ಶಾಸಕ ರಾಮದಾಸ್‍ರ ಮುಂದುವರಿದ ಪಾದಯಾತ್ರೆ: ಜನರ ಸಮಸ್ಯೆ ಆಲಿಕೆ, ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
ಮೈಸೂರು

ಶಾಸಕ ರಾಮದಾಸ್‍ರ ಮುಂದುವರಿದ ಪಾದಯಾತ್ರೆ: ಜನರ ಸಮಸ್ಯೆ ಆಲಿಕೆ, ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ

August 6, 2018

ಮೈಸೂರು:  ಶಾಸಕ ಎಸ್.ಎ.ರಾಮದಾಸ್ ಅವರು ಭಾನುವಾರ ತಮ್ಮ ಕ್ಷೇತ್ರ ವ್ಯಾಪ್ತಿಯ 31ನೇ ವಾರ್ಡ್ (ಹಳೇ ವಾರ್ಡ್ ಸಂಖ್ಯೆ 9) ನೆಲ್ಲೂರು ಶೆಡ್ಡು ಕಾಲೋನಿ, ಅಂಬೇಡ್ಕರ್ ಕಾಲೋನಿಗಳಲ್ಲಿ ಪಾದಯಾತ್ರೆ ಕೈಗೊಂಡು ಜನರಿಂದ ಅಹವಾಲು ಆಲಿಸಿದರು.

ನೆಲ್ಲೂರು ಶೆಡ್ಡು ಕಾಲೋನಿಯಿಂದ ಪಾದಯಾತ್ರೆ ಆರಂಭಿಸಿದ ವೇಳೆ ಅಲ್ಲಿ ಮನೆಗಳನ್ನು ಕಟ್ಟಿಸಿಕೊಡುವುದಾಗಿ ಇದ್ದ ಮನೆಗಳನ್ನು ಒಡೆದು ಹಾಕಿದ್ದು, ಇದುವರೆಗೂ ಮನೆಗಳನ್ನು ನಿರ್ಮಿಸಿಕೊಡದಿರುವ ಬಗ್ಗೆ ದೂರು ಆಲಿಸಿದ ಶಾಸಕರು ಈ ಸಂಬಂಧ ಸ್ಮಂ ಬೋರ್ಡ್ ವಿರುದ್ಧ ಎಸಿಬಿಗೆ ದೂರು ನೀಡಲು ನಿರ್ಧರಿಸಿದರು.

ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಪಟ್ಟಲದಮ್ಮ ದೇವಸ್ಥಾನಕ್ಕೆ ನೀಡಿದ್ದ 2 ಲಕ್ಷ ರೂ. ಬಳಕೆಯಾಗದೆ ವಾಪಸ್ ಹೋಗಿದ್ದು, ಮುಂದೆ ದೇವಸ್ಥಾನದ ಅಭಿವೃದ್ಧಿಗೆ ನೆರವಾಗುವಂತೆ ಶಾಸಕರಲ್ಲಿ ಅಲ್ಲಿನ ನಿವಾಸಿಗಳು ಮನವಿ ಮಾಡಿದರು.

ಅಂಬೇಡ್ಕರ್ ಕಾಲೋನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಮನೆಯೊಂದು ತುಂಬಾ ಶಿಥಿಗೊಂಡಿರುವುದನ್ನು ಗಮನಿಸಿದ ಅವರು ಈ ಕುಟುಂಬಕ್ಕೆ ಯಾವುದಾದರೂ ಯೋಜನೆಯಡಿ ಮನೆ ನಿರ್ಮಿಸಿಕೊಡಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು. ಚಿಕ್ಕಗರಡಿಗೆಯಲ್ಲಿ ಶಿಥಿಲವಾದ ವ್ಯಾಯಾಮ ಶಾಲೆಯ ಛಾವಣಿ ನಿರ್ಮಿಸಿಕೊಡಲು ಸಹ ಸೂಚಿಸಿದರು.

ಅಂಬೇಡ್ಕರ್ ಮುಖ್ಯ ರಸ್ತೆಯ ಫುಟ್‍ಪಾತ್‍ನಲ್ಲಿ 6 ತಿಂಗಳ ಹಿಂದೆ ಹಾಕಿದ್ದ ಇಂಟರ್ ಲಾಕಿಂಗ್ ವ್ಯವಸ್ಥೆ ಕಳಪೆಯಿಂದ ಕೂಡಿದ್ದು ತಿರುಗಾಡಲು ತೊಂದರೆಯಾಗಿರುವ ಬಗ್ಗೆ ನಿವಾಸಿಗಳು ದೂರಿದರು. ಸಮಸ್ಯೆ ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಶಾಸಕರೊಂದಿಗೆ ನಗರಪಾಲಿಕೆ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.

Translate »