಾ ಹಾಗೂ ಮತ ಕ್ರೋಢೀಕರಣ ಬಜೆಟ್: ಕೇಂದ್ರ ಬಜೆಟ್‍ನಲ್ಲಿ ಹಲವಾರು ದೋಖಾ(ಮೋಸ) ನಡೆದಿದೆ. ಲೋಕ ಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಂಡಿ ಸಿರುವ ಬಜೆಟ್‍ನಲ್ಲಿ ಯಾರಿಗೂ ಉಪಯೋಗವಾಗುವ ಕಾರ್ಯ ಕ್ರಮವನ್ನು ಅನುಷ್ಠಾನಗೊಳಿಸಿಲ್ಲ. ರಾಜ್ಯದಿಂದ ಸಲ್ಲಿಕೆಯಾಗಿದ್ದ ದೊಡ್ಡ ಮಟ್ಟದ ಹಲವು ಪ್ರಸ್ತಾವನೆಗಳಲ್ಲಿ ಒಂದೂ ಈಡೇರಿಲ್ಲ. ರೈತರಿಗೆ 6 ಸಾವಿರ ರೂ. ಗಳನ್ನು ತಿಂಗಳಿಗೆ 500 ರೂ.ನಂತೆ ಪ್ರೋತ್ಸಾಹ ಧÀನ ನೀಡುವುದಾಗಿ ಹೇಳಿದೆ. ಇದರಿಂದ ರೈತರಿಗೆ ಪ್ರಯೋಜನವಾಗುವುದಿಲ್ಲ. ದೇಶದ 12 ಕೋಟಿ ರೈತರಿಗೆ ನೆರವು ನೀಡಲು 75 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಈ ಯೋಜನೆ ಯಡಿ ರಾಜ್ಯದ 59 ಲಕ್ಷ ರೈತ ಕುಟುಂಬಗಳಿಗಾಗಿ 3500 ಕೋಟಿ ರೂ. ಮಾತ್ರ ದೊರೆಯಲಿದೆ. ಇದರೊಂದಿಗೆ ಕೆಲವು ಸಂಸ್ಥೆಗಳಿಗೆ ಅನುದಾನ ಕೊಟ್ಟಿರುವುದನ್ನು ಬಿಟ್ಟರೆ ರಾಜ್ಯಕ್ಕೆ ಕೇಂದ್ರದ ಬಜೆಟ್‍ನಿಂದ ಲಾಭವಾಗಿಲ್ಲ ಎಂದರು. ಬೆಂಗಳೂರು ದೇಶಕ್ಕೆ ಆದಾಯ ಕೊಡುವ ನಗರವಾಗಿದೆ. ಇಲ್ಲಿ ಸಬರ್ಬನ್ ರೈಲ್ವೆ ಯೋಜನೆ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ಕೋರಿತ್ತು. ಕೇಂದ್ರವೂ ಭರವಸೆ ನೀಡಿತ್ತು. ಆದರೆ ಬಜೆಟ್ ಮಂಡಿಸಿದ ರೈಲ್ವೆ ಮಂತ್ರಿ ಪಿಯೂಷ್ ಗೋಯಲ್ ಚಕಾರ ಎತ್ತಲಿಲ್ಲ. ಈ ಬಜೆಟ್ ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಗೂ ಉಪಯೋಗವಿಲ್ಲ ಎಂದು ವಿಶ್ಲೇಷಿಸಿದರಲ್ಲದೆ, ರಾಜ್ಯದ 17 ಬಿಜೆಪಿಯ ಸಂಸದರು ರಾಜ್ಯದ ಹಿತ ಕಾಯುವಲ್ಲಾಗಲಿ, ರಾಜ್ಯ ಪ್ರಮುಖ ಪ್ರಸ್ತಾವನೆಯನ್ನು ಬಜೆಟ್‍ನಲ್ಲಿ ಈಡೇರುವಂತೆ ಮಾಡುವಲ್ಲೂ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಿಗೆ ಒಳಗಾಗಲ್ಲ: ಬಿಜೆಪಿ ನಾಯಕರು `ರವಿ ಪೂಜಾರಿ ಬಂಧಿಸಿರುವ ಕುಮಾರಣ್ಣ ಸರ್ಕಾರ, ಕಂಪ್ಲಿ ಶಾಸಕ ಗಣೇಶ್ ಅವರನ್ನೂ ಬಂಧಿಸಿ ಪೌರುಷ ಮೆರೆಯಲಿ’ ಎಂದು ಟ್ವೀಟ್ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಹೆಚ್‍ಡಿಕೆ, ರವಿ ಪೂಜಾರಿ ಅಕ್ರಮ ಚಟುವಟಿಕೆ 2001 ರಿಂದ ಆರಂಭವಾಗಿದೆ. ರಾಜ್ಯದಲ್ಲಿ 5 ವರ್ಷ ಬಿಜೆಪಿ ಆಡಳಿತ ನಡೆಸಿದೆ. ಬಿಜೆಪಿಯವರು ಈ ಕೆಲಸ ಮಾಡಬಹುದಿತ್ತು. ಹೊರಗಿನ ದೇಶದಲ್ಲಿದ್ದರೂ ಅಲ್ಲಿನ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬಂಧಿಸಿದ್ದೇವೆ. ಕಾನೂನು ವಿಚಾರದಲ್ಲಿ ಎಲ್ಲರೂ ಸಮಾನರು. ತಪ್ಪು ಯಾರು ಮಾಡಿದ್ದರೂ ಪಕ್ಷಾತೀತವಾಗಿ ಕ್ರಮ ಕೈಗೊಳ್ಳುತ್ತೇವೆ. ನಾನು ಅಪರಾಧಿಗಳಿಗೆ ರಕ್ಷಣೆ ನೀಡುವುದಿಲ್ಲ. ನಾನು ಅಧಿಕಾರದ ಖುರ್ಚಿ ಭದ್ರವಾಗಿಟ್ಟುಕೊಳ್ಳಲು ರಾಜಿಗೆ ಒಳಗಾಗುವುದಿಲ್ಲ. ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಪೊಲೀಸರಿಗೆ ಸ್ವತಂತ್ರ ಅಧಿಕಾರ ನೀಡಿದ್ದೇನೆ. ಕಂಪ್ಲಿ ಶಾಸಕ ಗಣೇಶ್ ವಿರುದ್ಧ ಈಗಾಗಲೇ ಎಫ್‍ಐಆರ್ ದಾಖಲಾಗಿದೆ. ಪೊಲೀಸರು ಬಂಧಿಸಲು ಕ್ರಮ ಕೈಗೊಂಡಿದ್ದಾರೆ. ಇನ್ನೆರಡು ದಿನದಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ಸಹೋದರನಿಗೆ ಸಿಹಿ ಸುದ್ದಿ ಸಿಗಲಿದೆ ಎಂದರು.

Translate »