ಕೆದಮುಳ್ಳೂರು ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ
ಕೊಡಗು

ಕೆದಮುಳ್ಳೂರು ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ

February 4, 2019

ವಿರಾಜಪೇಟೆ: ಭಾರತ ದೇಶವನ್ನು ಹೊಗೆ ಮುಕ್ತ ದೇಶವನ್ನಾಗಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಾಗಿದ್ದು, ಸಮಾಜದ ಕಟ್ಟ ಕಡೆಯ ಜನರಿಗೂ ಸರಕಾರದ ಯೋಜನೆಗಳು ತಲುಪುವಂತಾಗಬೇಕೆಂದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅನುಕೂಲವಾಗಲೆಂದು ಉಚಿತ ಗ್ಯಾಸ್ ಸಿಲೇಂಡರ್‍ನ್ನು ನೀಡಲಾಗುತ್ತಿದೆ ಎಂದು ವಿರಾಜ ಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರ್ಮೆಮೊಟ್ಟೆ ಮೈದಾನ ದಲ್ಲಿ ಆಯೋಜಿಸಲಾಗಿದ್ದ ಉಜ್ವಲ್ ಯೋಜನೆಯಲ್ಲಿ 32 ಕುಟುಂಬಗಳಿಗೆ ಗ್ಯಾಸ್ ವಿತರಣಾ ಕಾರ್ಯ ಕ್ರಮದಲ್ಲಿ ಶಾಸಕ ಬೋಪಯ್ಯ ಮಾತನಾಡಿ, ಪ್ರತಿ ಯೊಬ್ಬರಿಗೂ ಸೌಲಭ್ಯಗಳು ದೊರಕಲೆಂದು ಕೇಂದ್ರ ಸರಕಾರ ಸುಮಾರು 8 ಕೋಟಿಯಷ್ಟು ಗ್ಯಾಸ್ ಸಿಲೆಂಡರ್ ನೀಡುವ ಯೋಜನೆಯನ್ನು ಹಮ್ಮಿಕೊಂ ಡಿದೆ. ಗ್ಯಾಸ್ ಪಡೆದುಕೊಂಡ ಮಹಿಳೆಯರು ಗ್ಯಾಸ್ ಬಳಕೆ ಮಾಡುವ ಬಗ್ಗೆ ಸ್ಥಳೀಯ ಏಜೆಂಟ್‍ಗಳಿಂದ ಮಾಹಿತಿ ಪಡೆದುಕೊಳ್ಳುವುದು ಉತ್ತಮ ಎಂದರು.

ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಕೇಂದ್ರ ಸರಕಾರ ಗ್ಯಾಸ್ ವಿತರಣೆಯೊಂದಿಗೆ ಮಹಿಳೆಯರಿಗೆ ಸ್ವ ಉದ್ಯೋಗ ಹಸುಗಳನ್ನು ಸಾಕುವ ಯೋಜನೆ ಇದ್ದು, ಮನೆಯಲ್ಲಿಯೇ ಕುಳಿತು ಕಾಲಹರಣ ಮಾಡುವುದಕ್ಕಿಂತ ಸಿಗುವ ಸೌಲಭ್ಯಗಳನ್ನು ಪಡೆದು ಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ದೇಶದ ಪ್ರಜೆಗಳನ್ನಾಗಿ ಮಾಡು ವಂತೆ ಮಹೇಶ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ವರ ಅವರು ಮಾತನಾಡಿ, ಕೆದಮುಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಮೂರನೆ ಹಂತದಲ್ಲಿ ಒಟ್ಟು 84 ಕುಟುಂಬಗಳಿಗೆ ಉಜ್ವಲ್ ಯೋಜನೆಯಲ್ಲಿ ಗ್ಯಾಸ್ ಸಿಲೆಂಡರ್ ವಿತರಿ ಸಲಾಗಿದೆ. ಇನ್ನು ಮುಂದಿನ ದಿನದಲ್ಲಿ 16 ಕುಟುಂಬಕ್ಕೆ ಗ್ಯಾಸ್ ವಿತರಿಸಲಾಗುವುದು ಎಂದರು. ಗ್ರಾಪಂ ಮಾಜಿ ಸದಸ್ಯ ಚೋಟು ಬಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೆದಮುಳ್ಳೂರು ಗ್ರಾಪಂ ಉಪಾಧ್ಯಕ್ಷೆ ಅನಿತಾ, ಸದಸ್ಯ ಕಿರಣ್ ಕುಮಾರ್, ಮೂರ್ನಾಡು ಭಾರತ್ ಗ್ಯಾಸ್ ಏಜೆನ್ಸಿ ಪ್ರವೀಣ್, ಬಿಜೆಪಿಯ ಎಂ.ಮಧು ದೇವಯ್ಯ ಮುಂತಾದವರು ಉಪಸ್ಥಿತರಿದ್ದರು.

Translate »