ಸೋಮವಾರಪೇಟೆ: ಅಕ್ರಮವಾಗಿ ಶ್ರೀಗಂಧವನ್ನು ಶೇಖರಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿಸಿದ್ದಾರೆ.
ಬಜೆಗುಂಡಿ ಗ್ರಾಮದ ನಿವಾಸಿ ಸುದೀಪ್(ಸುಧೀರ್), ಪಿ.ಕೆ. ಸುರೇಶ್ (ಸೂರಿ), ಯಡವ ನಾಡು ಗ್ರಾಮದ ಎನ್.ಡಿ. ಹೇಮಕುಮಾರ್ ಬಂಧಿತ ಆರೋಪಿಗಳಾಗಿದ್ದು, ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸುರೇಶ್ ಅವರ ಮನೆಯ ಸುತ್ತಮುತ್ತ ಶೇಖರಿಸಿ ಟ್ಟಿದ್ದ ಶ್ರೀಗಂಧವನ್ನು ಗರಗಂದೂರು ಗ್ರಾಮದ ಬಾಪುಟ್ಟಿ ಎಂಬವರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ನೇತೃತ್ವದ ತಂಡ ದಾಳಿ ನಡೆಸಿದೆ. ಬಂಧಿತರು ನೀಡಿದ ಹೇಳಿಕೆಯನ್ನಾಧರಿಸಿ ಬಾಪುಟ್ಟಿ ಮೇಲೂ ಮೊಕದ್ದಮೆ ದಾಖಲಿಸಲಾಗಿದೆ.
ಬಂಧಿತರಿಂದ ಸುಮಾರು 89 ಕೆ.ಜಿ. ಶ್ರೀಗಂಧವನ್ನು ಪತ್ತೆ ಹಚ್ಚಲಾಗಿದ್ದು, ಬೈಕ್ ಹಾಗೂ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಫಾರೆಸ್ಟರ್ ಚಂದ್ರೇಶ್, ಶ್ರೀಕಾಂತ್, ಚೇತನ್, ಚಾಲಕ ಚಂದ್ರು ಅವರುಗಳು ಭಾಗವಹಿಸಿದ್ದರು.