ಸರ್ಕಾರಿ ಗೋಮಾಳ, ಪಟ್ಟಾ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ
ಚಾಮರಾಜನಗರ

ಸರ್ಕಾರಿ ಗೋಮಾಳ, ಪಟ್ಟಾ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ

October 27, 2018

ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಗೋಮಾಳ ಮತ್ತು ಪಟ್ಟಾ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದು, 2004ರಿಂದ 2007ರವರೆಗೆ ಲೋಕಲ್ ಆಡಿಟ್ ಮೇರೆ ಭಾರತದ ಆಡಿಟ್ ಮತ್ತು ಅಕೌಂಟೆಂಟ್ ಜನರಲ್ ರವರ ಆದೇಶದಂತೆ 1687 ಕೋಟಿ ರೂ. ನಷ್ಟವನ್ನು ಗಣಿಗಾರಿಕೆ ನಡೆಸಿರುವವರಿಂದ ವಸೂಲಿ ಮಾಡುವಂತೆ ಆದೇಶ ಆಗಿದ್ದರೂ ಸಹ ಜಿಲ್ಲಾಡಳಿತ ಹಣ ವಸೂಲಿ ಮಾಡಿಲ್ಲ ಎಂದು ಪರಿಸರವಾದಿ ಡಿ.ಎಸ್.ದೊರೆಸ್ವಾಮಿ ದೂರಿದರು.

ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ನಡೆಸಿ, ಪರಿಸರ ನಾಶ ಮಾಡಿರುವವರಿಂದ 1687 ಕೋಟಿ ರೂ.ಗಳನ್ನು ವಸೂಲಿ ಮಾಡುವಂತೆ ಅಕೌಂಟೆಂಟ್ ಜನರಲ್ ಅವರು ಜಿಲ್ಲಾಡಳಿತಕ್ಕೆ ಆದೇಶ ಮಾಡಿದ್ದಾರೆ. ಆದರೆ ಜಿಲ್ಲಾಡಳಿತ ಈ ಆದೇಶವನ್ನು ಪಾಲಿಸಿಲ್ಲ. ಈ ಧೋರಣೆ ಹೀಗೆಯೇ ಮುಂದುವರೆದರೆ ರಾಜ್ಯ ಸರ್ಕಾರದ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ದೂರು ನೀಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚಾ.ನಗರ ತಾಲೂಕಿನ ಜ್ಯೋತಿಗೌಡನ ಪುರ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಕಪ್ಪು ಕಲ್ಲಿನ ಗಣಿಗಾರಿಕೆ ನಡೆಸಲಾಗಿದೆ. ಆಡಿಟ್ ಮತ್ತು ಅಕೌಂಟೆಂಟ್ ವರದಿಯಲ್ಲಿ 884 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದ್ದು, ವಸೂಲಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. ಕೊಳ್ಳೇಗಾಲ ತಾಲೂಕು ಚಂಗಡಿ ಮತ್ತು ಪೊನ್ನಾಚಿ ಗ್ರಾಮಗಳ ಸರ್ಕಾರಿ ಭೂಮಿಯನ್ನು ಪಟ್ಟಾ ಭೂಮಿ ಎಂದು ಅಕ್ರಮ ಖಾತೆ ಮಾಡಿ ಗಣಿಗಾರಿಕೆ ನಡೆ ಸಲಾಗಿದೆ. ಇದರಿಂದ 792 ಕೋಟಿ ರೂ. ನಷ್ಟವಾಗಿದ್ದು, ಈ ಹಣವನ್ನು ವಸೂಲಿ ಮಾಡುವಂತೆ ಆದೇಶಿಸಲಾಗಿದೆ. ಚಾ.ನಗರ ತಾಲೂಕಿನ ಬೊಕ್ಕೆಪುರ, ಗೋಮಾಳಗಳಾದ ಹಾಗಲಬೆಲೆ, ಹರದನಹಳ್ಳಿ, ಬ್ಯಾಡಮೂಡ್ಲು, ಬಸವಾಪುರ, ಮೇಲೂರು, ವಡ್ಗಲ್‍ಪುರ, ಶಿವಪುರ, ಮಸಗಾಪುರ, ಯಲಕ್ಕೂರು, ಕೆಲ್ಲಂಬಳ್ಳಿ, ಮರಿಯಾಲ, ಬೇಡರಪುರ, ಕಾಡಹಳ್ಳಿ, ಹರವೆ, ಕಗ್ಗಲೀಪುರ, ವೀರನಪುರ, ನಂಜೇದೇವನಪುರ, ಕೊತ್ತಲವಾಡಿ, ಮುಕ್ಕಡಹಳ್ಳಿ, ಉಮ್ಮತ್ತೂರು, ಸಂತೇಮರಹಳ್ಳಿ, ಮೇಲ್ಮಾಳ, ಕುದೇರು, ಕೆಂಪನಪುರ, ಹೆಗ್ಗವಾಡಿ, ದೇಶವಳ್ಳಿ ಗ್ರಾಮಗಳಲ್ಲಿ ಇರುವ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದೆ. 65 ಜನರಿಗೆ ಒಂದು ಕೋಟಿಗೂ ಹೆಚ್ಚು ದಂಡದ ಹಣ ಸರ್ಕಾರಕ್ಕೆ ಪಾಲಿಸು ವಂತೆ ನೋಟಿಸ್ ನೀಡಲಾಗಿದೆ. ಆದರೆ ಇದುವರೆವಿಗೂ ದಂಡ ಹಣ ಪಾವತಿಸಿಲ್ಲ ಎಂದು ದೊರೆಸ್ವಾಮಿ ಆಪಾದಿಸಿದರು.

ಈ ಹಿಂದಿನ ಎಸ್ಪಿ ಕುಲದೀಪ್ ಆರ್.ಜೈನ್ 64 ಕಲ್ಲು ಗಣಿಗಾರಿಕೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಇದುವರೆವಿಗೂ ನ್ಯಾಯಾಲಯಕ್ಕೆ ದೋಷಾ ರೋಪಣೆ ಪಟ್ಟಿ ಸಲ್ಲಿಸಿಲ್ಲ ಎಂದು ದೂರಿದ ಅವರು, ಜಿಲ್ಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಗಣಿ ಗಾರಿಕೆ ನಡೆಸಲು ಗುತ್ತಿಗೆದಾರರಿಗೆ ಪರವಾ ನಗಿ ನೀಡಲಾಗುತ್ತಿದೆ ಎಂದರು.

ಜಿಲ್ಲಾಡಳಿತ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕ ಬೇಕು. ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ವಂಚನೆ ಮಾಡಿರುವವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸುವಂತೆ ಆದೇಶ ಮಾಡಬೇಕು. ಇಲ್ಲವಾದರೆ ರಾಜ್ಯ ಸರ್ಕಾರದ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಎನ್.ಚಿನ್ನಸ್ವಾಮಿ, ಮಾದಾಪುರ ರವಿ, ಕಟ್ನವಾಡಿ ಹರೀಶ್ ಕುಮಾರ್, ಕಾಡಹಳ್ಳಿ ಚಿನ್ನಸ್ವಾಮಿ ಸುದ್ದಿ ಗೋಷ್ಟಿಯಲ್ಲಿ ಹಾಜರಿದ್ದರು.

Translate »