ಮೈಸೂರು: ಮೈಸೂರಿನಲ್ಲಿ ಆತಂಕ ಸೃಷ್ಟಿಸಿರುವ ಸರಗಳ್ಳರ ಹೆಡೆಮುರಿ ಕಟ್ಟಲು ಮುಂದಾಗಿರುವ ಪೊಲೀಸರು, ಶುಕ್ರವಾರ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಖದೀಮರನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಮಾನಂದವಾಡಿ ರಸ್ತೆಯ ನಾಚನಹಳ್ಳಿ ಪಾಳ್ಯದ ನಿವಾಸಿ ಅಬ್ದುಲ್ ರಹೀಂ ಮಗ ಮೊಹಮದ್ ಸಮೀವುಲ್ಲಾ(25), ಗಾಂಧಿನಗರ ಅಣ್ಣಮ್ಮ ದೇವಾ ಲಯ ರಸ್ತೆಯ ಅಕ್ರಂ ಪಾಷಾ ಪುತ್ರ ಮಹಮದ್ ಅಬ್ರಾನ್ ಅಲಿಯಾಸ್ ಅಬ್ಬು(21), ರಾಜೇಂದ್ರನಗರದ ಮಹಮದ್ ಅಕ್ರಂ ಪುತ್ರ ಮಹಮದ್ ಇದ್ರೀಸ್ ಅಲಿಯಾಸ್ ಕಲ್ಯಾಣ್(20) ಹಾಗೂ ಲೇಟ್ ಎಕ್ಬಾಲ್ ಪಾಷಾ ಪುತ್ರ ಮಹಮದ್ ಖಾಷಿಫ್ ಅಲಿಯಾಸ್ ಬಡಾಬಾಯಿ(21) ಬಂಧಿತ ಸರಗಳ್ಳರು. ಇವರಿಂದ ಒಟ್ಟು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ-1: ಮೈಸೂರಿನ ವಿದ್ಯಾರಣ್ಯಪುರಂನ ನಾಗರತ್ನ ಎಂಬುವರಿಂದ ಸರ ಕಿತ್ತುಕೊಂಡು ಪರಾರಿಯಾಗಿದ್ದ ನಾಚನಹಳ್ಳಿ ಪಾಳ್ಯದ ನಿವಾಸಿ ಮೊಹಮದ್ ಸಮೀವುಲ್ಲಾ(25)ನನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿ, ಸುಮಾರು 19,000 ರೂ. ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಜೆ.ಪಿ.ನಗರದ ಕವಿತಾ ಬೇಕರಿ ಬಳಿ ಚಿನ್ನದ ಸರ ಮಾರಾಟ ಮಾಡಲೆತ್ನಿಸುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಮೇ 2ರಂದು ವಿದ್ಯಾ ರಣ್ಯಪುರಂ `ಸಿ’ ಬ್ಲಾಕ್‍ನ ಮಹದೇವಪುರದಲ್ಲಿ ವಾಯುವಿಹಾರದಲ್ಲಿದ್ದ ನಾಗರತ್ನ ಎಂಬು ವರ ಕೊರಳಿನಿಂದ ಸಹಪಾಠಿ ಜಬಿಉಲ್ಲಾ ಜೊತೆ ಸೇರಿ 15 ಗ್ರಾಂ ಚಿನ್ನದ ಸರ ಅಪಹರಿಸಿದ್ದೆವು. ನಂತರ ಇಬ್ಬರೂ ಸರವನ್ನು ಹಂಚಿಕೊಂಡಿದ್ದೆವು ಎಂದು ತಿಳಿಸಿದ್ದಾನೆ. ವಿದ್ಯಾರಣ್ಯಪುರಂ ಠಾಣೆ ಇನ್ಸ್‍ಪೆಕ್ಟರ್ ಎಂ.ಎನ್.ರವಿಶಂಕರ್, ಎಎಸ್‍ಐ ಶಾಂತ ಕುಮಾರ್, ಸಿಬ್ಬಂದಿಗಳಾದ ಮಹೇಶ್ವರ್, ನಟರಾಜ್, ಕೆ.ಟಿ.ಮಂಜುನಾಥ, ಬಿ.ಕೆ. ಗೋವಿಂದರಾಜು ಅವರು ಆರೋಪಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪ್ರಕರಣ-2: ಸಿಸಿಬಿ ಪೊಲೀಸರು `ಆಪರೇಷನ್ ಫಾಸ್ಟ್ ಟ್ರ್ಯಾಕ್’ ಗಸ್ತಿನಲ್ಲಿದ್ದಾಗ ಸರಗಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ. ಯರಗನಹಳ್ಳಿ ಹೊಸ ಬಡಾವಣೆ, ರಾಜಕುಮಾರ್ ರಸ್ತೆ, ಶ್ರೀ ಸಿದ್ಧಿ ವಿನಾಯಕ ದೇವಾಲಯ ಸಮೀಪದ ರಸ್ತೆಯಲ್ಲಿ ಚಿನ್ನದ ಸರ ಮಾರಾಟ ಮಾಡಲು ಯತ್ನಿಸುತ್ತಿದ್ದ ಗಾಂಧಿನಗರ ನಿವಾಸಿ ಮಹಮದ್ ಅಬ್ರಾನ್‍ನನ್ನು ಬಂಧಿಸಿ, 35ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವನ್ನು ವಶಪಡಿಸಿಕೊಂಡಿದ್ದಾರೆ. ಈತ 2 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಡಿಸಿಪಿ ಎಂ.ಮುತ್ತುರಾಜ್ ಮಾರ್ಗದರ್ಶನ, ಸಿಸಿಬಿ ಎಸಿಪಿ ವಿ.ಮರಿಯಪ್ಪ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಸಿ.ಕಿರಣ್‍ಕುಮಾರ್, ಎಎಸ್‍ಐ ಚಂದ್ರೇಗೌಡ, ಸಿಬ್ಬಂದಿ ರಾಮಸ್ವಾಮಿ, ಎಂ.ಆರ್.ಗಣೇಶ್, ರಾಜೇಂದ್ರ, ನಿರಂಜನ್, ಆನಂದ್ ಹಾಗೂ ಗೌತಮ್ ಕಾರ್ಯಾಚರಣೆ ನಡೆಸಿ, ಖದೀಮನನ್ನು ಬಂಧಿಸಿದ್ದಾರೆ.
ಪ್ರಕರಣ-3: ಮೇಟಗಳ್ಳಿ ಠಾಣೆ ಪೊಲೀಸರು, ನರಸಿಂಹರಾಜ ವಿಭಾಗದ ವಿಶೇಷ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ, ಇಬ್ಬರು ಸರಗಳ್ಳರನ್ನು ಬಂಧಿ ಸಿದ್ದು, ಅವರಿಂದ 75 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿ ಕೊಂಡಿದ್ದಾರೆ. ರಾಜೇಂದ್ರನಗರ ನಿವಾಸಿಗಳಾದ ಮಹಮದ್ ಇದ್ರೀಸ್ ಹಾಗೂ ಮಹಮದ್ ಖಾಷಿಫ್ ಬಂಧಿತರು. ಮೈಸೂರು-ಬೆಂಗಳೂರು ಹಳೇ ರಸ್ತೆಯ ದಂಡೀ ಮಾರಮ್ಮ ದೇವಾಲಯದ ಬಳಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಇವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, 2018ರ ಅಕ್ಟೋ ಬರ್‍ನಲ್ಲಿ ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ 30 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಮಾಹಿತಿ ಮೇರೆಗೆ ಗಿರವಿ ಇಟ್ಟಿದ್ದ ಸರ ಹಾಗೂ ಬಜಾಜ್ ಡಿಸ್ಕವರ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಎನ್.ಅರ್.ವಿಭಾಗದ ಎಸಿಪಿ ಧರಣೀಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೇಟಗಳ್ಳಿ ಇನ್‍ಸ್ಪೆಕ್ಟರ್ ರಾಘವೇಂದ್ರಗೌಡ, ಸಬ್ ಇನ್‍ಸ್ಪೆಕ್ಟರ್ ವಿಶ್ವನಾಥ್, ಎಎಸ್‍ಐ ಜಯರಾಂ, ಸಿಬ್ಬಂದಿ ಲಿಂಗರಾಜಪ್ಪ, ಮಹದೇವಪ್ಪ, ಸುರೇಶ್, ಜೀವನ್, ಚಂದ್ರಕಾಂತ ತಳವಾರ್, ಸ್ವಾಮಾರಾಧ್ಯ, ಕೃಷ್ಣ, ಹನುಮಂತ ಕಲ್ಲೇದ್, ರಮೇಶ್, ಈರಣ್ಣ ಹಾಗೂ ಆಶಾ ಪಾಲ್ಗೊಂಡಿದ್ದರು. ಸರಗಳ್ಳರನ್ನು ಸೆರೆ ಹಿಡಿದ ತಂಡಗಳನ್ನು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಪ್ರಶಂಸಿಸಿದ್ದಾರೆ.