ಮಚ್ಚಿನಿಂದ ಕೊಚ್ಚಿ ಅಣ್ಣನ  ಮಾವನ ಕೊಂದ ತಮ್ಮನ ಸೆರೆ
ಮೈಸೂರು

ಮಚ್ಚಿನಿಂದ ಕೊಚ್ಚಿ ಅಣ್ಣನ  ಮಾವನ ಕೊಂದ ತಮ್ಮನ ಸೆರೆ

July 22, 2018

ಮೈಸೂರು:  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಸಹೋದರನ ಮಾವನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದು ಅವರ ಪತ್ನಿ ಹಾಗೂ ಪುತ್ರಿಯನ್ನು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಮೈಸೂರಿನ ಶಾಂತಿನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಶಾಂತಿನಗರ 4ನೇ ಕ್ರಾಸ್ ನಿವಾಸಿ ಅಸ್ಲಂ ಪಾಷ(54) ಹತ್ಯೆಯಾದವರು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಪತ್ನಿ ದಿಲ್ಶಾನ್ ಬಾನು ಹಾಗೂ ಪುತ್ರಿ ನಫೀಜಾರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉದಯಗಿರಿಯ ಶಾಂತಿನಗರ 6ನೇ ಕ್ರಾಸ್ ನಿವಾಸಿ ಸೈಯದ್ ಇರ್ಫಾನ್ ಮಚ್ಚಿನಿಂದ ಹಲ್ಲೆ ನಡೆಸಿ ಅಸ್ಲಂ ಪಾಷರನ್ನು ಹತ್ಯೆಗೈದು ಮತ್ತಿಬ್ಬರಿಗೆ ಗಾಯ ಮಾಡಿರುವ ವ್ಯಕ್ತಿಯಾಗಿದ್ದು, ಅವರನ್ನು ಉದಯಗಿರಿ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅಸ್ಲಂ ಪಾಷ ಅವರ ಪುತ್ರಿ ನಫೀಜಾರನ್ನು ಕಳೆದ 5 ವರ್ಷಗಳ ಹಿಂದೆ ಸೈಯದ್ ಇರ್ಫಾನ್ ಸಹೋದರ ಸೈಯದ್ ಸುಹೇಲ್ ಜೊತೆ ಮದುವೆ ಮಾಡಿಕೊಡಲಾಗಿದ್ದು, 3 ವರ್ಷದ ಹೆಣ್ಣು ಮಗುವಿದೆ. ಸಾಂಸಾರಿಕ ಕಲಹದಿಂದಾಗಿ ದಂಪತಿ ಬೇರ್ಪಟ್ಟಿದ್ದರು.

ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ನಫೀಜಾಗೆ ಪರಿಹಾರ ಮತ್ತು ನಿರ್ವಹಣೆ ಜೀವನಾಂಶ ನೀಡುವಂತೆ ಕೋರ್ಟ್ ಆದೇಶಿಸಿತ್ತು. ಅದರಂತೆ ಪರಿಹಾರ ನೀಡದೆ ಸುಹೇಲ್ ಸತಾಯಿಸುತ್ತಿದ್ದರಿಂದ ಬಾಕಿ ಪರಿಹಾರ ಕೊಡಿಸಿಕೊಡುವಂತೆ ಪತ್ನಿ ಮತ್ತೆ ಕೋರ್ಟ್ ಮೊರೆ ಹೋಗಿದ್ದಳು.

ವಿಚಾರಣೆ ನಡೆಸಿದ ನ್ಯಾಯಾಲಯವು ಬಾಕಿ ಹಣ ಪಾವತಿಸದ ಸುಹೇಲ್‍ನನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದರಿಂದ ಕೋಪೋದ್ರಿಕ್ತನಾದ ಸೈಯದ್ ಸುಹೇಲ್ ತಮ್ಮ ಸೈಯದ್ ಇರ್ಫಾನ್ ಶುಕ್ರವಾರ ರಾತ್ರಿ ಅಸ್ಲಂ ಪಾಷ, ದಿಲ್ಶಾನ್ ಬಾನು ಹಾಗೂ ಅತ್ತಿಗೆ ನಫೀಜಾ ಮೇಲೆ ತೀವ್ರ ಹಲ್ಲೆ ನಡೆಸಿದ. ತೀವ್ರ ಗಾಯಗಳಿಂದ ರಕ್ತಸ್ತ್ರಾವದಿಂದ ಅಸ್ಲಂ ಪಾಷ ಸ್ಥಳದಲ್ಲೇ ಸಾವನ್ನಪ್ಪಿದರು. ಉಳಿದಿಬ್ಬರಿಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಮಾಂಸ ಕತ್ತರಿಸುವ ಕೆಲಸ ಮಾಡುತ್ತಿದ್ದ ಸೈಯದ್ ಇರ್ಫಾನ್, ಮಚ್ಚು ಹಿಡಿದು ದಾಳಿ ನಡೆಸಿ ಮನಸ್ಸೋ ಇಚ್ಛೆ ಕೊಚ್ಚಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದಾವಿಸಿದ ದೇವರಾಜ ಉಪವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್, ಉದಯಗಿರಿ ಠಾಣೆ ಇನ್ಸ್‍ಪೆಕ್ಟರ್ ಪಿ.ಪಿ.ಸಂತೋಷ್ ಹಾಗೂ ಸಿಬ್ಬಂದಿ ಮಹಜರು ನಡೆಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸೈಯದ್ ಇರ್ಫಾನ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Translate »