ಹಿರಿಯ ಭೂ ವಿಜ್ಞಾನಿ ವಿರುದ್ಧ ಕ್ರಮವಹಿಸಲು ಸರ್ಕಾರಕ್ಕೆ ಡಿಸಿ ಪತ್ರ
ಹಾಸನ

ಹಿರಿಯ ಭೂ ವಿಜ್ಞಾನಿ ವಿರುದ್ಧ ಕ್ರಮವಹಿಸಲು ಸರ್ಕಾರಕ್ಕೆ ಡಿಸಿ ಪತ್ರ

July 13, 2018

ಹಾಸನ: ಅಕ್ರಮ ಗಣಿಗಾರಿಕೆ ನಡೆಸಿದವರಿಗೆ ಸಹಕಾರ ನೀಡಿದ ಆರೋಪದಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ ವ್ಯವಸ್ಥಾಪಕ ಜಗದೀಶ್ ಅವರನ್ನು ಅಮಾನತುಗೊಳಿಸಿರುವ ಡಿಸಿ ರೋಹಿಣಿ ಸಿಂಧೂರಿ, ಹಿರಿಯ ಭೂ ವಿಜ್ಞಾನಿ ಪದ್ಮಜಾ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಗ್ರಾಮ ವ್ಯಾಪ್ತಿಯ ಸರ್ಕಾರಿ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿತ್ತು. ಹಾಗಾಗಿ, ಜಿಲ್ಲಾಧಿಕಾರಿ ರೋಹಿಣಿ ನೇತೃತ್ವದಲ್ಲಿ ಜ. 29ರಂದು ಸರ್ಕಾರಿ ಜಮೀನು ಸರ್ವೆ ನಂ.38ರ ಮೇಲೆ ದಾಳಿ ನಡೆಸಿದಾಗ ಸಿ.ಕೆ.ಅರುಣಾಕ್ಷಿ ಕೋಂ ಕೆ.ಎಂ. ಮೋಹನ್ ಅಕ್ರಮ ಮತ್ತು ಪರವಾನಗಿ ರಹಿತ ಕಲ್ಲು ಗಣಿಗಾರಿಕೆ ನಡೆಸುತಿರುವುದು ಬೆಳಕಿಗೆ ಬಂದಿತ್ತು. ಕೇವಲ ಗ್ರೀನ್ ಗ್ರಾನೈಟ್ ಗಣಿಗಾರಿಕೆಗೆ ಮಾತ್ರ ಪಡೆದಿದ್ದರು.

ದಾಳಿ ವೇಳೆ ಗುಣಮಟ್ಟದ ಗ್ರಾನೈಟ್‍ನ್ನು ಹೆಚ್ಚಿನ ಪ್ರಮಾಣದಲ್ಲಿ ಗಣಿಗಾರಿಕೆ ನಡೆಸಿ, ಕಲ್ಲು ಪುಡಿ ಘಟಕದಿಂದ ಕಲ್ಲುಗಳನ್ನು ಪುಡಿ ಮಾಡುವ ಕಾರ್ಯ ನಿರ್ವಹಿಸಿರುವುದು ಪತ್ತೆಯಾಗಿತ್ತು.

ಈ ಸಂಬಂಧ ಏ.7ರಂದು ಜಿಲ್ಲಾಡಳಿತ ನೀಡಿದ ನೋಟಿಸ್‍ಗೆ ಉತ್ತರಿಸಿರುವ ಅರುಣಾಕ್ಷಿ, ಸರ್ಕಾರಿ ಜಮೀನಿನಲ್ಲಿ ನಿರ್ದಿಷ್ಟಪಡಿಸಿದ ಹಸಿರು ಗ್ರಾನೈಟ್ ಹೊರುತುಪಡಿಸಿ, ಸಾಮಾನ್ಯ ಕಲ್ಲು ಗಣಿಗಾರಿಕೆ ಯನ್ನು ಪ್ರಾಯೋಗಿಕವಾಗಿ ನಡೆಸಲು 315ಮೆಟ್ರಿಕ್ ಟನ್ ವೇಸ್ಟ್ ರಾಖ್ ಉಪಯೋಗಿಸಿಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಅನಧಿಕೃತವಾಗಿ ಕಲ್ಲುಗಣಿಗಾರಿಕೆ ನಡೆಸಿ ತೆಗೆದ ಕಲ್ಲಿನ ಅಂದಾಜು ಮೌಲ್ಯ 3ಕೋಟಿ (ಪ್ರತಿ ಕ್ಯುಬಿಕ್ ಮೀಟರ್‍ಗೆ 1,000 ದಂತೆ ಕಲ್ಲುಗಣಿಗಾರಿಕೆ ನಡೆಸಿರುವ 30,000 ಕ್ಯುಬಿಕ್‍ಗೆ).

ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವುದು ಗಣಿ ಮತ್ತು ಭೂವಿಜ್ಞಾನ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957ರ ಉಲ್ಲಂಘನೆಯಾಗಿದೆ. ಕಲಂ 21ರಂತೆ ದಂಡ ವಿಧಿಸಿ ಗಣಿಗಾರಿಕೆ ಮಾಡಲಾದ ಎಲ್ಲಾ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತಿಳಿಸಲಾಗಿದೆ. ಅಲ್ಲದೇ ಕರ್ನಾಟಕ ಸಣ್ಣ ಗಣಿಗಾರಿಕೆ ನಿಯಮ 1994ರ ಕಲಂ 44ರಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹಾಗೂ ಪರವಾನಗಿ ರದ್ದು ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಗಣಿ ಮಾಲೀಕರ ವಿರುದ್ಧ 2017ರ ಡಿ.14ರಂದು ಎಫ್‍ಐಆರ್ ದಾಖಲಿಸಲಾಗಿದೆ.

‘ಕಲ್ಲುಗಣಿಗಾರಿಕೆ’ ಇತರೆ ಗಣಿಗಾರಿಕೆಗಳ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಆದೇಶವನ್ನು ನಿರ್ಲಕ್ಷಿಸಿ, ದಂಡ ವಿಧಿಸುವ ವೇಳೆ ಕಡತದ ನಡವಳಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಎಂ.ಎ.ಪದ್ಮಜ ಹಾಗೂ ಕಚೇರಿ ವ್ಯವಸ್ಥಾಪಕ ಜಗದೀಶ್ ಆರೋಪಿಗಳೊಂದಿಗೆ ಶಾಮೀಲಾಗಿ ಕೇವಲ 5ಲಕ್ಷ ದಂಡ ವಿಧಿಸಿ ತಮ್ಮ ವ್ಯಾಪ್ತಿ ಮೀರಿ ಕ್ರಮ ಕೈಗೊಂಡಿದ್ದಾರೆ. ಇದರಿಂದ ಕೋಟ್ಯಾಂತರ ರೂಪಾಯಿ ಸರ್ಕಾರಕ್ಕೆ ನಷ್ಟವಾಗಿದೆ.

ಕಡತವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಪದ್ಮಜ ಹಾಗೂ ಜಗದೀಶ್ ಅವರು ಅಪರಾಧಿಯನ್ನು ಈ ಪ್ರಕರಣದಿಂದ ಖುಲಾಸೆ ಗೊಳಿಸಲು ನೇರವಾಗಿ ಕಾರಣರಾಗಿದ್ದಾರೆ. ಹಾಗಾಗಿ ಜಗದೀಶ್ ಅಮಾನತುಗೊಳಿಸಿ, ಪದ್ಮಜಾ ವಿರುದ್ಧ ಕ್ರಮಕ್ಕೆ ಪತ್ರೆ ಬರೆಯಲಾಗಿದೆ ಎಂದು ರೋಹಿಣಿ ಸಿಂಧೂರಿ ಆದೇಶದಲ್ಲಿ ವಿವರಿಸಿದ್ದಾರೆ.

Translate »