ಶೈಕ್ಷಣಿಕ ಅಭಿವೃದ್ಧಿಗೆ ವಿವಿಗಳಿಂದ ಕನಿಷ್ಠ ಐದು ಹಳ್ಳಿಗಳ ದತ್ತು ಕಾನೂನು ತರಲು ಚಿಂತನೆ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
ಮೈಸೂರು

ಶೈಕ್ಷಣಿಕ ಅಭಿವೃದ್ಧಿಗೆ ವಿವಿಗಳಿಂದ ಕನಿಷ್ಠ ಐದು ಹಳ್ಳಿಗಳ ದತ್ತು ಕಾನೂನು ತರಲು ಚಿಂತನೆ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

August 6, 2018

ಮೈಸೂರು: ವಿಶ್ವ ವಿದ್ಯಾನಿಲಯಗಳ ಕುಲಪತಿಗಳು ಹಳ್ಳಿಗಳಿಗೆ ಹೋಗಿ ಉನ್ನತ ಶಿಕ್ಷಣ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಕನಿಷ್ಠ ಐದು ಹಳ್ಳಿಗಳನ್ನು ದತ್ತು ಪಡೆದು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ಮುಂದಾಗಬೇಕು. ಈ ಸಂಬಂಧ ಕಾನೂನು ತರಲು ಚಿಂತಿಸಿರುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಭಾನುವಾರ ಏರ್ಪಡಿಸಿದ್ದ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಲ್ಲಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶೈಕ್ಷಣಿಕ ಉನ್ನತಿಗೆ ಕುಲಪತಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗೆ ಕ್ರಮವಾಗಿ ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಮತ್ತು ಪದವಿಪೂರ್ವ ಶಿಕ್ಷಣ ಖಾತೆ ದೊರೆತಿದ್ದು, ನಾನು ಮತ್ತು ಸಾ.ರಾ.ಮಹೇಶ್ ದೇಹ ಬೇರೆಯಾದರೂ ಇಬ್ಬರ ಮನಸ್ಸು ಒಂದೇ ಆಗಿದೆ ಎಂದರು.

ತಾವು ಓದಿದ್ದು 8ನೇ ತರಗತಿಯಾಗಿದ್ದರಿಂದ ಉನ್ನತ ಶಿಕ್ಷಣ ಖಾತೆಯ ಜವಾಬ್ದಾರಿ ವಹಿಸಿಕೊಳ್ಳಲು ಆರಂಭದಲ್ಲಿ ಸ್ವಲ್ಪ ಹಿಂಜರಿದಿದ್ದೆ. ಆದರೆ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಟೀಕೆ ಬಂದ ಮೇಲೆ ಇದೇ ಖಾತೆಯನ್ನು ಒಪ್ಪಿಕೊಂಡಿದ್ದಾಗಿ ಹೇಳಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನನಗೆ ಜಿಲ್ಲಾ ಉಸ್ತುವಾರಿ ಖಾತೆಯನ್ನೂ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಭರವಸೆ ನೀಡಿದರು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಏಕವ್ಯಕ್ತಿ ಮಾತು ನಡೆಯುವುದಿಲ್ಲ. ಸಂಶೋಧಕರು ತಮ್ಮ ಸಲಹೆಗಳನ್ನು ನೀಡಿದರೆ ಸ್ವೀಕರಿಸಿ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುವೆ. ಗುಣಮಟ್ಟದ ಶಿಕ್ಷಣ, ಉತ್ತಮ ನಾಯಕತ್ವ, ಉತ್ತಮ ಅಧಿಕಾರಿ, ಕ್ರೀಡಾಪಟು, ಸಂಗೀತಗಾರರನ್ನು ರೂಪಿಸಲು ಉನ್ನತ ಶಿಕ್ಷಣ ಕ್ಷೇತ್ರ ಬಳಸಿಕೊಳ್ಳುವೆ. ಏನೂ ಸೌಕರ್ಯ ಇಲ್ಲದಿದ್ದಾಗ ಅಂಬೇಡ್ಕರ್ ಓದಿ ವಿಶ್ವಮಟ್ಟದಲ್ಲಿ ಬೆಳೆದರು. ಅವರು ಎಳೆದು ತಂದಿರುವ ಸಾಮಾಜಿಕ ನ್ಯಾಯದ ತೇರನ್ನು ನಾನು ಮುಂದುವರೆಸುವೆ ಎಂದು ಹೇಳಿದರು.

ಹಿಂದೆ ಹೆಣ್ಣು ಮಕ್ಕಳಿಗೆ ಶಾಲೆಗೆ ಕಳಿಸುತ್ತಿರಲಿಲ್ಲ. 10ನೆ ತರಗತಿ ಓದಿಸುವುದೇ ಉನ್ನತ ಶಿಕ್ಷಣ ಎಂಬಂತಿತ್ತು. ಬದಲಾದ ಕಾಲಕ್ಕೆ ತಕ್ಕಂತೆ ಇಂದು ಹೆಣ್ಣು ಮಕ್ಕಳು ಹೆಚ್ಚಾಗಿ ಕಲಿಯಲು ಮುಂದೆ ಬರುತ್ತಿದ್ದಾರೆ. ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ ಆಕೆಯ ಇಡೀ ಕುಟುಂಬವೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಜೊತೆಗೆ ಇಡೀ ಗ್ರಾಮ, ನಗರ, ಜಿಲ್ಲೆ, ರಾಷ್ಟ್ರಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಂತಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಯುಪಿಎಸ್ಸಿಯಲ್ಲಿ 930ನೇ ರ್ಯಾಂಕ್ ಪಡೆದ ವೆಂಕಟೇಶ ನಾಯಕ್, ಮಾಜಿ ಸಹಾಯಕ ಕಮಾಂಡೆಂಟ್ ಬಿ.ಕಿರಣಕುಮಾರ್ ಉಪನ್ಯಾಸ ನೀಡಿದರು. ಡಿಡಿಪಿಯು ಡಾ.ದಯಾನಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿವಿಎಸ್ ಜಿಲ್ಲಾಧ್ಯಕ್ಷ ನವೀನ್ ಮೌರ್ಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸೋಸಲೆ ಸಿದ್ದರಾಜು, ಬಿಇಒ ಎಂ.ಆರ್. ಶಿವರಾಮು, ಶಿವಕುಮಾರ್, ಪ್ರಾಂಶುಪಾಲ ಟಿ.ಆರ್.ಸಿದ್ದರಾಜು, ವಕೀಲ ಎಸ್.ಉಮೇಶ್, ರಾಹುಲ್ ಇನ್ನಿತರರು ಉಪಸ್ಥಿತರಿದ್ದರು.

Translate »