ಬಂದ್ ಯಶಸ್ಸಿಗೆ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್ ಮನವಿ
ಮೈಸೂರು

ಬಂದ್ ಯಶಸ್ಸಿಗೆ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್ ಮನವಿ

September 10, 2018

ಮೈಸೂರು:  ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಸೋಮವಾರ ನೀಡಿರುವ ಭಾರತ್ ಬಂದ್ ಕರೆಗೆ ಮೈಸೂರಿನಲ್ಲಿಯೂ ಲಾರಿ, ಕಾರು ಇನ್ನಿತರ ವಾಹನಗಳ ಮಾಲೀಕರು, ವಿವಿಧ ಸಂಘಟನೆಗಳು ಬೆಂಬಲ ನೀಡಿವೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಕಾಂಗ್ರೆಸ್ ಉಸ್ತುವಾರಿ ಪಿ.ಸಿ.ವಿಷ್ಣುನಾಥ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸದಲ್ಲಿ ಪೆಟ್ರೋಲ್, ಡೀಸೆಲ್ ದರಗಳು ಇಷ್ಟೊಂದು ಏರಿಕೆ ಕಂಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರ ದಿನಬಳಕೆಯ ಪೆಟ್ರೋಲ್, ಡೀಸೆಲ್ ದರವನ್ನು ಪ್ರತಿ ನಿತ್ಯ ಏರಿಸುತ್ತಲೇ ಬಂದಿದ್ದಾರೆ. 2014ರಲ್ಲಿದ್ದ ದರಕ್ಕೂ, ಈಗಿನ ದರಕ್ಕೂ ಹೋಲಿಕೆ ಮಾಡಿದರೆ ಮೋದಿ ಸರ್ಕಾರ ಜನಸಾಮಾನ್ಯರ ಮೇಲೆ ಯಾವ ರೀತಿ ಪ್ರಹಾರ ಮಾಡಿದೆ ಎಂಬುದರ ಅರಿವಾಗುತ್ತದೆ. ಅವರು ದೇಶ ಮತ್ತು ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಪೆಟ್ರೋಲ್ ದರ ಏರಿಕೆ ನೇರವಾಗಿ ಸಾಮಾನ್ಯ ಜನತೆ, ರೈತರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಹೊಡೆತ ನೀಡಿದೆ. ನಗದು ಅಪಮೌಲ್ಯೀಕರಣವೇ ಇದೆಲ್ಲಕ್ಕೂ ಕಾರಣ ಎಂದರು.

ಶಾಸಕ ವಾಸು ಮಾತನಾಡಿ, ಡೀಸೆಲ್ ದರ ಹೆಚ್ಚಳ ಟ್ರಾಕ್ಟರ್, ಪವರ್ ಟಿಲ್ಲರ್, ಪಂಪ್‍ಸೆಟ್‍ಗಳಿಗೆ ಡೀಸೆಲ್ ಬಳಸುವ ರೈತರ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿದೆ. ಜನಸಾಮಾನ್ಯರು ತತ್ತರಿಸುವಂತೆ ಮಾಡಿದೆ ಎಂದರು. ಬಡವರ ಪರ ಎನ್ನುವ ಪ್ರಧಾನಿ ಮೋದಿ ಬಡ ವಿರೋಧಿ ನೀತಿಗಳನ್ನೇ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ದುರ್ಬಲರು, ಬಡವರು, ಪರಿಶಿಷ್ಟರ ಪರ ಕಾರ್ಯಕ್ರಮಗಳನ್ನು ನೀಡಿದ್ದು ಕಾಂಗ್ರೆಸ್ ಮಾತ್ರ ಎಂದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಪ್ರದೀಪ್‍ಕುಮಾರ್, ಪ್ರಶಾಂತ್ ಉಪಸ್ಥಿತರಿದ್ದರು.

Translate »