ತ್ಯಾಜ್ಯದಿಂದ ಶೀಘ್ರದಲ್ಲೇ ವಿದ್ಯುತ್ ತಯಾರಿಕಾ ಘಟಕ ಸ್ಥಾಪನೆ: ಶಾಸಕ ಎಸ್.ಎ.ರಾಮದಾಸ್
ಮೈಸೂರು

ತ್ಯಾಜ್ಯದಿಂದ ಶೀಘ್ರದಲ್ಲೇ ವಿದ್ಯುತ್ ತಯಾರಿಕಾ ಘಟಕ ಸ್ಥಾಪನೆ: ಶಾಸಕ ಎಸ್.ಎ.ರಾಮದಾಸ್

August 6, 2018

ಮೈಸೂರು:  ಮೈಸೂರಿನ ವಿದ್ಯಾರಣ್ಯಪುರಂ ಮತ್ತು ಸುತ್ತಮುತ್ತಲಿನ ನಾಗರಿಕರ ಭಾರೀ ವಿರೋಧಕ್ಕೆ ಕಾರಣವಾಗಿದ್ದ ಸುಯೆಜ್‍ಫಾರಂ ತ್ಯಾಜ್ಯ ಘಟಕದಿಂದ ಹೊರಸೂಸುವ ದುರ್ವಾಸನೆಯನ್ನು ತಡೆಗಟ್ಟಲು ಶಾಸಕ ಎಸ್.ಎ.ರಾಮದಾಸ್ ಅವರು ಮುಂದಾಗಿದ್ದು, ಸುಯೆಜ್ ಫಾರಂ ಆವರಣದಲ್ಲಿಯೇ ಹಳೇ ಕಸದಿಂದ ವಿದ್ಯುತ್ ಉತ್ಪಾದಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಘನ ತ್ಯಾಜ್ಯವನ್ನು ಸಂಸ್ಕರಿಸುವ ಹೊಸ ಕಾರ್ಯಕ್ಕೆ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಬೆಳಿಗ್ಗೆ ಮೈಸೂರಿನ ಸಿವೇಜ್ ಫಾರಂ ಆವರಣದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿವೇಜ್ ಫಾರಂನಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯವನ್ನು ಸಂಸ್ಕರಿಸಿ ಅದರಿಂದ ಗೊಬ್ಬರ ಉತ್ಪಾದನೆ ಜೊತೆಗೆ ವಿದ್ಯುತ್ ಉತ್ಪಾದಿಸುವ ಘಟಕ ಪ್ರಾರಂಭಿಸಲು ಪ್ರಯತ್ನಗಳು ನಡೆದಿವೆ. ಇಲ್ಲಿ 2.5 ಎಕರೆ ಪ್ರದೇಶದಲ್ಲಿ ತೋಡಲಾಗಿರುವ ದೊಡ್ಡ ಗುಂಡಿಯಲ್ಲಿ 80 ಸಾವಿರ ಟನ್‍ನಷ್ಟು ಹಳೇ ಕಸವನ್ನು 35 ಅಡಿ ಎತ್ತರದವರೆಗೆ ತುಂಬಿ, ಅದರ ಮೇಲೆ ಮಣ್ಣು ಹಾಕಲಾಗುವುದು. ಇದಕ್ಕೆ ಅಂದಾಜು 76 ದಿನಗಳಾದರೂ ಬೇಕಾಗುತ್ತದೆ. ತ್ಯಾಜ್ಯದಿಂದ ಹೊರಸೂಸುವ ದುರ್ವಾಸನೆ ತಡೆಗಟ್ಟಲು ಅದರ ಮೇಲೆ ಸುವಾಸನೆ ಬೀರುವ ಸಸಿಗಳನ್ನು ನೆಡಲಾಗುವುದು. ಕಸದಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಕೃಷಿ ಚಟುವಟಿಕೆಗಳಿಗೆ ಮಾರಾಟ ಮಾಡಲಾಗುವ ಜೊತೆಗೆ ಉಳಿದ ಕಸವನ್ನು ರಸ್ತೆಯ ಡಾಂಬರು, ಇಟ್ಟಿಗೆ ಮತ್ತು ಟೈಲ್‍ಗಳನ್ನು ತಯಾರಿಸಲು ಬಳಸಲಾಗುವುದು ಎಂದರು.

ಕೆಸರೆಯಲ್ಲಿ 210 ಟನ್, ರಾಯನಕೆರೆಯಲ್ಲಿ 150 ಟನ್‍ನಷ್ಟು ಗೊಬ್ಬರ ಘಟಕ ನಿರ್ಮಿಸಲು ಸರ್ಕಾರದ ಅನುಮತಿಯೂ ದೊರೆತಿದೆ. ಅಲ್ಲದೆ ಗೊಬ್ಬರ ತಯಾರಿಕಾ ಜಾಗದ ಮಣ್ಣು, ನೀರಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಯೇ ಎಂದು ಪರಿಶೀಲಿಸಿ ಈಗಾಗಲೇ ಡಿಪಿಎ ತಯಾರಿಸಲಾಗಿದೆ. ಇದಕ್ಕೆ ಪರಿಸರ ಇಲಾಖೆಯಿಂದ ಕ್ಲಿಯರೆನ್ಸ್ ತೆಗೆದುಕೊಂಡಿದ್ದೇವೆ. ಮುಂದಿನ ತಿಂಗಳ ಒಳಗಾಗಿ ಜಾಗತಿಕ ಟೆಂಡರ್ ಕರೆಯುವ ಸಾಧ್ಯತೆ ಇದೆ ಎಂದರು.

ರಾಯನಕೆರೆ, ಕೆಸರೆ ಘಟಕ ಸೇರಿದಂತೆ ಸಿವೇಜ್ ಫಾರಂನ ಹೊಸ ಘಟಕ ನವೀಕರಣ ಸೆರಿದಂತೆ ಒಟ್ಟಾರೆ 51.7 ಕೋಟಿ ರೂ.ಗಳ ಅಂದಾಜು ತಯಾರಿಸಲಾಗಿದ್ದು, ಕೇಂದ್ರ, ರಾಜ್ಯ ಸರ್ಕಾರದಿಂದ ಹಣ ಪಡೆಯಲಾಗುವುದು. ಈ ಸಂಬಂಧ ಆ.7ರಂದು ತಾವು ನವದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಕೇಂದ್ರದಿಂದ ಹಣವನ್ನು ಹೊಂದಿಸಲಾಗುವುದು ಎಂದು ಹೇಳಿದರು.

400 ಮೆಟ್ರಿಕ್ ಟನ್‍ನಷ್ಟು ಕಸ ಪ್ರತಿ ದಿನವೂ ಬರುತ್ತಿದ್ದು, ಇಲ್ಲಿ ವಿಲೇವಾರಿ ಮಾಡಲು ಆಗುವುದು ಕೇವಲ 150 ಟನ್ ಮಾತ್ರ. ಈ ಕಾರಣದಿಂದ ಉಳಿದ ಕಸವನ್ನು ರಾಶಿ, ರಾಶಿ ಸುರಿಯುವ ಮೂಲಕ ಶೇಖರಣೆ ಆಗುತ್ತಿತ್ತು. ಇದರ ಜೊತೆಯಲ್ಲಿ ಪ್ರಾಣಿಗಳ ತ್ಯಾಜ್ಯ ಹಾಗೂ ಆಸ್ಪತ್ರೆಯ ತ್ಯಾಜ್ಯವನ್ನು ಸಹ ಇಲ್ಲಿಯೇ ಹಾಕಲಾಗುತ್ತಿತ್ತು. ಕೊಳೆತು ನಾರುವ ಪರಿಸರ ಮಾಲಿನ್ಯದಿಂದ ವಿದ್ಯಾರಣ್ಯಪುರಂ ಮತ್ತು ಸುತ್ತಮುತ್ತಲಿನ ನಿವಾಸಿಗಳ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ದೊಡ್ಡ ಹೋರಾಟವೇ ನಡೆಸಲಾಗಿತ್ತು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ದಾಖಲಾಗಿತ್ತು. ಸದ್ಯಕ್ಕೆ ಕೇವಲ 150 ಟನ್ ಅಷ್ಟೇ ವಿಲೇವಾರಿ ಮಾಡಲು ಅನುಮತಿ ಇದ್ದು, ಅಷ್ಟೇ ಕಸ ಒಳಗೆ ಬರಬೇಕು ಎಂದು ಹೋರಾಟ ಕೈಗೊಳ್ಳಲಾಗಿತ್ತು. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ವಿಷನ್ ಅಡಿಯಲ್ಲಿ ಹಣ ಬಿಡುಗಡೆ ಮಾಡಲು ಅವಕಾಶವಿದ್ದು, ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ತಾವು ಜಿಲ್ಲಾ ಮಂತ್ರಿಯಾಗಿದ್ದ ಸಮಯದಲ್ಲಿ ಕಸದಿಂದ ವಿದ್ಯುತ್ ತಯಾರಿಸುವ ಯೋಜನೆಯ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು, ಈಗ ಅಧಿಕಾರಿಗಳು ಚಾಲನೆ ನೀಡಿದ್ದು, ಈಗಾಗಲೇ ಡಿಪಿಆರ್‍ನ ಅನುಮತಿ ಪಡೆದು ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಪಡೆಯಲಾಗಿದೆ. ಇದಕ್ಕೆ 10 ಕೊಟಿ ರೂ. ನೀಡಲು ಕೇಂದ್ರ ಸರ್ಕಾರ ಒಪ್ಪಿದ್ದು, ರಾಜ್ಯ ಸರ್ಕಾರ ಕೂಡ 9 ಕೋಟಿ ರೂ. ನೀಡಬೇಕಿದೆ ಎಂದರು.

ರಾಷ್ಟ್ರೀಯ ಪರಿಸರ ಮಾಲಿನ್ಯ ಮಂಡಳಿ ಮತ್ತು ಕೇಂದ್ರದ ಸ್ವಚ್ಛ ಭಾರತ್ ಮಿಷನ್ ಸಂಯುಕ್ತವಾಗಿ ಕೇಂದ್ರ ಸರ್ಕಾರದಿಂದ ಮಣ್ಣು ಮುಚ್ಚಲು ಹಣ ಮಂಜೂರು ಮಾಡಲು ಒಪ್ಪಿದ್ದಾರೆ. ಇಂದು ತಡವಾಗಿಯಾದರೂ ಈ ಕಾರ್ಯ ಪ್ರಾರಂಭವಾಗಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಶಾಸಕರು, 76 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಜಾಗತಿಕ ಟೆಂಡರ್ ನೀಡಲು ಪ್ರಯತ್ನಗಳು ನಡೆದಿದ್ದು, ಈಗಾಗಲೇ ಎರಡು ಮೂರು ಕಂಪನಿಗಳು ಸ್ಥಳ ಪರಿಶೀಲಿಸಿ ಹೋಗಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಅಧೀಕ್ಷಕ ಇಂಜಿನಿಯರ್ ಸುರೇಶ್, ಎಇಇ ಲಕ್ಷ್ಮೇಗೌಡ, ಪರಿಸರ ಇಂಜಿನಿಯರ್ ಪೂರ್ಣಿಮಾ, ಸಹಾಯಕ ಇಂಜಿನಿಯರ್ ರಂಜಿತಾ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

Translate »