ಮೈಸೂರು: ಶ್ರೀರಂಗಪಟ್ಟಣ ರಸ್ತೆಯಲ್ಲಿರುವ ಮಹಾರಾಜ ಶಿಕ್ಷಣ ಸಂಸ್ಥೆಯು ಮೈಸೂರಿನ ಮಹಾರಾಜ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಜು.28ರಂದು ಬೆಳಿಗ್ಗೆ 8.30ರಿಂದ ಸಂಜೆ 5 ಗಂಟೆವರೆಗೆ 5ನೇ ಉದ್ಯೋಗ ಮೇಳ ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಮುರಳಿ ತಿಳಿಸಿದರು.
ನಾಲ್ಕು ಬಾರಿ ಯಶಸ್ವಿ ಉದ್ಯೊಗ ಮೇಳಗಳನ್ನು ನಡೆಸಿರುವ ಸಂಸ್ಥೆಯು ಕಳೆದ ಬಾರಿಯ ಉದ್ಯೋಗ ಮೇಳದಲ್ಲಿ 3 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ಕಲ್ಪಿಸಿಕೊಟ್ಟಿದೆ. ಅದೇ ರೀತಿ ಈ ಬಾರಿಯೂ 3 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿಕೊಡುವ ಗುರಿ ಹೊಂದಿರುವುದಾಗಿ ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಳದಲ್ಲಿ 93 ಕಂಪನಿಗಳು ಭಾಗವಹಿಸಲು ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, 150ಕ್ಕೂ ಹೆಚ್ಚು ವಿವಿಧ ಕಂಪನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಸೇರಿದಂತೆ ತಾಂತ್ರಿಕ ಪದವಿ ಪಡೆದ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಬಹುದು. ಮುಂಗಡ ನೋಂದಣಿ ಹಾಗೂ ಇತರೆ ಶುಲ್ಕ ಇರುವುದಿಲ್ಲ. ಮೈಸೂರು ನಗರ ರೈಲ್ವೆ ನಿಲ್ದಾಣ, ನಗರ ಬಸ್ ನಿಲ್ದಾಣ, ಕೆಎಸ್‍ಆರ್‍ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಿಂದ ಉಚಿತ ವಾಹನ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.
ಮೇಳದಲ್ಲಿ ಭಾಗವಹಿಸುವ ಆಸಕ್ತರು ತಮ್ಮ ಗುರುತಿನ ಚೀಟಿ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ 10 ಪ್ರತಿಯಲ್ಲಿ ತಮ್ಮ ವಿವರಗಳನ್ನು ತರಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08038380098 ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಲಕ್ಷ್ಮೀಶ್ರೀ, ಶಿವಸಾಗರ್ ಉಪಸ್ಥಿತರಿದ್ದರು.