ಮೈಸೂರು ವಿವಿ ಅಕ್ರಮಗಳ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ಎಚ್ಚರಿಕೆ
ಮೈಸೂರು

ಮೈಸೂರು ವಿವಿ ಅಕ್ರಮಗಳ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ಎಚ್ಚರಿಕೆ

October 4, 2018

ಮೈಸೂರು:  ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಕ್ರಮಗಳ ಸರಣಿಯೇ ನಡೆದಿದ್ದು, ಅದರ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಜಂಟಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್, ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕಲು ಪೊಲೀಸ್ ದರ್ಪ ಬಳಸಲಾಗಿದೆ. ಈ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದರು. ಖಾಯಂ ಕುಲಪತಿಗಳೇ ಇಲ್ಲದಿರುವುದ ರಿಂದ ವಿವಿಯಲ್ಲಿ ಅರಾಜಕತೆ ಉಂಟಾಗಿದೆ ಎಂದು ದೂರಿದರು. ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮಾತನಾಡಿ, ಉದ್ಯೋಗಿಗಳ ಅಕ್ರಮ ನೇಮ ಕಾತಿಯ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ವಿವಿಗೆ ಕಾಯಂ ಕುಲಪತಿ ನೇಮಿಸಬೇಕು. ಸಿಂಡಿಕೇಟ್ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲಿಸಬೇಕು. ವಿದ್ಯಾರ್ಥಿಗಳ ಮೇಲೆ ಹಾಕಿರುವ ಎಫ್‍ಐಆರ್‍ಗಳನ್ನು ರದ್ದುಪಡಿಸಬೇಕು.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಮಾಜಿ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಮತ್ತು ಹಾಲಿ ಕುಲಸಚಿವ ಪ್ರೊ.ಆರ್.ರಾಜಣ್ಣ ವಿರುದ್ಧ ರಾಜ್ಯಪಾಲರ ಆದೇಶದಂತೆ ಎಫ್‍ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು. ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲೆಯ ಇತರೆ ಸಚಿವರು ಕೂಡಲೇ ಕ್ರಮ ಜರುಗಿಸದಿದ್ದರೆ ದಸರಾ ಉದ್ಘಾಟನೆಗೆ ಆಗಮಿಸುವ ಮುಖ್ಯಮಂತ್ರಿಗಳ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಾಜಿ ಮೇಯರ್ ಪುರುಷೋತ್ತಮ್, ಉಗ್ರನರಸಿಂಹ, ವಿದ್ಯಾರ್ಥಿ ಹೋರಾಟಗಾರ ವಸಂತ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »