ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಸೆ. 10ರಂದು ಕರೆ ನೀಡಿರುವ ಭಾರತ್ ಬಂದ್‍ಗೆ ಜೆಡಿಎಸ್ ಬೆಂಬಲ ನೀಡಿದೆ.
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್, ಭಾರತ್ ಬಂದ್‍ಗೆ ಪೂರ್ಣ ಬೆಂಬಲ ನೀಡಲಾಗುವುದು. ದೆಹಲಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ರಾಷ್ಟ್ರೀಯ ಮಹಾ ಪ್ರಧಾನಕಾರ್ಯದರ್ಶಿ ಡ್ಯಾನಿಶ್ ಆಲಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
ನಗರದಲ್ಲಿ ಪಕ್ಷದ ಶಾಸಕರು, ಮುಖಂಡರು ಪುರಭವನದ ಮುಂದೆ ಪ್ರತಿಭಟನೆ ನಡೆಸಲಿದ್ದು, ಮೈಸೂರಿನಲ್ಲಿ ನಡೆಯಲಿರುವ ಪ್ರತಿಭಟನೆ ನೇತೃತ್ವವನ್ನು ತಾವು ವಹಿಸುವುದಾಗಿ ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಪಕ್ಷದ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ, ಹಾಲು, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಬಂದ್ ವೇಳೆ ಅಡ್ಡಿ ಪಡಿಸುವುದಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾತಿನ ಮನೆಯ ಸರ್ಕಾರವಾಗಿದೆ, ಜನಸಾಮಾನ್ಯರಿಗೆ, ಬಡವರಿಗೆ ಅನುಕೂಲವಾಗುವ ಯಾವುದೇ ಶಾಶ್ವತ ಕಾರ್ಯಕ್ರಮಗಳನ್ನು ಜಾರಿಗೆ ತಂದಿಲ್ಲ, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
ಬಡಜನರ ಬದುಕು ದುಸ್ತರವಾಗಿದೆ, ಆರ್ಥಿಕ ಅರಾಜಕತೆ ತಲೆದೋರಿದೆ, ಬ್ಯಾಂಕಿಂಗ್ ವ್ಯವಸ್ಥೆ ಬುಡಮೇಲಾಗಿದೆ, ಸಾವಿರಾರು ಕೋಟಿ ರೂ. ಸಾಲ ಮಾಡಿ ಕೆಲವು ಉದ್ಯಮಿಗಳು ದೇಶದಿಂದ ಪರಾರಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡಾ. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ 50 ಸಾವಿರ ಕೋಟಿ ರೂ. ಇದ್ದ ಎನ್‍ಪಿಎ ಈಗ 2 ಲಕ್ಷ ಕೋಟಿಗೆ ಏರಿಕೆಯಾಗಿದೆ. ರಾಜ್ಯದಲ್ಲಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶದಲ್ಲಿ ಆರಾಮವಾಗಿದ್ದಾರೆ.
ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ, ಕೇಂದ್ರದ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಮಧ್ಯೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಹೆಚ್ಚಳದಿಂದ ದೇಶದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ, ಅಚ್ಛೇದಿನ್ ಬರಲಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರದ ದುರಾಡಳಿತದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲು ನಿರ್ಧರಿಸಿದೆ, ಎಡಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳು ಬೆಂಬಲ ನೀಡಿವೆ, ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸುವ ಮೂಲಕ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.