ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರ ಉದ್ಘಾಟನೆ
ಕೊಡಗು

ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರ ಉದ್ಘಾಟನೆ

April 23, 2019

ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ 9 ರಿಂದ 16 ವರ್ಷದ ಮಕ್ಕಳಿಗೆ ಮೇ 6 ರವರೆಗೆ ಉಚಿತವಾಗಿ ಬೇಸಿಗೆ ಶಿಬಿರದ ಕಾರ್ಯಕ್ರಮವನ್ನು ನಗರದ ಸ್ತ್ರೀಶಕ್ತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶಿಬಿರದ ಉದ್ಘಾಟನಾ ಸಮಾರಂಭವು ಸೋಮವಾರ ನಡೆಯಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಈಗಿನ ಕಾಲದಲ್ಲಿ ಮಕ್ಕಳು ಅಜ್ಜಿ ಮನೆಗೆ ಹೋಗುವ ಪರಿಪಾಠ ತುಂಬಾ ವಿರಳ. ಮಕ್ಕಳು ಅಪ್ಪ, ಅಮ್ಮನ ಜೊತೆ ಬೆಳೆಯುತ್ತಾರೆ, ಅಪ್ಪ, ಅಮ್ಮ ಮತ್ತು ಮಕ್ಕಳು ಇವಿಷ್ಟೇ ಕುಟಂಬವಾಗಿ ಬಿಟ್ಟಿದೆ. ಆದುದರಿಂದ ಮಕ್ಕಳನ್ನು ಬೇರೆ ಕಡೆ ಕಳುಹಿಸಲು ಹೆದರುತ್ತಾರೆ. ಮನೆಯಲ್ಲಿ ದ್ದರೂ ಸಹ ಮಕ್ಕಳಿಗೆ ಉತ್ತಮ ವಾತಾವರಣ ಇರುವುದಿಲ್ಲ. ಟಿ.ವಿ., ಮೊಬೈಲ್‍ಗಳಲ್ಲಿಯೇ ಆಟವಾಡುತ್ತಿದ್ದು, ಯಾಂತ್ರಿಕ ಬದುಕು ನಡೆಸುತ್ತಿರುತ್ತಾರೆ. ಕೂಡು ಕುಟುಂಬಗಳು ಕಾಣಸಿಗು ವುದೇ ಅಪರೂಪ. ಅದಕ್ಕಾಗಿ ಪೋಷಕರು ಇಂತಹ ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸಬೇಕು. ಪೋಷಕರು ಮಕ್ಕಳಿಗೆ ಮಣ್ಣನ್ನು ಮುಟ್ಟಬಾರದು, ಮಣ್ಣಿನಲ್ಲ್ಲಿ ಆಟವಾಡಬಾರದು ಎನ್ನುತ್ತಾರೆ. ಆದರೆ ಮಣ್ಣು ಪ್ರಾಕೃತಿಕ ದತ್ತವಾದದ್ದು, ಮಣ್ಣಿನಲ್ಲಿ ಅನೇಕ ವಿಧದ ಪೋಷಕಾಂಶಗಳಿವೆ. ಮಣ್ಣಿನಲ್ಲಿ ಆಟಿಕೆಗಳನ್ನು ಮಾಡಬಹುದು ಎಂದು ತಿಳಿಸಿದರು. ಅದರಂತೆ ಯಕ್ಷಗಾನ ಕಲೆಯನ್ನು ಹೊಗಳುತ್ತಾ, ಬೇಸಿಗೆ ಶಿಬಿರದಲ್ಲಿ ಯಕ್ಷಗಾನ ಕಲೆಯನ್ನು ಹೇಳಿಕೊಡುವುದು ಒಳ್ಳೆಯ ಉದ್ದೇಶ. ಈ ಕಲೆಯನ್ನು ಮಕ್ಕಳೆಲ್ಲರೂ ಕಲಿತುಕೊಳ್ಳಿ ಎಂದು ತಿಳಿಸಿದರು.

ಜಿಪಂ ಸಿಇಒ ಕೆ. ಲಕ್ಷ್ಮಿಪ್ರಿಯಾ ಅವರು ಮಾತನಾಡಿ 15 ದಿವಸದ ಬೇಸಿಗೆ ಶಿಬಿರದಲ್ಲಿ ಮಧ್ಯಾಹ್ನದವರೆಗೆ ಯೋಗ, ಸಮೂಹ ನೃತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಕರಕುಶಲ, ಜೇಡಿ ಮಣ್ಣಿನ ಕಲೆ, ಕಸದಿಂದ ರಸ, ಜ್ಯುವೆಲ್ಲರಿ ಮೇಕಿಂಗ್ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅವುಗಳಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗುವ ಅನಾಹುತಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಯೂನಿಸೆಪ್ ಸಂಸ್ಥೆಯಿಂದ ತರಬೇತಿ. ಬೆಂಕಿ ಅನಾಹುತವುಂಟಾದಾಗ ಮುನ್ನೆಚ್ಚರಿಕೆ ಕ್ರಮ, ಅನಿರೀಕ್ಷಿತ ಅಪಘಾತವಾದಾಗ ಪ್ರಥಮ ಚಿಕಿತ್ಸೆಯನ್ನು ಮಕ್ಕಳೇ ಮಾಡುವ ಬಗ್ಗೆ ತರಬೇತಿ, ಟ್ರಾಫಿಕ್ ನಿಯಮದ ಬಗ್ಗೆ ಅರಿವು ಕಾರ್ಯಕ್ರಮ, ಆಯುರ್ವೇದ ವೈದ್ಯ ಪದ್ಧತಿಗಳ ಬಗ್ಗೆ ಮಾಹಿತಿ, ಗಾಳಿಪಟ ಉತ್ಸವ ಹೊರಾಂಗಣ ಆಟ, ಹೊರ ಸಂಚಾರ, ಸ್ವಚ್ಛ ಭಾರತ ಕಾರ್ಯಕ್ರಮ, ಶ್ರಮದಾನ, ಕನ್ನಡ ಪದಸಂಪತ್ತು, ಪವಾಡ ಬಯಲು ಬಗ್ಗೆ ಮಾಹಿತಿ, ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ, ಮಕ್ಕಳ ಚಲನಚಿತ್ರ ಪ್ರದರ್ಶನ ಇದರ ಪ್ರಯೋಜನವನ್ನು ಮಕ್ಕಳು ಹಾಗೂ ಮಕ್ಕಳ ಪೋಷಕರು ಪಡೆದುಕೊಳ್ಳುವಂತೆ ತಿಳಿಸಿದರು.

ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ರಾಮಚಂದ್ರ, ಅವರು ಆರ್ಯುವೇದ ವೈದ್ಯ ಪದ್ಧತಿಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ನೀನಾಸಂ ತಂಡದವರಾದ ಸುನೀಲ ಹಾಗೂ ಚೇತನ್ ಅವರು 15 ದಿನಗಳ ಕಾಲ ನಡೆಯುವ ಬೇಸಿಗೆ ಶಿಬಿರ ದಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಕಲಿಸಿಕೊಡಲಿರುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾದ ಅರುಂಧತಿ ಟಿ.ಎಸ್., ಅವರು ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳಾದ ಸತ್ಯಭಾಮ ಕೆ.ವಿ.ಅವರು ನಿರೂಪಿಸಿದರು. ಜಯಂತಿ ಪಿ.ಕೆ. ವಂದಿಸಿದರು.

Translate »