ಮೈಸೂರು: ಗಾಣಿಗ ಸಮುದಾಯ ಸೇರಿದಂತೆ ಪ್ರವರ್ಗ `2ಎ’ ವ್ಯಾಪ್ತಿಗೆ ಬರುವ ಸಣ್ಣಸಣ್ಣ ಸಮುದಾಯಗಳಿಗೆ ಒಳಮೀಸಲಾತಿ ನೀಡಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಮೈಸೂರಿನ ಪುರಭವನದಲ್ಲಿ ಮೈಸೂರು ಜಿಲ್ಲಾ ಗಾಣಿಗರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳಲ್ಲಿ ಬಹುತೇಕ ಸಣ್ಣ ಸಮುದಾಯಗಳು ತೀರ ಹಿಂದಿವೆ. ಇವುಗಳು ಬಲಾಢ್ಯ ಸಮುದಾಯಗಳ ನಡುವೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಕಾಣುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಇಂತಹ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಲು ಸಿಎಂ ಕುಮಾರಸ್ವಾಮಿ ಆಲೋಚನೆ ನಡೆಸಿದ್ದಾರೆ. ಈ ಸಂಬಂಧ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೊಂದಿಗೆ ಚರ್ಚಿಸಿರುವ ಅವರು ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ಚರ್ಚಿಸಿ, ಜಾರಿಗೆ ತರಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ದುಡುಕಬಾರದು: ಎಂತಹ ಕಠಿಣ ಸಂದರ್ಭ ಎದುರಾದರೂ ವಿದ್ಯಾರ್ಥಿ ಸಮುದಾಯ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಯಾವುದೇ ಸನ್ನಿವೇಶವಾದರೂ ಧೈರ್ಯವಾಗಿ ಎದುರಿಸಬೇಕು. ವ್ಯಾಸಂಗದ ವೇಳೆ ಜ್ಞಾನ ಸಂಪಾದನೆ ಹಾಗೂ ಸಾಧನೆ ವಿದ್ಯಾರ್ಥಿಗಳ ಗುರಿಯಾಗಿರಬೇಕು ಎಂದು ಸಾ.ರಾ.ಮಹೇಶ್ ಕಿವಿ ಮಾತು ಹೇಳಿದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ಯಾವುದೇ ಸಮುದಾಯ ಒಗ್ಗಟ್ಟಾಗಿದ್ದರೆ ಮಾತ್ರ ಸರ್ಕಾರಗಳ ಗಮನ ಸಳೆದು ಸೌಲಭ್ಯ ಪಡೆಯಲು ಸಾಧ್ಯ. ಹೀಗಾಗಿ ಗಾಣಿಗ ಸಮುದಾಯದಂತಹ ಸಣ್ಣ ಸಮಾಜಗಳು ಸಂಘಟಿತರಾಗಿ ತಮ್ಮ ಸವಲತ್ತುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಯುವ ಜನರು ರಾಜಕೀಯ ಶಕ್ತಿ ಅರಿಯಬೇಕು: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್‌ನ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ನಮ್ಮ ಸಮುದಾಯ ಸೇರಿದಂತೆ ಸಣ್ಣಸಣ್ಣ ಜಾತಿಗಳು ಮುಖ್ಯವಾಹಿನಿಗೆ ಬರಬೇಕೆಂದರೆ, ಸಮುದಾಯದಲ್ಲಿನ ಯುವ ಸಮೂಹ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ವಿಶೇಷವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಆಯ್ಕೆಯಾಗಲು ಮುಂದಾಗಬೇಕು. ಹಿಂದುಳಿದ ವರ್ಗದವನಾದ ನಾನು ಮಂತ್ರಿಯಾಗಿ ಗಾಣಿಗ ಸಮುದಾಯನ್ನು ಪ್ರವರ್ಗ 2 ಸೇರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ಭಾರೀ ವಿರೋಧ ನಡುವೆ ಸ್ಥಳೀಯ ಮೀಸಲಾತಿ ಜಾರಿಗೆ ತಂದೆ. ನಾನು ರಾಜಕೀಯದಲ್ಲಿ ಸಕ್ರಿಯವಾಗಿದ್ದ ಕಾರಣಕ್ಕೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಹೀಗಾಗಿ ಯುವ ಸಮೂಹ ರಾಜಕೀಯ ಶಕ್ತಿಯನ್ನು ಅರಿಯಬೇಕು ಎಂದು ತಿಳಿಸಿದರು.
ಇದೇ ವೇಳೆ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದ ಗಾಣಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಲ್ಲೆಯ ಒಟ್ಟು 100ಕ್ಕೂ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದರು. ಇದರೊಂದಿಗೆ ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಅಶ್ವಿನ್‍ಕುಮಾರ್, ಮಹದೇವ್ ಅವರನ್ನು ಸನ್ಮಾನಿಸಲಾಯಿತು. ಮೈಸೂರು ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಉಮೇಶ್, ಗೌರವಾಧ್ಯಕ್ಷ ಎನ್.ಪಾಪಣ್ಣ, ಕಾರ್ಯದರ್ಶಿ ಎನ್.ಟಿ.ಶ್ರೀನಿವಾಸ್, ನಗರ ಉಪಾಧ್ಯಕ್ಷ ಡಿ.ಮಹದೇವ ಮತ್ತಿತರರು ಹಾಜರಿದ್ದರು.
ಓಬಿಸಿಗಳೆಲ್ಲಾ ಒಗ್ಗಟ್ಟಾಗಿ…
ಹಿಂದುಳಿದ ವರ್ಗಗಳಲ್ಲಿ ಒಗ್ಗಟ್ಟಿಲ್ಲ. ಇದರಿಂದ ಸರ್ಕಾರ ಹಿಂದುಳಿದ ವರ್ಗವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಯಾವುದೇ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲು ಹಿಂದುಳಿದ ವರ್ಗಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಆದರೆ ಈ ವರ್ಗಗಳಲ್ಲಿ ಪ್ರಶ್ನಿಸುವ, ಒಕ್ಕೊರಲಿನಿಂದ ಹೋರಾಟ ಮಾಡುವ ಮನೋಧರ್ಮ ಇಲ್ಲವಾಗಿದೆ. ಹೀಗಾಗಿ ಗಾಣಿಗ ಸಮುದಾಯ ಮಾತ್ರವಲ್ಲದೆ, ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯಗಳು ಜಾಗೃತರಾಗಿ ಒಗ್ಗಟ್ಟಾಗಬೇಕು. – ಬಿ.ಜೆ.ಪುಟ್ಟಸ್ವಾಮಿ