ಡಿಕೆಶಿ ಕುಟುಂಬದ ಭ್ರಷ್ಟಾಚಾರ ತನಿಖೆ ನಡೆಸುವಂತೆ ಇಡಿಗೆ ಬಿಎಸ್‍ವೈ ಪತ್ರ
ಮೈಸೂರು

ಡಿಕೆಶಿ ಕುಟುಂಬದ ಭ್ರಷ್ಟಾಚಾರ ತನಿಖೆ ನಡೆಸುವಂತೆ ಇಡಿಗೆ ಬಿಎಸ್‍ವೈ ಪತ್ರ

September 9, 2018

ಬೆಂಗಳೂರು:  ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕುಟುಂಬ ನಡೆಸಿರುವ ಭ್ರಷ್ಟಾಚಾರ ಕುರಿತು ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬರೆದಿದ್ದಾರೆ ಎನ್ನಲಾದ ಪತ್ರ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಉಂಟು ಮಾಡಿದೆ.

ಶಿವಕುಮಾರ್ ಅಷ್ಟೇ ಅಲ್ಲದೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಕೆ.ಜೆ. ಜಾರ್ಜ್, ಆರ್.ವಿ. ದೇಶಪಾಂಡೆ, ಶಾಸಕರಾದ ಎಂ.ಬಿ. ಪಾಟೀಲ್ ಹಾಗೂ ಗೋವಿಂದರಾಜ್ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಗಳು ತನಿಖೆ ನಡೆಸಿ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಹೊರಟಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಇಂದಿಲ್ಲಿ ಆರೋಪಿಸಿ, ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ರಾಷ್ಟ್ರದಲ್ಲಿ ಬಿಜೆಪಿಯೇತರ ಆಡಳಿತವಿರುವ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಕೇಂದ್ರ, ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಮೂಲಕ ಷಡ್ಯಂತರ ನಡೆಸಿದೆ ಎಂದು ಆರೋಪಿಸಿದ ಡಿ.ಕೆ. ಸುರೇಶ್, ಸುದ್ದಿಗೋಷ್ಠಿಯಲ್ಲಿ ಇಡಿಗೆ ಯಡಿಯೂರಪ್ಪ ಬರೆದಿರುವರೆನ್ನಲಾದ ಪತ್ರದ ಪ್ರತಿಯನ್ನು ಬಹಿರಂಗಪಡಿಸಿದರು.

ಇಲ್ಲಿನ ಬಿಜೆಪಿ ನಾಯಕರ ದ್ವೇಷ ಮತ್ತು ರಾಜಕೀಯ ಸಂಚಿನ ಬಗ್ಗೆ ಪ್ರಧಾನಿ ಅವರ ಅರಿವಿಗೆ ಬಂದಿದೆಯೋ ಇಲ್ಲವೋ ತಿಳಿಯದು, ಕೇಂದ್ರದ ತನಿಖಾ ಸಂಸ್ಥೆಗಳನ್ನು ಈ ನಾಯಕರು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಮೋದಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲು ಸಮಯಾವಕಾಶ ಕೋರಿದ್ದೇನೆ ಎಂದರು.

ಇ-ಮೇಲ್ ಕೂಡ ಮಾಡುತ್ತೇನೆ, ಅವರು ಸಮಯ ಕೊಟ್ಟರೆ, ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ದಾಖಲೆ ಸಹಿತ ವಿವರಿಸುತ್ತೇನೆ. ಬಿಜೆಪಿ ನಾಯಕರು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗಳನ್ನು ತಮ್ಮ ಪಕ್ಷದ ಮೋರ್ಚಾ ಘಟಕಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

ರಾಜ್ಯದ ಬಿಜೆಪಿ ನಾಯಕರು ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ.
ಅಲ್ಲದೆ ಇನ್ನೊಂದು ತಿಂಗಳಲ್ಲಿ ಬಿಜೆಪಿ ಸರ್ಕಾರ ರಚಿಸುವುದಾಗಿಯೂ ಹೇಳುತ್ತಿದ್ದಾರೆ, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಲು ಬೆಂಬಲವಾಗಿ ನಿಂತ ಶಿವಕುಮಾರ್ ಅವರನ್ನು ಹೆದರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ನಮ್ಮ ಕುಟುಂಬ ಇಂತಹ ಪ್ರಯತ್ನಗಳಿಗೆಲ್ಲ ಹೆದರಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ರಾಜಕಾರಣ ನಮಗೂ ಗೊತ್ತು. ಒಂದು ವೇಳೆ ಅಕ್ರಮವಾಗಿ ನಮ್ಮನ್ನು ಬಂಧಿಸಿದರೆ ರಾಜಕೀಯವಾಗಿ ನಮಗೇ ಅನುಕೂಲವಾಗುತ್ತದೆ, ಪ್ರಸ್ತುತ ಬೆಳವಣಿಗೆಗಳನ್ನು ನಾವು ಜನರ ಮುಂದಿಡುತ್ತಿದ್ದೇವೆ. ಅಂದ ಮಾತ್ರಕ್ಕೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ಹೆದರಿಕೊಂಡಿದ್ದೇವೆ ಎಂಬ ಅರ್ಥವಲ್ಲ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಒಂದು ವರ್ಷ, ಒಂದು ತಿಂಗಳು ಕಳೆದಿದೆ. ಸುಮಾರು ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಯಾವುದೂ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್‍ಗೆ ಕೊಟ್ಟು ಕೈತೊಳೆದುಕೊಂಡಿದ್ದಾರೆ.

ಇದರಿಂದ ಹತಾಶರಾಗಿರುವ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ವಾಮಮಾರ್ಗದ ಮೂಲಕ ನಮ್ಮನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಹಳೆಯ ಪ್ರಕರಣಗಳನ್ನೇ ಮತ್ತೆ ಕೆದಕಲಾಗುತ್ತಿದೆ. ಈ ಮೊದಲು ನಮ್ಮನ್ನು ಬಿಜೆಪಿಗೆ ಸೇರುವಂತೆ ಒತ್ತಡ ಹಾಕಲಾಗಿತ್ತು. ನಾವು ಬಗ್ಗಲಿಲ್ಲ ಎಂಬ ಕಾರಣಕ್ಕಾಗಿ ಈ ರೀತಿಯ ದ್ವೇಷದ ರಾಜಕಾರಣ ಮಾಡಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ಹಣಿಯಲು ಕೇಂದ್ರದ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ, ಮುಖಂಡರಾದ ವೀರಭದ್ರಸಿಂಗ್, ಅರವಿಂದ ಕೇಜ್ರಿವಾಲ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಹೂಡಾ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಬೆಂಬಲಿಗರು ಹಾಗೂ ತಮಿಳುನಾಡಿನಲ್ಲಿ ಕೆಲವು ನಾಯಕರ ಮೇಲೂ ಆದಾಯ ತೆರಿಗೆ ದಾಳಿ ನಡೆಸಿತ್ತು.

ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಸತತ ಪ್ರಯತ್ನ ನಡೆಸುತ್ತಿದೆ, ರಾಜ್ಯ ಕಾಂಗ್ರೆಸ್‍ನ ಮೂರ್ನಾಲ್ಕು ಪ್ರಭಾವಿ ನಾಯಕರನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧವೂ ಪಿತೂರಿ ನಡೆಯುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 2017ರ ಜನವರಿ 10ರಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ಅಧ್ಯಕ್ಷ ಸುಶೀಲ್‍ಚಂದ್ರ ಅವರಿಗೆ ಪತ್ರ ಬರೆದು ಡಿ.ಕೆ.ಶಿವಕುಮಾರ್ ಮತ್ತು ಅವರ ಬೆಂಬಲಿಗರ ಅಕ್ರಮಗಳ ತನಿಖೆ ಮಾಡಿ ಎಂದು ಒತ್ತಾಯಿಸಿದ್ದಾರೆ.

ಅದರಂತೆ ಪದೇ ಪದೆ ವಿಚಾರಣೆಗಳು ನಡೆದಿವೆ, ನಾವು ಎಲ್ಲಾ ವಿಚಾರಣೆಗಳಿಗೂ ಹಾಜರಾಗಿ ಸಮಂಜಸ ಉತ್ತರ ಕೊಟ್ಟಿದ್ದೇವೆ. ಕೇಂದ್ರದ ತನಿಖಾ ಸಂಸ್ಥೆಗಳ ಮೇಲೆ ನಮಗೆ ಗೌರವ ಇದೆ. ನೆಲದ ಕಾನೂನನ್ನು ನಾವು ಪಾಲಿಸುತ್ತಿದ್ದೇವೆ. ನಮಗೆ ಯಾವುದೇ ರೀತಿಯ ಅಳುಕಿಲ್ಲ ಎಂದು ಡಿ.ಕೆ.ಸುರೇಶ್ ಪುನರುಚ್ಚರಿಸಿದರು.

ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಇನ್ನೂ 10 ಮಂದಿ ಶಾಸಕರ ಕೊರತೆ ಇದೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ 118 ಮಂದಿ ಶಾಸಕರನ್ನು ಹೊಂದಿದೆ. ಹೇಗಾದರು ಮಾಡಿ ಸಮ್ಮಿಶ್ರ ಸರ್ಕಾರ ಪತನಗೊಳಿಸಬೇಕೆಂದು ಏಳೆಂಟು ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸುತ್ತಿದ್ದಾರೆ.

ಆಪರೇಷನ್ ಕಮಲ, ಕುದುರೆ ವ್ಯಾಪಾರಕ್ಕೆ ಕೈ ಹಾಕಿದ್ದಾರೆ, ಇದಕ್ಕೆ ಅಡ್ಡಿಯಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಗುರಿ ಮಾಡಿ ತೊಂದರೆ ಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಬೆಳಗಾವಿ ಜಿಲ್ಲಾ ರಾಜಕಾರಣಕ್ಕೂ ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳಕ್ಕೂ ಸಂಬಂಧವಿಲ್ಲ, ನಾಯಕತ್ವದಲ್ಲಿ ಒಂದು ಹಂತಕ್ಕೆ ಬೆಳೆದ ಮೇಲೆ ಅಂತಹವರಿಗೆ ಬೆಂಬಲ ನೀಡಬೇಕಾಗುತ್ತದೆ. ಡಿ.ಕೆ. ಶಿವಕುಮಾರ್ ಅದನ್ನೇ ಮಾಡಿದ್ದಾರೆ. ಬೆಳಗಾವಿಯ ವಿವಾದ ಸುಖಾಂತ್ಯವಾಗಿ ಮುಗಿದಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನೇರ ತೆರಿಗೆಗಳ ಮಂಡಳಿ ಅಧ್ಯಕ್ಷರಿಗೆ ಯಡಿಯೂರಪ್ಪ ಬರೆದಿದ್ದು ಎನ್ನಲಾದ ಪತ್ರದ ಪ್ರತಿಯನ್ನು ಬಿಡುಗಡೆ ಮಾಡಲಾಯಿತು.

Translate »