ಬಾಗಲಕೋಟೆ: ಕಾಂಗ್ರೆಸ್ ಸೇರದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಇಲ್ಲಿ ಹೇಳಿದ್ದಾರೆ.
ಜಮಖಂಡಿಯಲ್ಲಿ ಕುರುಬ ಸಮುದಾಯದ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾದೆ. ನಾನೇ ಮುಖ್ಯಮಂತ್ರಿ ಆಗಬೇಕೆಂದು ಶಾಸಕರೂ ನನ್ನನ್ನು ಬೆಂಬಲಿಸಿದರು ಎಂದರು.
ನಾನು ಮತ್ತೆ ಮುಖ್ಯಮಂತ್ರಿ ಆಗಿ ಬಿಡುತ್ತೇನೆ ಎಂದು ಹೊಟ್ಟೆಕಿಚ್ಚಿನಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದರು. ನಾನು ಅದಕ್ಕೆ ರಾಹು, ಕೇತು, ಶನಿ ಎಲ್ಲರೂ ಸೇರಿಕೊಂಡು ನನ್ನನ್ನು ಸೋಲಿಸಿದರು ಅಂತ ಹಿಂದೆ ಹೇಳಿದ್ದೆ. ಆದರೆ ಬಾದಾಮಿ ಜನ ನನ್ನ ಕೈ ಹಿಡಿದರು. ಮತ್ತೆ ರಾಜಕೀಯ ಶಕ್ತಿ ತುಂಬಿದರು. ನಾನು ಮತ್ತೆ ಮುಖ್ಯಮಂತ್ರಿ ಆಗದೇ ಇರಬಹುದು. ಆದರೆ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಉಳಿಸಿಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.