ಕನ್ನಡ ಚಿತ್ರತಾರೆಯರು, ನಿರ್ಮಾಪಕರ ಮನೆ, ಕಚೇರಿಗಳ ಮೇಲೆ ಐಟಿ ದಾಳಿ
ಮೈಸೂರು

ಕನ್ನಡ ಚಿತ್ರತಾರೆಯರು, ನಿರ್ಮಾಪಕರ ಮನೆ, ಕಚೇರಿಗಳ ಮೇಲೆ ಐಟಿ ದಾಳಿ

January 4, 2019

ಬೆಂಗಳೂರು: ಹೊಸ ವರ್ಷದ ಸಂತಸದಲ್ಲಿದ್ದ ಕನ್ನಡ ಚಿತ್ರರಂಗದ ಹಲವು ದಿಗ್ಗಜರು ಇಂದು ಬೆಳಿಗ್ಗೆ ಕಣ್ತೆರೆಯುವ ಮುನ್ನವೇ ಆದಾಯ ತೆರಿಗೆ ಅಧಿಕಾರಿಗಳ ದಾಳಿಯಿಂದ ಆಘಾತಕ್ಕೆ ಒಳಗಾಗಿದ್ದಾರೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಪ್ರಮಾಣ ದಲ್ಲಿ, ಆದಾಯ ತೆರಿಗೆ (ಐಟಿ) ಅಧಿಕಾರಿಗಳು, ಖ್ಯಾತ ನಟರಾದ ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್, ಯಶ್ ಅವರ ತಾರಾ ಪತ್ನಿ ರಾಧಿಕಾ ಪಂಡಿತ್ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಜೊತೆಗೆ ಈ ಖ್ಯಾತ ನಟರನ್ನು ಹಾಕಿಕೊಂಡು ಭಾರೀ ಹಣ ಹೂಡಿಕೆ ಮಾಡಿ ದೊಡ್ಡ ಪ್ರಮಾಣದಲ್ಲಿ ಚಿತ್ರ ನಿರ್ಮಿಸುತ್ತಿದ್ದ ಮತ್ತು ರಾಜ ಕಾರಣಿಗಳೊಂದಿಗೆ ನಂಟು ಹೊಂದಿದ್ದ ನಿರ್ಮಾಪಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.

ಐಟಿ ದಾಳಿಗೆ ಒಳಗಾದವರಲ್ಲಿ ನಿರ್ಮಾಪಕರಾದ ರಾಕ್‍ಲೈನ್ ವೆಂಕಟೇಶ್, ದಿ ವಿಲನ್’ ಚಿತ್ರ ನಿರ್ಮಾ ಪಕರೂ ಆದ ಜೆಡಿಎಸ್ ಶಾಸಕ ಸಿ.ಆರ್.ಮನೋಹರ್, ಅದ್ಧೂರಿ ಚಿತ್ರಕೆಜಿಎಫ್’ ನಿರ್ಮಾಪಕರೂ ಆದ ಬಿಜೆಪಿ ಶಾಸಕ ಡಾ. ಅಶ್ವತ್ಥ್‍ನಾರಾಯಣ ಕಿರಿಯ ಸಹೋದರ ವಿಜಯ್ ಕಿರಗಂದೂರು ಸೇರಿದ್ದಾರೆ. ದಾಳಿ ಸಂದರ್ಭ ದಲ್ಲಿ ತೆರಿಗೆ ವಂಚನೆ ಹಾಗೂ ಆದಾಯ ಮೂಲಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಂಡು, ಪರಿಶೀಲನೆ ನಡೆಸ ಲಾಗುತ್ತಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಸಮೀಪ ವಾಗುತ್ತಿರುವ ಸಂದರ್ಭದಲ್ಲಿ
ಆದಾಯ ತೆರಿಗೆ ಇಲಾಖೆಯ ಈ ದಾಳಿ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಹಾಗೂ ಕನ್ನಡ ಚಿತ್ರರಂಗದ ದಿಗ್ಗಜರಿಗೆ ಶಾಕ್ ನೀಡಿದೆ. ಕನ್ನಡ ಚಿತ್ರರಂಗದ ಇತಿಹಾಸ ದಲ್ಲಿಯೇ ಇದು ಅತೀ ದೊಡ್ಡ ಐಟಿ ದಾಳಿ ಹಾಗೂ ವರ್ಷದ ಮೊದಲ ಐಟಿ ಬೇಟೆಯಾಗಿದೆ.

ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸುಮಾರು 200 ಐಟಿ ಅಧಿಕಾರಿಗಳು ಖಾಸಗಿ ವಾಹನಗಳಲ್ಲಿ ಧಾವಿಸಿ, ಈ ಎಂಟು ದಿಗ್ಗಜರ ಮನೆ ಹಾಗೂ ಕಚೇರಿ ಸೇರಿದಂತೆ 25 ಕಡೆ ದಾಳಿ ನಡೆಸಿದರು. ದಾಳಿ ವೇಳೆ ಕುಟುಂಬದವರಲ್ಲದ ಸದಸ್ಯರನ್ನು ಮನೆ ಮತ್ತು ಕಚೇರಿಯಿಂದ ಹೊರ ಹಾಕಿ ಕಾರ್ಯಾಚರಣೆ ನಡೆಸಿದರು. ಇದಕ್ಕೂ ಮುನ್ನ ಅವರ ಬಳಿ ಇದ್ದ ಮೊಬೈಲ್‍ಗಳನ್ನೂ ಕಿತ್ತುಕೊಳ್ಳಲಾಯಿತು.

ಸದಾಶಿವನಗರದಲ್ಲಿನ ಪುನೀತ್ ರಾಜ್‍ಕುಮಾರ್ ನಿವಾಸ, ಜೆಪಿ ನಗರದಲ್ಲಿನ ನಟ ಸುದೀಪ್, ಬನಶಂಕರಿ 3ನೇ ಹಂತದಲ್ಲಿನ ರಾಕಿಂಗ್ ಸ್ಟಾರ್ ಯಶ್, ಗಾಯತ್ರಿ ನಗರದಲ್ಲಿರುವ ಚಿತ್ರನಟಿ ಹಾಗೂ ನಟ ಯಶ್ ಪತ್ನಿ ರಾಧಿಕಾ ಪಂಡಿತ್ ನಿವಾಸ, ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿನ ಶಿವರಾಜಕುಮಾರ್, ಮಹಾಲಕ್ಷ್ಮಿ ಲೇಔಟ್‍ನ ನಾಗಪುರದಲ್ಲಿನ ರಾಕ್‍ಲೈನ್ ವೆಂಕಟೇಶ್ ನಿವಾಸ, ನಾಗರಬಾವಿಯಲ್ಲಿನ `ಕೆಜಿಎಫ್’ ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ದಿ ವಿಲನ್ ಚಿತ್ರ ನಿರ್ಮಾಪಕ ಸಿ.ಆರ್.ಮನೋಹರ್ ಮನೆ ಮೇಲೆ ಐಟಿ ದಾಳಿ ಸಂದರ್ಭದಲ್ಲಿ ಭಾರಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದ ಐಟಿ ಅಧಿಕಾರಿಗಳು, ದಾಳಿಗೆ ಅರ್ಧ ಗಂಟೆ ಮುನ್ನ ಸಂಬಂಧಪಟ್ಟ ಠಾಣಾ ಪೊಲೀಸ ರಿಗೂ ಮಾಹಿತಿ ನೀಡಿ, ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದರು.

ದಾಳಿ ವೇಳೆ ನಿವಾಸದಲ್ಲಿರದ ನಟರು ಮತ್ತು ನಿರ್ಮಾಪಕರನ್ನು ಸಂಪರ್ಕಿಸಿ, ತಕ್ಷಣ ಸ್ಥಳಕ್ಕೆ ಧಾವಿಸುವಂತೆ ಆದೇಶಿಸಿದರು. ಅವರುಗಳು ಬಂದ ನಂತರ ಸಂಶಯಕ್ಕೆ ಅವಕಾಶ ಮಾಡುವ ಕಡತಗಳ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ಪಡೆದರು.
ಚಿತ್ರವೊಂದರ ಶೂಟಿಂಗ್‍ಗೆ ಮೈಸೂರಿನಲ್ಲಿದ್ದ ನಟ ಸುದೀಪ್, ಅಧಿಕಾರಿಗಳ ಸೂಚನೆಯಂತೆ ಮನೆಗೆ ವಾಪಸ್ ಬಂದರು. ಕಳೆದ ಮಾರ್ಚ್‍ನಲ್ಲಿ `ದಿ ವಿಲನ್’ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ಮನೆ ಮೇಲೆ ದಾಳಿ ನಡೆದಿತ್ತು.

ಮನೋಹರ್ ನಿರ್ಮಿಸಿದ್ದ, ಶಿವಣ್ಣ ಹಾಗೂ ಸುದೀಪ್ ಅಭಿನಯದ `ದಿ ವಿಲನ್’ ಚಿತ್ರ 100 ಕೋಟಿ ರೂ. ಆದಾಯ ಗಳಿಸಿದ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಮುಂಬೈನಲ್ಲಿ ಕೆಜಿಎಫ್ ಚಿತ್ರದ ಪ್ರೊಮೋಷನ್‍ನಲ್ಲಿದ್ದ ನಟ ಯಶ್ ಅವರು ಅಧಿಕಾರಿಗಳ ಸೂಚನೆ ಮೇರೆಗೆ ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಿದರು. ಪತ್ರಿಕೆ ಅಚ್ಚಿಗೆ ಹೋಗುವ ವೇಳೆಯಲ್ಲೂ ಸಹ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೀಲನೆ ಮುಂದುವರೆದಿತ್ತು. ದಾಳಿ ವೇಳೆ ಅಧಿಕಾರಿಗಳು ಹಲವಾರು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಐಟಿ ದಾಳಿಗೊಳಗಾದ ಜೋಡಿಯ ಕೆಜಿಎಫ್ ದಾಖಲೆ ಗಳಿಕೆ
ಗುರುವಾರ ಐಟಿ ದಾಳಿ ನಡೆದಿರುವ ನಿರ್ಮಾಪಕ ವಿಜಯ್ ಕಿರಗಂದೂರು, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಆರನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ್ದ ಕೆಜಿಎಫ್ ಚಿತ್ರ ಇದೀಗ 10ನೇ ದಿನಕ್ಕೆ 150 ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿತ್ತು. ಇದೀಗ 13ನೇ ದಿನಕ್ಕೆ 175 ಕೋಟಿ ಕ್ಲಬ್ ಸೇರುವ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.

ಕೆಜಿಎಫ್ ಚಿತ್ರ ಜಗತ್ತಿನಾದ್ಯಂತ ಒಟ್ಟಾರೆ 175 ಕೋಟಿ ರೂಪಾಯಿ ಗಳಿಸಿದ್ದು ಇದರಲ್ಲಿ 138.5 ಕೋಟಿ ನೆಟ್ ಶೇರ್ ಆಗಿದೆ. ಇನ್ನು ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಈ ವಾರದ ಅಂತ್ಯಕ್ಕೆ 7.6 ಕೋಟಿ ರೂಪಾಯಿ ಗಳಿಸಿದೆ. ಇನ್ನು ಕನ್ನಡದಲ್ಲಿ ಒಟ್ಟಾರೆ 90 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದು ಕನ್ನಡದ ಮಟ್ಟಿಗೆ ಹೊಸ ದಾಖಲೆ. ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರ ಒಟ್ಟಾರೆ 75 ಕೋಟಿ ಗಳಿಸಿ ಮೊದಲ ಸ್ಥಾನದಲ್ಲಿತ್ತು. ಇದೀಗ ಈ ದಾಖಲೆಯನ್ನು ಕೆಜಿಎಫ್ ಮುರಿದಿದೆ. ಇಲ್ಲಿಯವರೆಗೂ ಹಿಂದಿ ಆವೃತ್ತಿಯಲ್ಲಿ ಒಟ್ಟಾರೆ 30.45 ಕೋಟಿ ರೂಪಾಯಿ ಗಳಿಸಿರುವ ಕೆಜಿಎಫ್ ಹೊಸ ದಾಖಲೆ ನಿರ್ಮಿಸಿದೆ.

Translate »