ದಲಿತ ಕುಟುಂಬಗಳಿಗೆ ನ್ಯಾಯ ನೀಡಲು ಒತ್ತಾಯ
ಹಾಸನ

ದಲಿತ ಕುಟುಂಬಗಳಿಗೆ ನ್ಯಾಯ ನೀಡಲು ಒತ್ತಾಯ

July 13, 2018

ಹಾಸನ:  ಅಂಬೇಡ್ಕರ್ ಸಮುದಾಯ ಭವನದಲ್ಲಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿರುವ ಕುಟುಂಬಗಳಿಗೆ ವಾರದಲ್ಲಿ ನ್ಯಾಯ ಸಿಗದಿದ್ದರೇ ಪಾದಯಾತ್ರೆ ಮೂಲಕ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಲಾಯಿತು.

ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಹೊಸೂರು ಗ್ರಾಮದ ಸರ್ವೇ ನಂ. 22 ರಲ್ಲಿ ಕಳೆದ 10 ವರ್ಷದಿಂದ ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿ ಜಿಪಂ, ತಾಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣವಾಗಿದೆ. ಆದರೆ, ಇಲ್ಲಿನ ಸವರ್ಣೀಯರು ಈ ಜಾಗವನ್ನು ಸ್ಮಶಾನಕ್ಕಾಗಿ ಕಬಳಿಸಲು ಮುಂದಾಗಿದ್ದರು ಎಂದರು.

ಗ್ರಾಮದಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟರೂ ಶವವನ್ನು ಈ ಜಾಗದಲ್ಲಿ ದಲಿತರ ಮನೆ ಮುಂದೆ ತಂದು ಸುಡುವ ಮೂಲಕ ದಲಿತರಿಗೆ ಭಯ ಹುಟ್ಟಿಸುವ ಜೊತೆ ಅಮಾನವೀಯವಾಗಿ ನಡೆಸಿಕೊಂಡಿದ್ದರು. ಈ ಸಂಬಂಧ ದೊಡ್ಡ ಹೋರಾಟ ನಡೆದಿತ್ತು.

ಕೆಲ ದಿನದ ಹಿಂದೆ ಏಕಾಏಕಿ ಬಂದ ತಾಲೂಕು ಆಡಳಿತ ಯಾವುದೇ ನೋಟಿಸ್ ಕೂಡ ನೀಡದೆ ದಲಿತರು ವಾಸಿಸುತ್ತಿದ್ದ ಮನೆಗಳನ್ನು ತೆರವುಗೊಳಿಸಿತ್ತು. ನಂತರ 15 ದಿನದಲ್ಲಿ ಇಲ್ಲಿ ವಾಸವಿದ್ದ ದಲಿತ ಕುಟುಂಬ ಗಳಿಗೆ ಭೂಮಿ ಮತ್ತು ನಿವೇಶನ ನೀಡುವು ದಾಗಿ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಭರವಸೆ ನೀಡಿತ್ತು. ಆದರೆ 15ದಿನ ಕಳೆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಇಲ್ಲಿದ್ದ ಐದು ಕುಟುಂಬಗಳನ್ನು ಅಂಬೇಡ್ಕರ್ ಸಮುದಾಯ ಭವನಕ್ಕೆ ಸ್ಥಳಾಂತರಿಸಿರುವ ತಾಲೂಕು ಆಡಳಿತ ದಲಿತರಿಗೆ ಕನಿಷ್ಠ ಸೌಲಭ್ಯ ಕೊಡದೆ ಕತ್ತಲಲ್ಲಿ ಇಟ್ಟಿದ್ದಾರೆ. ಕನಿಷ್ಠ ಮೂಲ ಸೌಲಭ್ಯ ಕೊಡದೆ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಹೇಳಿದ ಮಾತಿಗೆ ತಪ್ಪಿರುವ ಸಕಲೇಶಪುರ ತಹಸೀ ಲ್ದಾರ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ದಲಿತರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರೂ ಶಾಸಕ ಕುಮಾರಸ್ವಾಮಿ ಅವರು ಈವರೆಗೆ ಗ್ರಾಮಕ್ಕೆ ಬಂದು ದಲಿತರ ಸಮಸ್ಯೆ ಏನೆಂದು ಕೇಳಿಲ್ಲ. ದಲಿತರನ್ನು ಒಕ್ಕಲೆಬ್ಬಿಸುವ ವಿಚಾರ ಗೊತ್ತಿದ್ದರೂ ಮಧ್ಯೆ ಪ್ರವೇಶಿಸಿ ದಲಿತರ ಹಿತ ಕಾಯಲಿಲ್ಲ.

ಮೀಸಲು ಕ್ಷೇತ್ರ ವಾಗಿದ್ದರೂ ದಲಿತರ ಸ್ಥಿತಿ ಅಮಾನವೀಯ ವಾಗಿದೆ. ಶಾಸಕರು ಕೂಡಲೇ ಇಲ್ಲಿಗೆ ಭೇಟಿ ನೀಡಬೇಕು. ಅತಂತ್ರ ಕುಟುಂಬಗಳಿಗೆ ಸಾಂತ್ವಾನ ಹೇಳಿ ಪರಿಹಾರ ನೀಡಬೇಕು ಇಲ್ಲದಿದ್ದರೆ ಕುಮಾರಸ್ವಾಮಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ನಾಗರಾಜು ಹೆತ್ತೂರು, ಬ್ಯಾಕರವಳ್ಳಿ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಬೆಳಗೂಡು ಬಸವರಾಜು, ಮುಖಂಡ ರಾದ ವಸಂತ್, ಕುಮಾರಸ್ವಾಮಿ ಇದ್ದರು.

Translate »