ಮೈತ್ರಿ ನಾಯಕರ ಒಳಜಗಳದಿಂದ ರಾಜ್ಯದಲ್ಲಿ ಮಧ್ಯಂತರ ಚುನಾವಣೆ
ಮೈಸೂರು

ಮೈತ್ರಿ ನಾಯಕರ ಒಳಜಗಳದಿಂದ ರಾಜ್ಯದಲ್ಲಿ ಮಧ್ಯಂತರ ಚುನಾವಣೆ

July 1, 2019

ಮೈಸೂರು,ಜೂ.30(ಎಸ್‍ಬಿಡಿ)- ಮೈತ್ರಿ ನಾಯಕರ ಒಳಜಗಳದಿಂದ ಮಧ್ಯಂತರ ಚುನಾವಣೆ ಬರಬಹುದೇ ಹೊರತು ಬಿಜೆಪಿಯಿಂದಲ್ಲ ಎಂದು ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ್ ಹೇಳಿದರು.

ಮೈಸೂರಿನ ಬಿಜೆಪಿ ಕಾರ್ಯಾಲಯ ದಲ್ಲಿ ಭಾನುವಾರ ನಡೆದ ಸದಸ್ಯತ್ವ ಅಭಿ ಯಾನ ಕಾರ್ಯಾಗಾರದಲ್ಲಿ ಭಾಗವಹಿ ಸುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿ ಸಿದ ಅವರು, ಬಿಜೆಪಿ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ. ಜನರಿಗೂ ಇದು ಇಷ್ಟವಿಲ್ಲ. ಒಂದು ವೇಳೆ ಮಧ್ಯಂತರ ಚುನಾವಣೆ ಬಂದರೆ ದೇವೇಗೌಡರು, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರ ಜಗಳ ದಿಂದಲೇ ಹೊರತು ಬಿಜೆಪಿಯಿಂದಲ್ಲ. ಸರ್ಕಾರ ನಡೆಸಲು ಯೋಗ್ಯತೆಯಿಲ್ಲದಿ ದ್ದರೆ ಅಧಿಕಾರ ಬಿಟ್ಟು ತೊಲಗಿ, ನಾವು ಸರ್ಕಾರ ರಚಿಸುತ್ತೇವೆ ಎಂಬುದಷ್ಟೇ ಬಿಜೆಪಿ ನಿಲುವು ಎಂದರು.

ಮೈತ್ರಿ ಸರ್ಕಾರ ಬೇಕಿರುವುದು ಮುಖ್ಯ ಮಂತ್ರಿ ಕುಮಾರಸ್ವಾಮಿ, ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ. ಈ ಮೂವರ ಹೊರತು ಜೆಡಿಎಸ್, ಕಾಂಗ್ರೆಸ್‍ನ ಮತ್ಯಾರಿಗೂ ಸರ್ಕಾ ರದ ಬಗ್ಗೆ ಒಲವಿಲ್ಲ. ಕುಮಾರಸ್ವಾಮಿ ಅವರು ಅಧಿಕಾರದ ಆಸೆಯಿಂದ ಮುಖ್ಯ ಮಂತ್ರಿ ಸ್ಥಾನಕ್ಕೆ ಅಂಟಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಒಂದೊಂದು ನಾಮ ಹಾಕಿದ ಕ್ಷಣದಲ್ಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ, ಮನೆಗೆ ಹೋಗಬೇಕಿತ್ತು. ಆದರೆ ಇರುವಷ್ಟು ದಿನ ಅಧಿಕಾರ ಅನುಭವಿಸೋಣವೆಂದು ಮುಂದು ವರೆದಿದ್ದಾರೆ ಎಂದು ಟಾಂಗ್ ನೀಡಿದರು.

ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ, ವಿದೇಶ ಪ್ರವಾಸಕ್ಕೆ ನಮ್ಮ ವಿರೋಧವಿಲ್ಲ. ಆಡಳಿತಾತ್ಮಕ ಕಾರಣ ಗಳಿಂದಾಗಿ ಪ್ರಧಾನಿ ಮೋದಿ ಅವರು ಅನೇಕ ಬಾರಿ ವಿದೇಶ ಪ್ರವಾಸ ಮಾಡಿ ದ್ದಾರೆ. ಆದರೆ ಸಂದರ್ಭ, ಸನ್ನಿವೇಶವನ್ನು ಅರ್ಥೈಸಿಕೊಂಡು, ಅಧಿಕಾರಿಗಳು, ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಮುನ್ನಡೆ ಯಬೇಕಿತ್ತು. ಶ್ರೀ ಆದಿಚುಂಚನಗಿರಿ ಮಠದ ದೇವಾಲಯ ಉದ್ಘಾಟನೆಗೆ ಹೋಗಿ ದ್ದಾರೆ. ಇದಕ್ಕೆ ಯಾವುದೇ ವಿರೋಧವಿಲ್ಲ. ಸ್ವಾಮೀಜಿ ನನ್ನನ್ನೂ ಕರೆದಿದ್ದರು. ಆದರೆ ಕಾರಣಾಂತರಗಳಿಂದ ಹೋಗಲು ಸಾಧ್ಯವಾಗಲಿಲ್ಲ. ಆದರೆ ರಾಜ್ಯದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಅಣೆಕಟ್ಟೆಗಳಿರುವ ಮೈಸೂರು ಭಾಗದಲ್ಲೇ ನೀರಿಗೆ ಹಾಹಾಕಾರ ಉಂಟಾಗಿದೆ. ನದಿ ಗಳಲ್ಲೇ ನೀರಿಲ್ಲ. 10 ದಿನ ಕಳೆದರೆ ಕಬ್ಬು ಬೆಳೆ ಒಣಗಿ ಹೋಗುತ್ತದೆ. ಸರ್ಕಾರ ಬದುಕಿದ್ದರೆ ಪ್ರಾಮಾಣಿಕವಾಗಿ ರೈತರ ಪರವಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಮಂಡ್ಯದಲ್ಲಿ ಸೋತಿರುವುದಕ್ಕೆ ಹೋಗಿ ಸಂಸದರ ಬಳಿ ಹೋಗಿ ನೀರು ಕೇಳಿ ಎನ್ನುವುದು, ಅವರ ವಿರುದ್ಧ ಇಲ್ಲಸ ಲ್ಲದ ಆಪಾದನೆ ಮಾಡುವುದು ಸರಿಯಲ್ಲ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಹಾಗಾಗ ದರೆ ಮಂಡ್ಯದಲ್ಲಿರುವ ಮೂವರು ಸಚಿ ವರು ಸೇರಿದಂತೆ 7 ಶಾಸಕರ ಕರ್ತವ್ಯವಾ ದರೂ ಏನೆಂಬುದನ್ನು ಜನರಿಗೆ ತಿಳಿಸಬೇಕೆಂದು ಆಗ್ರಹಿಸಿದರು.

ಐಎಂಎ ಪ್ರಕರಣ ಮುಚ್ಚಿಹಾಕಲು ಯತ್ನ: ಪೊಲೀಸ್ ಅಧಿಕಾರಿ ಕೊಡಗಿನ ಗಣಪತಿ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದೆವು. ಆದರೆ ಎಲ್ಲಾ ಸಾಕ್ಷಿ ನಾಶ ಮಾಡಿದ ಬಳಿಕ ಸಿಬಿಐಗೆ ವಹಿಸಿ, ತನಿಖೆ ಏನಾಯ್ತು ಎಂದು ಕೇಳುತ್ತಾರೆ. ಇಘ ಐಎಂಎ ಪ್ರಕ ರಣವನ್ನು ಮುಚ್ಚಿ ಹಾಕುವ ಸಲುವಾಗಿಯೇ ಸರ್ಕಾರ ಎಸ್‍ಐಟಿ ರಚಿಸಿದೆ. ಇತಿಹಾಸ ದಲ್ಲಿ 30 ಸಾವಿರಕ್ಕೂ ಹೆಚ್ಚು ದೂರು ದಾಖಲಾಗಿರುವ ಪ್ರಕರಣ ಮತ್ತೊಂದಿಲ್ಲ. ಸಿಬಿಐಗೆ ವಹಿಸಿದರೆ ಮಾತ್ರ ಜನರಿಗೆ ನ್ಯಾಯ ಸಿಗುತ್ತದೆ.

ಇಲ್ಲವಾದರೆ ಎಸ್‍ಐಟಿಯಿಂದಲೇ ಪ್ರಕರಣ ಮುಚ್ಚಿ ಹಾಕ ಲಾಗುತ್ತದೆ. ಈ ಮೂಲಕ ಸರ್ಕಾರ ಮುಸ್ಲಿಂ ಬಾಂಧ ವರಿಗೆ ದ್ರೋಹ ಮಾಡು ತ್ತಿದೆ ಎಂದು ಆರ್.ಅಶೋಕ್ ಗಂಭೀರ ಆರೋಪ ಮಾಡಿದರು.

ಲೋಕಸಭಾ ಚುನಾವಣೆ ಬಳಿಕ ಎಲ್ಲಾ ರಾಜ್ಯದಲ್ಲೂ ಪಕ್ಷದ ಅಧ್ಯಕ್ಷರ ಬದಲಾ ವಣೆ ಆಗುತ್ತದೆ ಎಂದು ಹೇಳಲಾಗಿತ್ತು. ಹೊಸ ಅಧ್ಯಕ್ಷರು ಬರುವುದಾಗಿ ಯಡಿ ಯೂರಪ್ಪನವರೇ ಹೇಳಿದ್ದಾರೆ. ಚುನಾವಣೆ ನಡೆದು ಸರ್ವಸಮ್ಮತವಾಗಿ ಎಲ್ಲಾ ರಾಜ್ಯ ಗಳಲ್ಲೂ ಹೊಸ ಅಧ್ಯಕ್ಷರ ನೇಮಕವಾಗುತ್ತದೆ ಎಂದು ಪ್ರಶ್ನೆ ಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೈಸೂರಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಸಜ್ಜು
ಮೈಸೂರು,ಜೂ.30(ಎಸ್‍ಬಿಡಿ)-ಬಿಜೆಪಿ ಸದಸ್ಯತ್ವ ಪಡೆಯಲು ದೇಶದ ಯುವ ಸಮುದಾಯ ಉತ್ಸುಕವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.

ಮೈಸೂರಿನ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸಂಘಟನಾ ಪರ್ವ ಸದಸ್ಯತ್ವ ನೋಂದಣಿ ಅಭಿಯಾನ ಸಂಬಂಧಿತ ಕಾರ್ಯಾಗಾರವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಕಳೆದ ಬಾರಿ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಸದಸ್ಯತ್ವ ನೋಂದಣಿಯಲ್ಲಿ ವಿಶ್ವದಾಖಲೆ ಮಾಡಲಾಗಿದೆ. ಈ ಬಾರಿ ಸದಸ್ಯತ್ವ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದ್ದು, ಬಿ.ಎಸ್.ಯಡಿಯೂರಪ್ಪನವರು, ಈಶ್ವರಪ್ಪ, ಜಗದೀಶ್ ಶೆಟ್ಟರ್, ನಾನು ಸೇರಿದಂತೆ ಎಲ್ಲಾ ನಾಯಕರೂ ಪ್ರವಾಸ ಮಾಡಿ, ಅಭಿಯಾನದ ಯಶಸ್ಸಿಗೆ ಕೆಲಸ ಮಾಡುತ್ತಿದ್ದೇವೆ ಎಂದರು.

ರಾಜ್ಯದ ಜನ ಬಿಜೆಪಿಗೆ 25+1 ಒಟ್ಟು 26 ಕ್ಷೇತ್ರದಲ್ಲಿ ಆಶೀರ್ವದಿಸಿದ್ದಾರೆ. ಹಾಗಾಗಿ ಮೋದಿ ಅವರು ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಆಧ್ಯತೆ ನೀಡುವ ನಿರೀಕ್ಷೆಯಲ್ಲಿದ್ದೇವೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಯುವಕರು ಬಿಜೆಪಿ ಸದಸ್ಯರಾಗಲು ಉತ್ಸುಕರಾಗಿದ್ದಾರೆ. ಈ ನಿಟ್ಟಿನಲ್ಲಿ ಸದಸ್ಯತ್ವ ನೋಂದಣಿಗೆ ಕಾರ್ಯಕರ್ತರು ಪರಿಶ್ರಮಿಸಬೇಕು. ಹಾಗೆಯೇ ಮೈಸೂರು ನಗರದಲ್ಲಿ 2 ಲಕ್ಷ ಸದಸ್ಯತ್ವ ನೋಂದಣಿಯ ಗುರಿ ನೀಡಲಾಗಿದೆ. ಇದು ಸುಲಭವಲ್ಲದಿ ದ್ದರೂ ಕಾರ್ಯಕರ್ತರ ಶ್ರಮ, ಶ್ರದ್ಧೆಯಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ವಿಶ್ವದಲ್ಲಿರುವ 5 ಸಾವಿರಕ್ಕೂ ಹೆಚ್ಚು ರಾಜಕೀಯ ಪಕ್ಷಗಳಲ್ಲಿ 11 ಕೋಟಿಗೂ ಹೆಚ್ಚು ಸದಸ್ಯರ ಹೊಂದಿರುವ ಪಕ್ಷ ಬಿಜೆಪಿ. ಈ ಸಂಘಟನಾ ಶಕ್ತಿಯಿಂದ 2ನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲಾಗಿದೆ. ಪ್ರಧಾನಿ ಮೋದಿ ಅವರು ಹೇಳಿದಂತೆ ಭಾರತ ಕಾಂಗ್ರೆಸ್ ಮುಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿಯನ್ನು ಮತ್ತಷ್ಟು ಸಂಘಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಮೈಸೂರು ನಗರದಲ್ಲಿರುವ 1.40 ಲಕ್ಷ ಮನೆಗಳಿಗೂ ಭೇಟಿ ನೀಡಿ, ಸದಸ್ಯತ್ವ ನೋಂದಣಿಗೆ ಮನವಿ ಮಾಡಬೇಕೆಂದು ಹೇಳಿದರು.

ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ಮೈಸೂರು ಸಹಪ್ರಬಾರಿ ಫಣೀಶ್, ಸಂಘಟನಾ ಕಾರ್ಯದರ್ಶಿ ಸುರೇಶ್‍ಬಾಬು, ನಗರ ಪ್ರಧಾನ ಕಾರ್ಯದರ್ಶಿ ಸತೀಶ್, ಕೆ.ಆರ್.ಕ್ಷೇತ್ರದ ಅಧ್ಯಕ್ಷ ಬಿ.ವಿ.ಮಂಜುನಾಥ್, ಎನ್.ಆರ್.ಕ್ಷೇತ್ರದ ಸು.ಮುರುಳಿ, ಚಾಮರಾಜ ಕ್ಷೇತ್ರದ ಶ್ರೀರಾಮ್, ಮುಖಂಡ ದೇವರಾಜು ಮತ್ತಿತರರು ಉಪಸ್ಥಿತರಿದ್ದರು.

Translate »