ಮೈಸೂರು: ನಾಡ ಹಬ್ಬ ದಸರಾ ಅಂಗವಾಗಿ ಎರಡು ಕಡೆ ಆಹಾರ ಮೇಳದ ಆಯೋಜಿಸಿದ್ದು, ಆಹಾರ ಪ್ರಿಯರಿಗೆ ಇನ್ನಷ್ಟು ಖಾದ್ಯಗಳನ್ನು ಉಣಬಡಿಸಲು ಗನ್‍ಹೌಸ್ ಆವರಣ ದಲ್ಲೂ ಆಹಾರ ಮೇಳಕ್ಕೆ ಚಾಲನೆ ನೀಡಲಾಯಿತು.
ನಾಗಾರ್ಜುನ್ ಗ್ರೂಪ್ ವತಿಯಿಂದ ಆಯೋಜಿಸಿರುವ ಆಹಾರಮೇಳಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು. ಕೋಡಿಮಠದ ಶಿವಯೋಗಿ ಶಿವಾನಂದ ಸ್ವಾಮೀಜಿ, ಸಾಯಿ ಅವಧೂತ ಅರ್ಜುನ್ ಗುರೂಜಿ, ಮಾಜಿ ಸಚಿವ ಎ.ಮಂಜು, ಶಾಸಕ ಎಸ್.ಎ.ರಾಮದಾಸ್, ನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ನಾಗಾರ್ಜುನ್ ಗ್ರೂಪ್‍ನ ಮುಖ್ಯಸ್ಥೆ ಸುನಂದ ಗಿರೀಶ್ ಉಪಸ್ಥಿತರಿದ್ದರು.
24 ಮಳಿಗೆ: ನ.11ರವರೆಗೆ ನಡೆಯುವ ಆಹಾರ ಮೇಳದಲ್ಲಿ ಗ್ರಾಮೀಣ ಮತ್ತು ಪಾರಂಪರಿಕ ಶೈಲಿಗಳು, ದಕ್ಷಿಣ ಕರ್ನಾಟಕ ಆಹಾರ ಪದ್ಧತಿ, ಉತ್ತರ ಕರ್ನಾಟಕ ಆಹಾರ ಪದ್ಧತಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ, ಆಂಧ್ರ, ಕೇರಳ, ತಮಿಳುನಾಡು, ಮರಾಠಿ ಶೈಲಿ ಯಲ್ಲಿ ಸಸ್ಯಹಾರಿ ಮತ್ತು ಶಾಖಾಹಾರಿ ಆಹಾರ ಪದ್ಧತಿ, ಕರಾವಳಿ, ಕೊಡಗು, ಮಲೆ ನಾಡು ಶೈಲಿ, ಚೈನೀಸ್, ಇಟಾಲಿಯನ್ ಆಹಾರ ಪದ್ಧತಿ ಶೈಲಿಯ ಆಹಾರವನ್ನು ಪ್ರವಾಸಿಗರು ಸವಿಯಬಹುದಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಪ್ರತಿದಿನ ಸಂಜೆ ಸಾಂಸ್ಕೃತಿಕ ಕಲಾ ತಂಡಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಜತೆಗೆ ಮಕ್ಕಳ ಆಟಿಕೆಗಳನ್ನು ನಿಯೋಜಿಸಲಾಗಿದೆ.