ಪಿಂಚಣಿ ಕೊಡದಿದ್ದರೆ ಬ್ಯಾಂಕ್ ಮುಂದೆ ದೇಹತ್ಯಾಗ
ಹಾಸನ

ಪಿಂಚಣಿ ಕೊಡದಿದ್ದರೆ ಬ್ಯಾಂಕ್ ಮುಂದೆ ದೇಹತ್ಯಾಗ

March 17, 2019

ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ನಿವೃತ್ತ ನೌಕರರ ಎಚ್ಚರಿಕೆ
ಹಾಸನ: ಪಿಂಚಣಿಗಾಗಿ ಆಗ್ರ ಹಿಸುತ್ತಿರುವ ಹಾಸನ ಜಿಲ್ಲಾ ಸಹಕಾರ ಬ್ಯಾಂಕ್‍ನ ನಿವೃತ್ತ ನೌಕರರು, ಒಂದೊಮ್ಮೆ ನಿವೃತ್ತಿ ವೇತನ ಕೊಡದೇ ಇದ್ದರೆ ಬ್ಯಾಂಕ್ ಮುಂದೆಯೇ ದೇಹತ್ಯಾಗ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ.

ಅತ್ಯಧಿಕ ಲಾಭದಲ್ಲಿಯೇ ಇದ್ದರೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತನ್ನ ನಿವೃತ್ತ ನೌಕರರಿಗೆ ಪಿಂಚಣಿ ನೀಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಎನ್.ಕಾಳೇಗೌಡ ದೂರಿದರು.
ರಾಜ್ಯದಲ್ಲಿ ಲಾಭದಲ್ಲಿರುವ ಎಲ್ಲಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗಳು ಪಿಂಚಣಿ ಯೋಜನೆ ಅಳವಡಿಸಿಕೊಂಡು ತಮ್ಮ ನೌಕರ ರಿಗೆ ನಿವೃತ್ತಿ ವೇತನ ಪಾವತಿಸುತ್ತಿವೆ. ಆದರೆ ರಾಜ್ಯದಲ್ಲಿ ಅತ್ಯಧಿಕ ಲಾಭದಲ್ಲಿರುವ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತನ್ನ ನಿವೃತ್ತ ನೌಕರರಿಗೆ 6 ವರ್ಷಗಳಿಂದಲೂ ಪಿಂಚಣಿ ನೀಡದೇ ಸತಾಯಿಸುತ್ತಿದೆ ಎಂದು ಆರೋಪಿಸಿದರು.

ಅಸಹಾಯಕ ಸ್ಥಿತಿಯಲ್ಲಿರುವ ನಿವೃತ್ತ ನೌಕರರಿಗೆ ಪಿಂಚಣಿ ನೀಡಲೇಬೇಕು. ಈ ವಿಚಾರವಾಗಿ ದಾವೆ ಹೂಡಿದಾಗ ರಾಜ್ಯ ಹೈಕೋರ್ಟ್ ಸಹ 30 ದಿನದೊಳಗಾಗಿ ಕ್ರಮ ಕೈಗೊಂಡು ನಿವೃತ್ತರಿಗೆ ಪಿಂಚಣಿ ನೀಡÀುವಂತೆ ಆದೇಶ ಮಾಡಿದೆ. ನಂತರ ಒಮ್ಮೆಯಷ್ಟೇ ನಿವೃತ್ತ ನೌಕರರ ಸಭೆ ಕರೆ ದಿದ್ದ ಬ್ಯಾಂಕಿನ ಆಡಳಿತ ಮಂಡಳಿ, ಬಳಿಕ ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿದೆ ಎಂದು ಆಕ್ಷೇಪಿಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗಳು ಕೇಂದ್ರ ಆದಾಯ ತೆರಿಗೆ ಇಲಾಖೆಗೆ ತಮ್ಮ ನಿವ್ವಳ ಲಾಭಾಂಶದ ಶೇ. 33.33ರಷ್ಟು ತೆರಿಗೆಯನ್ನು ಪ್ರತಿವರ್ಷ ಪಾವತಿಸಬೇಕು. ಇದನ್ನು ಮನಗಂಡ ಕೇಂದ್ರ ಸರ್ಕಾರ ಕಷ್ಟದಲ್ಲಿರುವ ನಿವೃತ್ತ ನೌಕರರಿಗೆ ತೆರಿಗೆ ಯಲ್ಲಿ ವಿನಾಯಿತಿ ನೀಡಿ ಆದೇಶಿಸಿದೆ. ನಿವೃತ್ತ ನೌಕರರ ಪಿಂಚಣಿಗೆ ಆ ಹಣ ಬಳಸಿಕೊಳ್ಳಲಿ ಎಂಬುದೇ ಕೇಂದ್ರ ಸರ್ಕಾರದ ಉದ್ದೇಶ ವಾಗಿದೆ. ಈ ಯೋಜನೆಯಲ್ಲಿ ಬ್ಯಾಂಕಿಗೆ ಸ್ವಲ್ಪವೂ ನಷ್ಟವಾಗುವುದಿಲ್ಲ. ವಾರ್ಷಿಕ ಲಾಭದ ಆದಾಯ ತೆರಿಗೆ ಆಕರಣೆ ಮಾಡು ವಾಗ ಪಿಂಚಣಿ ನಿಧಿಗೆ ಜಮಾ ಮಾಡುವ ಮೊತ್ತವನ್ನು ಬ್ಯಾಂಕ್ ಒಟ್ಟು ಆದಾಯ ದಿಂದ ಕಡಿತಗೊಳಿಸಿ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇದ ರಿಂದ ಬ್ಯಾಂಕಿಗೆ ಸಾಕಷ್ಟು ಹಣ ಉಳಿತಾಯ ವಾಗುತ್ತದೆ. ಇದರಿಂದ ಪಿಂಚಣಿ ಪಾವತಿಗೆ ಅನುಕೂಲವಾಗುತ್ತದೆ ಎಂದು ವಿವರಿಸಿದರು.

ಬ್ಯಾಂಕ್‍ನ 153 ನಿವೃತ್ತ ನೌಕರರಲ್ಲಿ ಈವರೆಗೆ 21 ಮಂದಿ ಮೃತರಾಗಿದ್ದಾರೆ. ನಿವೃತ್ತ ನೌಕರರು ಈಗ ಔಷಧಕ್ಕೂ ಹಣ ವಿಲ್ಲದೆ ಪರಿತಪಿಸುತ್ತಿದ್ದಾರೆ. ಜೀವನ ನಡೆ ಸಲೇ ಕಷ್ಟ ಪಡುತ್ತಿದ್ದಾರೆ. ಕೆಲವರಿಗಂತೂ ಸೆಕ್ಯೂರಿಟಿ ಗಾರ್ಡ್, ಮನೆಗೆಲಸ, ದಿನಗೂಲಿ ಕೆಲಸಕ್ಕೆ ಹೋಗಬೇಕಾದ ಸ್ಥಿತಿ ಬಂದಿದೆ ಎಂದು ಸಮಸ್ಯೆ ಚಿತ್ರಣ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಡಿ.ಇ.ಜನಾರ್ಧನ್, ಪ್ರಧಾನ ಕಾರ್ಯ ದರ್ಶಿ ಬ್ಯಾಟಾಚಾರ್, ನಿರ್ದೆಶಕ ಪುಟ್ಟ ರಾಜೇಗೌಡ, ಬಿ.ಎಸ್.ಯೋಗೇಶ್‍ಗೌಡ, ವ್ಯವಸ್ಥಾಪಕ ಪುಟ್ಟೇಗೌಡ ಇತರರಿದ್ದರು.

Translate »