ಕೇಂದ್ರ ತನಿಖಾ ತಂಡ ದುರ್ಬಳಕೆ ಮಾಡಿಕೊಂಡು ನನ್ನ ಸರ್ಕಾರ ಅದ್ಹೇಗೆ ಬೀಳಿಸುತ್ತಾರೋ ನೋಡೆ ಬಿಡೋಣ
ಮೈಸೂರು

ಕೇಂದ್ರ ತನಿಖಾ ತಂಡ ದುರ್ಬಳಕೆ ಮಾಡಿಕೊಂಡು ನನ್ನ ಸರ್ಕಾರ ಅದ್ಹೇಗೆ ಬೀಳಿಸುತ್ತಾರೋ ನೋಡೆ ಬಿಡೋಣ

September 9, 2018

ಬೆಂಗಳೂರು: ಕೇಂದ್ರ ತನಿಖಾ ತಂಡಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ನೇತೃತ್ವದ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅದು ಹೇಗೆ ಸರ್ಕಾರವನ್ನು ಬೀಳಿಸುತ್ತಾರೋ ನೋಡೇ ಬಿಡೋಣ ಎಂದು ಸವಾಲು ಹಾಕಿದ್ದಾರೆ.

ದೆಹಲಿ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಯಾವುದೇ ಕ್ಷಣದಲ್ಲಿ ಪ್ರಮಾಣವಚನ ಸ್ವೀಕರಿಸುವ ಸಲುವಾಗಿ ಇಂದು ಬೆಳಿಗ್ಗೆಯೇ ಪಕ್ಷದ ಪ್ರಮುಖ ಸಭೆಗಳಿಂದಲೇ ಅರ್ಧಕ್ಕೆ ಎದ್ದು ಬಂದಿದ್ದಾರೆ.

ಅವರ ಭ್ರಮೆ ಹೇಗೆ ಈಡೇರುತ್ತದೋ ನಾನೂ ನೋಡಿಯೇ ಬಿಡುತ್ತೇನೆ, ನಮಗೂ ರಾಜಕೀಯ ಮಾಡಲು ಬರುತ್ತದೆ.
ಮುಖ್ಯಮಂತ್ರಿ ಅವರ ಮಾತಿಗೆ ಒತ್ತುಕೊಟ್ಟಂತೆ ಬಿಜೆಪಿಯ ಹಿರಿಯ ಸದಸ್ಯ ಕೆ.ಎಸ್. ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಇನ್ನೆರಡು ದಿನದಲ್ಲಿ ಬಿರುಗಾಳಿ ಏಳಲಿದೆ ಎಂದಿದ್ದಾರೆ.

ನಾವಾಗಿಯೇ ಮೈತ್ರಿ ಸರ್ಕಾರವನ್ನು ಉರುಳಿಸುವುದಿಲ್ಲ, ಅವರಾಗಿಯೇ ಕಿತ್ತಾಡಿಕೊಂಡು ಸರ್ಕಾರ ಉರುಳಿದರೆ ನಮಗೂ ಅದಕ್ಕೂ ಸಂಬಂಧವಿಲ್ಲ. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಅವರನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡರೆ ಆಶ್ಚರ್ಯಪಡಬೇಕಿಲ್ಲ ಎಂದರು.

ದಿಢೀರನೆ ದೆಹಲಿಯಿಂದ ಹಿಂದಿರುಗಿದ ಯಡಿಯೂರಪ್ಪ, ಸಂಸದ ಡಿ.ಕೆ. ಸುರೇಶ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರು ಮಾಧ್ಯಮಗಳಿಗೆ ನೀಡಿರುವ ದಾಖಲೆ ನಕಲಿ ಸೃಷ್ಟಿ. ನಾನು, ಶಿವಕುಮಾರ್ ಆತ್ಮೀಯ ಸ್ನೇಹಿತರು, ಪತ್ರಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.

ಯಡಿಯೂರಪ್ಪ ಅವರ ವಾದವನ್ನು ತಳ್ಳಿಹಾಕಿರುವ ಸಚಿವ ಡಿ.ಕೆ. ಶಿವಕುಮಾರ್, ಅವರು ಹೇಳಿರುವಂತೆ ಪತ್ರ ಫೇಕ್ ಆದರೆ ಸಂತೋಷ. ಆದರೆ, ಪುಟ್ಟಸ್ವಾಮಿಗೌಡ ಎನ್ನುವವರು ನೀಡಿದ ದೂರಿನ ಮೇಲೆ ಯಡಿಯೂರಪ್ಪ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ ಎಂದಿದ್ದಾರೆ.

ಶಿವಕುಮಾರ್ ಅವರಿಗೆ ಟ್ವೀಟ್ ಮೂಲಕ ಉತ್ತರ ನೀಡಿರುವ ಯಡಿಯೂರಪ್ಪ, ಅಪವಿತ್ರ ಮೈತ್ರಿ ಸರ್ಕಾರ ಬಚಾವ್ ಮಾಡಿಕೊಳ್ಳಲು ಇಂತಹ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ನಾನು ಇಂತಹ ಕೀಳು ರಾಜಕೀಯ ಮಾಡುವುದಿಲ್ಲ, ಸುರೇಶ್ ಮಾಡಿರುವ ಆರೋಪ ಸಾಬೀತುಪಡಿಸಿದರೆ ತಾವು ರಾಜಕೀಯದಿಂದಲೇ ನಿವೃತ್ತಿ ಆಗುವುದಾಗಿ ಘೋಷಿಸಿದ್ದಾರೆ.

ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಶಿವಕುಮಾರ್, ಆ ಪತ್ರದ ಆಧಾರದ ಮೇಲೆ ಇಷ್ಟೆಲ್ಲಾ ತನಿಖೆಗಳು ನಡೆದಿವೆ, ಆ ಪತ್ರ ಬರೆಸಿದವರು, ಚನ್ನಪಟ್ಟಣದ ಒಬ್ಬ ನಾಯಕ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಹೆಸರನ್ನು ಪ್ರಸ್ತಾಪಿಸದೆ ಸಂಚಿನ ಹಿಂದಿನ ಮರ್ಮವನ್ನು ತೆರೆದಿಟ್ಟರು.

ಈಶ್ವರಪ್ಪ ಹೇಳಿಕೆಗೆ ತದ್ವಿರುದ್ಧವಾಗಿ ಮಾತನಾಡಿರುವ ಯಡಿಯೂರಪ್ಪ, ಕುಮಾರಸ್ವಾಮಿ ಸರ್ಕಾರ ಉರುಳಿಸುವ ಪ್ರಯತ್ನ ನಮ್ಮಿಂದ ನಡೆದಿಲ್ಲ, ಕಾಂಗ್ರೆಸ್‍ನವರು ಸುಳ್ಳಿನ ಕಂತೆ ಹರಿಸಿ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸರ್ಕಾರ ಉರುಳಿಸಲು ಎಲ್ಲಾ ತಂತ್ರಗಳನ್ನು ಬಳಸುತ್ತೇವೆ, ಇದು ರಾಜಕೀಯ ಎಂದಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಕುಟುಂಬ ತಿರುಗಿಬಿದ್ದಿದೆ, ಅವರೂ ಯಾವ ಕ್ಷಣದಲ್ಲಿ ಏನು ಮಾಡುತ್ತಾರೋ ತಿಳಿಯದು, ಇಂತಹ ಅವಕಾಶವನ್ನು ನಾವು ಬಳಕೆ ಮಾಡಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಒಂದೆರಡು ಬಾರಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅವರು, ಸಚಿವ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಎಫ್‍ಐಆರ್ ದಾಖಲಿಸಲು ಮುಂದಾಗಿದೆ. ಕೆಲವು ಸಚಿವರು ಹಾಗೂ ನಾಯಕರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಸರ್ಕಾರ ಉರುಳಿಸುವ ಪ್ರಯತ್ನ ನಡೆದಿದೆ.

ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಆದರೆ ಬಿಜೆಪಿಯ ಹಲವು ನಾಯಕರು ಮಾಧ್ಯಮಗಳ ಎದುರೇ ಹೇಳಿಕೊಂಡಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬಿಜೆಪಿ ತನ್ನ ಪ್ರಾಬಲ್ಯ ವಿಸ್ತರಿಸಿಕೊಳ್ಳಲು ಮುಂದಾಗಿದೆ, ಇದಕ್ಕಾಗಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

Translate »