ಮೊದಲ ಹಂತದಲ್ಲಿ ಜಿಟಿಡಿ, ರೇವಣ್ಣ, ಪುಟ್ಟರಾಜು, ಬಂಡೆಪ್ಪ, ಫಾರೂಕ್ ಇತರರಿಗೆ ಜೆಡಿಎಸ್‍ನಿಂದ ಸಚಿವರಾಗುವ ಯೋಗ
ಮೈಸೂರು

ಮೊದಲ ಹಂತದಲ್ಲಿ ಜಿಟಿಡಿ, ರೇವಣ್ಣ, ಪುಟ್ಟರಾಜು, ಬಂಡೆಪ್ಪ, ಫಾರೂಕ್ ಇತರರಿಗೆ ಜೆಡಿಎಸ್‍ನಿಂದ ಸಚಿವರಾಗುವ ಯೋಗ

June 5, 2018

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಹು ಅಂತರದಿಂದ ಪರಾಭವಗೊಳಿಸಿದ ಜಿ.ಟಿ. ದೇವೇಗೌಡ, ಹೆಚ್.ಡಿ. ರೇವಣ್ಣ, ಸಿ.ಎಸ್. ಪುಟ್ಟರಾಜು ಸೇರಿದಂತೆ 24 ಮಂದಿಯನ್ನು ಬುಧವಾರ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.

ಎಂತಹ ಸನ್ನಿವೇಶದಲ್ಲೂ ಪಕ್ಷದಲ್ಲೇ ಗುರುತಿಸಿಕೊಂಡಿರುವ ಕುರುಬ ಸಮು ದಾಯದ ಬಂಡೆಪ್ಪ ಕಾಶಂಪೂರ್ ಅವ ರಿಗೆ ಮಂತ್ರಿಗಿರಿ ನೀಡಲು ನಿರ್ಧರಿಸಿರುವು ದರಿಂದ ವಿಶ್ವನಾಥ್ ಅವರಿಗೆ ಮೊದಲ ಸುತ್ತಿನಲ್ಲಿ ಅವಕಾಶ ದೊರೆಯುತ್ತಿಲ್ಲ.

ಜೆಡಿಎಸ್ ವತಿಯಿಂದ ವಿಧಾನಸಭೆಗೆ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಆಯ್ಕೆಗೊಳ್ಳದಿದ್ದರೂ, ಇತ್ತೀಚೆಗೆ ಪರಿಷತ್ತಿಗೆ ಆಯ್ಕೆಯಾಗಿರುವ ಬಿ.ಎಂ. ಫಾರೂಕ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಕುಮಾರ ಸ್ವಾಮಿ ಅವರು ನಿರ್ಧರಿಸಿದ್ದಾರೆ. ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಸ್ವಂತ ರಾಮ ನಗರ ಕ್ಷೇತ್ರದಲ್ಲೇ ಆ ವರ್ಗಕ್ಕೆ ಸೇರಿದ ಶೇ. 96 ರಷ್ಟು ಮತಗಳು ತಮಗೆ ಲಭ್ಯವಾಗದಿ ದ್ದರೂ, ಸಂಪುಟದಲ್ಲಿ ಫಾರೂಕ್ ಅವರಿಗೆ ಪ್ರಾತಿನಿಧ್ಯ ಕಲ್ಪಿಸಲು ನಿರ್ಧರಿಸಿದ್ದಾರೆ.

ತಮ್ಮ ಪಕ್ಷಕ್ಕೆ ಸಂಪುಟದಲ್ಲಿ ಮುಖ್ಯ ಮಂತ್ರಿ ಸೇರಿದಂತೆ 12 ಸ್ಥಾನಗಳು ಮಾತ್ರ ಲಭ್ಯವಾಗಿರುವುದರಿಂದ ಈ ಸ್ಥಾನಗಳನ್ನು ಅಳೆದು ಸುರಿದು, ಎಲ್ಲಾ ಜಾತಿ ಮತ್ತು ತಮ್ಮ ಜಿಲ್ಲಾ ವ್ಯಾಪ್ತಿ ಪ್ರಾತಿನಿಧ್ಯ ಕಲ್ಪಿಸಬೇಕಾಗಿರು ವುದರಿಂದ ಕುಮಾರಸ್ವಾಮಿ ಅವರು, ಕಳೆದ ಮೂರು ದಿನಗಳಿಂದ ವಿಸ್ತರಣೆ ಕಸರತ್ತು ನಡೆಸಿದ್ದಾರೆ.

ಮೊದಲ ಹಂತದಲ್ಲಿ ಮೈಸೂರು, ಮಂಡ್ಯ, ಹಾಸನ, ಬೀದರ್, ರಾಯಚೂರು, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಾತಿನಿಧ್ಯ ಕಲ್ಪಿಸುತ್ತಿದ್ದಾರೆ. ಕೊನೆಯ ಹಂತದಲ್ಲಿ ಮಂಡ್ಯ ಜಿಲ್ಲೆಗೆ ಎರಡು ಸ್ಥಾನ ದಕ್ಕಿದರೂ ಆಶ್ಚರ್ಯಪಡಬೇಕಾಗಿಲ್ಲ. ಎರಡನೇ ಹಂತದ ವಿಸ್ತರಣೆ ಸಂದರ್ಭದಲ್ಲಿ ಒಂದು ಸ್ಥಾನ ಉಳಿಸಿಕೊಂಡು ಉಳಿದ ಸ್ಥಾನಗಳನ್ನು ಭರ್ತಿ ಮಾಡಲಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‍ಗೆ 22 ಸ್ಥಾನಗಳು ಲಭ್ಯವಾಗಿದ್ದು, ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಈಗಾಗಲೇ ಮಂತ್ರಿ ಮಂಡಲಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜಕೀಯ ಲೆಕ್ಕಾಚಾರಕ್ಕೆ ಅನುಗುಣವಾಗಿ ಕಾಂಗ್ರೆಸ್ 6 ರಿಂದ 7 ಸ್ಥಾನಗಳನ್ನು ಉಳಿಸಿಕೊಂಡು, ಉಳಿದ ಸ್ಥಾನಗಳನ್ನು ಭರ್ತಿ ಮಾಡಲಿದೆ.

ಕಾಂಗ್ರೆಸ್ ವತಿಯಿಂದ ಸಂಪುಟಕ್ಕೆ ಯಾರು ಸೇರ್ಪಡೆ ಮಾಡಬೇಕೆಂಬುದರ ಬಗ್ಗೆ ರಾಜ್ಯ ಉಸ್ತುವಾರಿ ಹೊಣೆ ಹೊತ್ತ ವೇಣುಗೋಪಾಲ್ ಈಗಾಗಲೇ ದೆಹಲಿ ವರಿಷ್ಠರಿಗೆ ಪಟ್ಟಿ ರವಾನೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಂತ್ರಿಗಾಗಿ ದೆಹಲಿಯಲ್ಲಿ ಯಾರೂ ಲಾಬಿ ಮಾಡಬಾರದೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ ಕಟ್ಟಾದೇಶ ಮಾಡಿರುವ ಹಿನ್ನೆಲೆಯಲ್ಲಿ ವೇಣುಗೋಪಾಲ್ ರಾಜ್ಯದ ಪ್ರಮುಖ ಮುಖಂಡರೊಟ್ಟಿಗೆ ಸಮಾಲೋಚಿಸಿ, ಒಟ್ಟಾರೆ ಅಭಿಪ್ರಾಯದಂತೆ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಇದೇ ಮೂಲಗಳು ಹೇಳಿವೆ. ಕಾಂಗ್ರೆಸ್‍ನಲ್ಲಿ ಮಂತ್ರಿ ಸ್ಥಾನಕ್ಕಾಗಿ ಭಾರೀ ಒತ್ತಡವಿದೆ. ಆದರೆ ಎಲ್ಲರಿಗೂ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ. ಕೆಲವು ಆಕಾಂಕ್ಷಿಗಳಿಗೆ ಪಕ್ಷದ ಹುದ್ದೆಗಳನ್ನು ನೀಡಿ, ಅವರ ಮನವೊಲಿಸುವ ಕಾರ್ಯ ಮಾಡಲಿದ್ದಾರೆ ಎಂದು ಕೇಳಿ ಬರುತ್ತಿದೆ. ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳ ಉಸ್ತುವಾರಿಯನ್ನು ಅದೇ ಪಕ್ಷಕ್ಕೆ ಬಿಟ್ಟುಕೊಡುವುದು, ಉಳಿದಂತೆ ಕಾಂಗ್ರೆಸ್ ಮಂತ್ರಿಗಳು ಹೆಚ್ಚು ಜಿಲ್ಲೆಗಳ ಉಸ್ತುವಾರಿ ಹೊಣೆ ವಹಿಸಿಕೊಳ್ಳಲಿದ್ದಾರೆ.

Translate »