ಪ್ರವಾಸದಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚಳ: ಆರ್.ಎಂ.ರಾಜಪ್ಪ
ಚಾಮರಾಜನಗರ

ಪ್ರವಾಸದಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚಳ: ಆರ್.ಎಂ.ರಾಜಪ್ಪ

July 7, 2018

ಚಾಮರಾಜನಗರ: ಪ್ರವಾಸಗಳ ಮೂಲಕ ಮಕ್ಕಳಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಹೊರಗಿನ ಪ್ರಪಂಚದ ಜ್ಞಾನ ಮತ್ತು ಅರಿವು ಹೆಚ್ಚಾಗುತ್ತದೆ ಎಂದು ನಗರಸಭೆ ಉಪಾಧ್ಯಕ್ಷ ಆರ್.ಎಂ. ರಾಜಪ್ಪ ಅಭಿಪ್ರಾಯಪಟ್ಟರು.

ತಾಲೂಕು ಭಾರತ ಸೇವಾದಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಸಹಯೋಗದಲ್ಲಿ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬದನಗುಪ್ಪೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಅರಣ್ಯ ವೀಕ್ಷಣೆ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅರಣ್ಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಪ್ರವಾಸ ಕೈಗೊಳ್ಳುವುದರಿಂದ ವನ್ಯಜೀವಿಗಳ ಕುರಿತು ಅಪಾರ ಜ್ಞಾನ ಹಾಗೂ ಸಸ್ಯ ಸಂಪತ್ತಿನ ಬಗ್ಗೆ ಅರಿವು ಬೆಳೆಸಿಕೊ ಳ್ಳಲು ಸಹಾಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳನ್ನು ವರ್ಷಕ್ಕೆ ಕನಿಷ್ಟ ಎರಡು ಬಾರಿಯಾದರೂ ಅರಣ್ಯಪ್ರದೇಶಗಳತ್ತ ಪ್ರವಾಸ ಕರೆದೊಯ್ಯಬೇಕು. ತಾಲೂಕು ಭಾರತ ಸೇವಾದಳ, ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ಇಂತಹ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.

ತಾಲೂಕು ಭಾರತ ಸೇವಾದಳದ ಅಧ್ಯಕ್ಷ ಸಿ.ಎಂ. ನರಸಿಂಹ ಮೂರ್ತಿ ಮಾತನಾಡಿ, ಪ್ರವಾಸ ಕಾರ್ಯಕ್ರಮಗಳು ಮಕ್ಕಳಲ್ಲಿ ಹೊಸ ಚೈತನ್ಯ ನೀಡುತ್ತವೆ. ದಿನಪೂರ್ತಿ ನಾಲ್ಕು ಗೋಡೆಗಳ ಮಧ್ಯೆ ಪಾಠಪ್ರವಚನಗಳಲ್ಲಿಯೇ ಮುಳುಗುವ ಮಕ್ಕಳು ಪ್ರವಾಸ ಕೈಗೊಳ್ಳುವುದರಿಂದ ಪರಿಸರದ ಬಗ್ಗೆ, ಹೊರನಾಡಿನ ಬಗ್ಗೆ ಅರಿವು ಹೊಂದಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಗರಸಭೆ ಸದಸ್ಯ ಕೃಷ್ಣಪ್ಪ, ಕಸಾಪ ಜಿಲ್ಲಾ ಕಾರ್ಯದರ್ಶಿ ಜಿ. ರಾಜಪ್ಪ, ತಾಲೂಕು ಕಸಾಪ ಅಧ್ಯಕ್ಷ ಬಿ. ಬಸವರಾಜು, ಭಾರತ ಸೇವಾದಳದ ಜಿಲ್ಲಾ ಸಂಘಟಕ ಈರಯ್ಯ, ತಾಲೂಕು ಅಧಿನಾಯಕ ನಾಗಣ್ಣ ಹಾಗೂ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Translate »