ಅಕ್ರಮ ಕಳ್ಳಭಟ್ಟಿ ತಯಾರಿಕೆ: ಮೂವರ ಬಂಧನ
ಕೊಡಗು

ಅಕ್ರಮ ಕಳ್ಳಭಟ್ಟಿ ತಯಾರಿಕೆ: ಮೂವರ ಬಂಧನ

March 22, 2019

ಸೋಮವಾರಪೇಟೆ: ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಡಿ.ಕೆ. ಲಿಂಗರಾಜು ಎಂಬಾತನ ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಅದೇ ಗ್ರಾಮದ ಹೆಚ್.ಡಿ. ಲಿಂಗರಾಜು, ಡಿ.ಎಸ್.ಕೀರ್ತಿ ಅವರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆ ಸಂದರ್ಭ 14 ಲೀಟರ್ ಕಳ್ಳಭಟ್ಟಿ, 3 ಬಾಟಲ್ ರಮ್, 24 ಲೀಟರ್ ಪುಳಿಗಂಜಿ ಸೇರಿದಂತೆ ಕಳ್ಳಭಟ್ಟಿ ತಯಾರಿಸಲು ಬಳಸಲ್ಪಡುತ್ತಿದ್ದ ಪಾತ್ರೆ, ಬಿಂದಿಗೆಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ದಿನಕರ್ ಶೆಟ್ಟಿ, ವೃತ್ತ ನಿರೀಕ್ಷಕ ನಂಜುಂಡೇಗೌಡ, ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಎಸ್‍ಐ ಮೋಹನ್ ರಾಜ್, ಸಿಬ್ಬಂದಿಗಳಾದ ದಯಾನಂದ್, ಪ್ರಕಾಶ್, ಜೋಸೆಫ್, ಸಜಿ, ಸುರೇಶ್, ಅರುಣ್, ವಿಶ್ವ, ಶಿವಕುಮಾರ್, ಜಗದೀಶ್, ಪ್ರವೀಣ್, ಶಂಕರ್ ಅವರುಗಳು ಭಾಗವಹಿಸಿದ್ದರು.
ಮಡಿಕೇರಿ ವರದಿ: ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅದನ್ನು ಲೆಕ್ಕಿಸದೇ ಅಬಕಾರಿ ಕಾಯಿದೆ ಉಲ್ಲಂಘಿಸಿದ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಅಬಕಾರಿ ಇಲಾಖೆ ಅಧಿಕಾರಿಗಳು 11.790 ಲೀ. ಮದ್ಯವನ್ನು ಪಶಕ್ಕೆ ಪಡೆದಿದ್ದರೆ.

ವಿರಾಜಪೇಟೆ ವಲಯದ ಅಬಕಾರಿ ನಿರೀಕ್ಷಕರು ಗಸ್ತು ತಿರುಗುವ ಸಂದರ್ಭ ದೊರೆತ ಖಚಿತ ಮಾಹಿತಿ ಆಧರಿಸಿ, ಬಿಳಿಗುಂದ ಗ್ರಾಮದಲ್ಲಿ ದಾಳಿ ನಡೆಸಿ 10 ಲೀ. ಕಳ್ಳಭಟ್ಟಿ ಯನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳಭಟ್ಟಿ ಕಾಯಿಸುತ್ತಿದ್ದ, ಓರ್ವ ಆರೋಪಿಯನ್ನು ಕೂಡ ದಸ್ತಗಿರಿ ಮಾಡಲಾಗಿದೆ. ಅಬಕಾರಿ ಇಲಾಖೆ ಮೂಲಕ ವಶಕ್ಕೆ ಪಡೆಯಲಾದ ಮದ್ಯದ ಮೊತ್ತ 3605 ರೂ.ಗಳೆಂದು ಅಬಕಾರಿ ಇಲಾಖೆ ತಿಳಿಸಿದೆ. ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ಒಟ್ಟು 9 ಆರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಲಾಗಿದ್ದು, ಈ ಪೈಕಿ 2 ಘೋರ ಮತ್ತು 9 ಇತರೆ ಪ್ರಕರಣಗಳೆಂದು ವಿಂಗಡಿಸಲಾಗಿದೆ.

ಚುನಾವಣಾ ನೀತಿ ಸಂಹಿತೆ ಮುಕ್ತಾಯವಾಗುವವರೆಗೆ ಅಬಕಾರಿ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ದಿನದ 24 ಗಂಟೆಗಳ ಕಾಲ ಶಾಶ್ವತ ಮತ್ತು ತಾತ್ಕಾಲಿಕ ತಪಾಸಣಾ ಕೇಂದ್ರಗಳಲ್ಲಿ ನಿಯೋಜಿಸಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Translate »