ಚೆಲುವಾಂಬ ಪಾರ್ಕ್ ಬಳಿ ಹೂವಿನ ವ್ಯಾಪಾರಕ್ಕೆ ಸ್ಥಳೀಯರ ಆಕ್ಷೇಪ ಮತ್ತೆ ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಿಗಳು
ಮೈಸೂರು

ಚೆಲುವಾಂಬ ಪಾರ್ಕ್ ಬಳಿ ಹೂವಿನ ವ್ಯಾಪಾರಕ್ಕೆ ಸ್ಥಳೀಯರ ಆಕ್ಷೇಪ ಮತ್ತೆ ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಿಗಳು

August 6, 2018

ಮೈಸೂರು:  ಮೈಸೂರಿನ ವಾಲ್ಮೀಕಿ ರಸ್ತೆಯಿಂದ ಚೆಲುವಾಂಬ ಪಾರ್ಕ್ ಬಳಿ ಸ್ಥಳಾಂತರಗೊಂಡಿದ್ದ ಹೂವಿನ ವ್ಯಾಪಾರಿಗಳಿಗೆ ಮತ್ತೆ ಸಂಕಟ ಉಂಟಾಗಿದ್ದು, ಪಾರ್ಕ್‍ನ ಅಂದ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹೂವಿನ ವ್ಯಾಪಾರಿಗಳಿಗೆ ಒಂಟಿಕೊಪ್ಪಲು ನಿವಾಸಿಗಳು ಅವಕಾಶ ನಿರಾಕರಿಸಿರುವುದರಿಂದ ಮತ್ತೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ.

ವಾಲ್ಮೀಕಿ ರಸ್ತೆಯಲ್ಲಿ ಮಹಾರಾಣಿ ವಾಣಿಜ್ಯ ಕಾಲೇಜು ಈ ಶೈಕ್ಷಣಿಕ ಸಾಲಿನಿಂದ ಆರಂಭವಾಗಿರುವುದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಲ್ಮೀಕಿ ರಸ್ತೆಯ ಬದಿಯಲ್ಲಿದ್ದ 8 ಹೂವಿನ ಮಳಿಗೆಗಳು, ಟೀ ಸ್ಟಾಲ್ ಅನ್ನು ಸ್ಥಳಾಂತರ ಮಾಡುವುದಕ್ಕೆ ಸೂಚನೆ ನೀಡಲಾಗಿತ್ತು. ವಿದ್ಯಾರ್ಥಿನಿಯರ ಹಿತ ದೃಷ್ಟಿಯಿಂದ ನಗರ ಪಾಲಿಕೆಯ ಸೂಚನೆಯ ಮೇರೆಗೆ ಕಳೆದ 10 ದಿನದಿಂದ ಹೂವಿನ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಪರ್ಯಾಯ ಸ್ಥಳ ಗುರುತಿಸಿಕೊಡುವಂತೆ ಕೋರಿಕೆ ಸಲ್ಲಿಸಿದ್ದರು. ಇದರಿಂದ ವಾಲ್ಮೀಕಿ ರಸ್ತೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಎಂಟು ಮಳಿಗೆಗಳನ್ನು ಚೆಲುವಾಂಬ ಪಾರ್ಕ್ ಬಳಿ ರಸ್ತೆ ಬದಿ ವ್ಯಾಪಾರ ಮಾಡುವಂತೆ ನಗರ ಪಾಲಿಕೆ ಸೂಚನೆ ನೀಡಿತ್ತು. ಆದರೆ ಇದೀಗ ಒಂಟಿಕೊಪ್ಪಲ್ ನಿವಾಸಿಗಳು ಚೆಲುವಾಂಬ ಪಾರ್ಕ್ ಬಳಿ ಹೂವಿನ ವ್ಯಾಪಾರ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರ ಪಾಲಿಕೆಯ ಸೂಚನೆಯ ಮೇರೆಗೆ ಚೆಲುವಾಂಬ ಪಾರ್ಕ್ ಬಳಿ ರಸ್ತೆ ಬದಿ ಹೂವಿನ ವ್ಯಾಪಾರ ಆರಂಭಿಸುವುದಕ್ಕೆ ತೆರಳಿದ ವ್ಯಾಪಾರಿಗಳಿಗೆ ಒಂಟಿಕೊಪ್ಪಲ್ ನಿವಾಸಿಗಳು ತಡೆಯೊಡ್ಡಿದ್ದಾರೆ. ಚೆಲುವಾಂಬ ಪಾರ್ಕ್ ಸುತ್ತ ಸುಂದರವಾದ ವಾತಾವರಣವಿದೆ.

ಹಿರಿಯ ನಾಗರೀಕರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಪಾರ್ಕ್‍ಗೆ ಬಂದು ವಾಯುವಿಹಾರ ಮಾಡುತ್ತಾರೆ. ಆದರೆ ಹೂವಿನ ಮಾರಾಟ ಮಳಿಗೆಗೆ ಪಾರ್ಕ್ ಸುತ್ತ ಅವಕಾಶ ನೀಡಿದರೆ ಸುತ್ತಲಿನ ವಾತಾವರಣ ಕಲುಷಿತಗೊಳ್ಳುತ್ತದೆ. ಅಲ್ಲದೆ ವಾಯುವಿಹಾರಕ್ಕೆ ಬರುವವರಿಗೆ ಕಿರಿಕಿರಿಯಾಗುತ್ತದೆ ಎಂದು ಆರೋಪಿಸಿರುವ ನಿವಾಸಿಗಳು, ಹೂವುಗಳ ಮಾರಾಟ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ. ಇದರಿಂದ ಮತ್ತೆ ಹೂವಿನ ವ್ಯಾಪಾರಿಗಳಿಗೆ ಹೊಸ ಸಮಸ್ಯೆ ಉದ್ಭವಿಸಿದೆ.

ಈ ಕುರಿತು ಹೂವಿನ ವ್ಯಾಪಾರಿ ಈರಣ್ಣ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮಹಾರಾಣಿ ಕಾಲೇಜಿನ ಪ್ರಾಂಶುಪಾಲರು ಬಂದು ಹೂವಿನ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಸ್ಥಳಾಂತರ ಮಾಡುವಂತೆ ಕೋರಿಕೊಂಡರು. ಇದರಿಂದ ನಮ್ಮಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸ್ವಯಂ ಇಚ್ಛೆಯಿಂದ ಕಳೆದ 10 ದಿನದಿಂದ ಅಂಗಡಿಗಳನ್ನು ಬಂದ್ ಮಾಡಿದ್ದೇವೆ. ಆದರೆ ಪಾಲಿಕೆಯ ಅಧಿಕಾರಿಗಳ ಸೂಚನೆಯ ಮೇರೆಗೆ ಚೆಲುವಾಂಬ ಪಾರ್ಕ್ ಬಳಿ ವ್ಯಾಪಾರ ಮಾಡುವುದಕ್ಕೆ ಹೋದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಸ್ಥಳೀಯರನ್ನು ಎದುರು ಹಾಕಿಕೊಂಡು ವ್ಯಾಪಾರ ಮಾಡುವುದಕ್ಕೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ರಸ್ತೆಯಲ್ಲಿರುವ ಲೀಲಾ ಚೆನ್ನಯ್ಯ ಕಲ್ಯಾಣ ಮಂಟಪದ ಬಳಿಯಾದರೂ ನಮಗೆ ಅವಕಾಶ ಮಾಡಿಕೊಡಬೇಕು. ಎಂಟು ಮಳಿಗೆಗಳಿಂದ ಸುಮಾರು 50 ಕುಟುಂಬಗಳು ಜೀವನ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಲೀಲಾ ಚೆನ್ನಯ್ಯ ಕಲ್ಯಾಣ ಮಂಟಪದ ಬಳಿ ಪುಟ್‍ಬಾತ್ ವಿಶಾಲವಾಗಿರುವುದರಿಂದ ವ್ಯಾಪಾರ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು. ಈ ಸ್ಥಳದಿಂದ ಬೇರೆ ಕಡೆ ಹೋದರೆ ನಮಗೆ ಗ್ರಾಹಕರು ಬರದೆ ವ್ಯಾಪಾರದಲ್ಲಿ ನಷ್ಟ ಉಂಟಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನೆರಡು ದಿನದಲ್ಲಿ ಸ್ಥಳ ಗುರುತಿಸಿ ಅವಕಾಶ ನೀಡಲಾಗುವುದು

ಚೆಲುವಾಂಬ ಪಾರ್ಕ್ ಬಳಿ ಹೂವಿನ ವ್ಯಾಪಾರಿಗಳಿಗೆ ಅವಕಾಶ ನೀಡುವುದಕ್ಕೆ ಉದ್ದೇಶಿಸಲಾಗಿತ್ತು. ಆದರೆ ಒಂಟಿಕೊಪ್ಪಲು ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಎರಡು ಸ್ಥಳವನ್ನು ಗುರುತಿಸಲಾಗಿದೆ. ಇದರೊಂದಿಗೆ ವ್ಯಾಪಾರಿಗಳಿಗೂ ಯಾವುದಾದರೂ ಸ್ಥಳ ಗುರುತಿಸಿ ಗಮನಕ್ಕೆ ತರುವಂತೆ ಸೂಚಿಸಿದ್ದೇವೆ. ಇನ್ನೆರಡು ದಿನದಲ್ಲಿ ಸ್ಥಳವನ್ನು ಗುರುತಿಸಿ ವ್ಯಾಪಾರಿಗಳಿಗೆ ನೀಡಲಾಗುತ್ತದೆ. – ಡಾ. ಡಿ.ಜಿ.ನಾಗರಾಜು, ಪಾಲಿಕೆ ಆರೋಗ್ಯಾಧಿಕಾರಿ.

Translate »