ಚುಂಚನಕಟ್ಟೆ ಶ್ರೀರಾಮ ದೇವಾಲಯಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಭೇಟಿ
ಮೈಸೂರು

ಚುಂಚನಕಟ್ಟೆ ಶ್ರೀರಾಮ ದೇವಾಲಯಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಭೇಟಿ

October 12, 2018

ಚುಂಚನಕಟ್ಟೆ: ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವಾಲಯಕ್ಕೆ ಗುರುವಾರ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ವೇಳೆ ಇಲ್ಲಿನ ಐತಿಹ್ಯ ಮತ್ತು ವಿಶೇಷತೆ ಗಳ ಬಗ್ಗೆ ಮಾಹಿತಿ ಪಡೆದರಲ್ಲದೆ, ಗ್ರಾಮಸ್ಥರು ಮತ್ತು ಭಕ್ತಾಧಿಗಳ ಜತೆ ಮುಕ್ತವಾಗಿ ಮಾತುಕತೆ ನಡೆಸಿ ಅವರ ಜೀವನ ಶೈಲಿಯ ಬಗ್ಗೆ ಕುಶಲೋಪರಿ ವಿಚಾರಿಸಿದರು.

ಬುಧವಾರ ನಾಡಹಬ್ಬ ದಸರಾ ಉದ್ಘಾಟನೆ ನೆರವೇರಿಸಿದ ಸುಧಾಮೂರ್ತಿ ಅವರು ಚುಂಚನಕಟ್ಟೆಗೆ ಆಗಮಿಸಿದ್ದು, ಅವರ ಸರಳತೆ ಮತ್ತು ಸಾರ್ವಜನಿಕರ ಮೇಲಿನ ಮಮತೆ ಮೂಕವಿಸ್ಮಿತರನ್ನಾಗಿಸಿತು.

ಅಸಮಾಧಾನ: ದೇವಾಲಯದ ಸುತ್ತಮುತ್ತ ಸ್ವಚ್ಛತೆ ಇಲ್ಲದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಧಾಮೂರ್ತಿ ಅವರು, ಕಾವೇರಿ ನದಿಯಲ್ಲಿ ಸ್ನಾನಘಟ್ಟ ನಿರ್ಮಾಣ ಮಾಡದಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು. ಈ ಸಂಬಂಧ ಸರ್ಕಾರದ ಪ್ರಮುಖರೊಂದಿಗೆ ಮಾತನಾಡುವುದರ ಜತೆಗೆ ದೇವಾಲಯದ ಅಭಿವೃದ್ಧಿಗೆ ವೈಯಕ್ತಿಕವಾಗಿಯೂ ಸಹಾಯ ಮಾಡುವ ಭರವಸೆ ನೀಡಿದರು.

ಈ ವೇಳೆ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕೆಲಹೊತ್ತು ದೇವಾಲಯದ ಆವರಣದಲ್ಲಿ ಕಾಲ ಕಳೆದರು. ತಾಲೂಕು ಆಡಳಿತ ವತಿಯಿಂದ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ರಾಮಲಿಂಗೇಶ್ವರ ದೇವಾಲಯಕ್ಕೆ ಭೇಟಿ : ಆನಂತರ ಸುಧಾಮೂರ್ತಿ ಅವರು ಚುಂಚನ ಕಟ್ಟೆ ಹೋಬಳಿ ಹೊಸೂರು ಸಮೀಪದ ಶ್ರೀ ರಾಮಲಿಂಗೇಶ್ವರ ದೇವಾಲಯಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಹೇಶ್, ಉಪ-ತಹಸೀಲ್ದಾರ್ ಪುಟ್ಟ ಮಾದಯ್ಯ, ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದ್ರ ಮೋಹನ್, ಮುಜರಾಯಿ ಇಲಾಖೆಯ ನಾಗಶ್ರೀ ಮತ್ತಿತರರು ಹಾಜರಿದ್ದರು.

Translate »