ಬೆಂಗಳೂರು, ಜು. 8(ಕೆಎಂಶಿ)-ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ನಾಯಕರು ಕಾಮರಾಜ್ ಸೂತ್ರದ ಮೊರೆ ಹೋಗಿದ್ದಾರೆ.
ರಾಜಧಾನಿಯಲ್ಲಿ ಇಂದು ಇಡೀ ದಿನ ಸರ್ಕಾರ ಉಳಿಸುವ ಮತ್ತು ಉರುಳಿಸುವ ಕಾರ್ಯ ಬಿರುಸಿ ನಿಂದ ಸಾಗಿತ್ತು. ಸರ್ಕಾರ ಉಳಿಸುವ ಸಲು ವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಕಾಮರಾಜ್ ಸೂತ್ರ ಅನುಸರಿಸಿ ತಮ್ಮ ಮಂತ್ರಿಮಂಡಲವನ್ನು ಪೂರ್ಣ ಪ್ರಮಾಣದಲ್ಲಿ ಪುನಾರಚನೆಗೆ ಮುಂದಾಗಿದ್ದಾರೆ.
ಎರಡೂ ಪಕ್ಷಗಳ ನಾಯಕರ ತೀರ್ಮಾನ ದಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್‍ನ ಎಲ್ಲಾ ಸಚಿವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮತ್ತೊಂದೆಡೆ ವಿಧಾನಸಭಾ ಸದಸ್ಯತ್ವಕ್ಕೆ ರಾಜೀ ನಾಮೆ ನೀಡಿ, ಬಿಜೆಪಿ ತೆಕ್ಕೆಯಲ್ಲಿರುವ ಕಾಂಗ್ರೆಸ್-ಜೆಡಿಎಸ್‍ನ 13 ಶಾಸಕರನ್ನು ಮನವೊಲಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಇದರ ಭಾಗ ವಾಗಿಯೇ ಸಂಪುಟ ಪುನರ್ರಚನೆ ಎಂದು ಮುಖ್ಯ ಮಂತ್ರಿ ಹೇಳಿಕೆ ನೀಡುವ ಮೂಲಕ, ಬಿಜೆಪಿ ಸೇರಲು ಮುಂದಾಗಿದ್ದ ಕೆಲವು ಅತೃಪ್ತ ಶಾಸಕ ರನ್ನು ತಡೆಯಲು ಮುಂದಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ತಮ್ಮ ಶಾಸಕರಿಗೆ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಕಡೇ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡದಿ ದ್ದಲ್ಲಿ, ನಾಳೆ ನಡೆಯುವ ಪಕ್ಷದ ಶಾಸಕಾಂಗ ಸಭೆಯ ನಂತರ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ನಿಮ್ಮ ವಿಧಾನಸಭಾ ಸದಸ್ಯತ್ವ ದಿಂದ ಅನರ್ಹಗೊಳಿಸಲು ಸಭಾಧ್ಯಕ್ಷರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಮೈತ್ರಿ ಸರ್ಕಾರ ಉಳಿಸಿ, ಬಿಜೆಪಿಗೆ ಮುಖಭಂಗ ಮಾಡಲು ಉಭಯ ಪಕ್ಷಗಳ ನಾಯಕರು ಪತ್ಯೇಕವಾಗಿ ಮತ್ತು ಜಂಟಿಯಾಗಿ ಸಭೆಗಳನ್ನು ನಡೆಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ, ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು ಎರಡು ಬಾರಿ ಭೇಟಿ ಮಾಡಿ, ಅವರ ಸಲಹೆ ಸೂಚನೆ ಯಂತೆ ರಾಜ್ಯಪಾಲರಿಗೆ ಉಭಯಪಕ್ಷ ಗಳಿಂದ ಕೆಲವಷ್ಟು ಮಾಹಿತಿ ನೀಡಿದ್ದಾರೆ. ಅಲ್ಲದೇ ಇದೇ 12 ರಿಂದ ಆರಂಭಗೊಳ್ಳಬೇಕಾಗಿರುವ ಮಳೆಗಾಲದ ಅಧಿವೇಶನ ಮುಂದೂಡುವಂತೆ ಮನವಿ ಮಾಡಿ ದ್ದಾರೆ ಎನ್ನಲಾಗಿದೆ. ಇತ್ತ ದೇವೇಗೌಡರೊಟ್ಟಿಗೆ ಮುಖ್ಯಮಂತ್ರಿಯವರು ಚರ್ಚೆ ನಡೆಸಿದರೆ, ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಪಕ್ಷದ ಸಚಿವರು ಮತ್ತು ಮುಖಂಡರ ಜೊತೆ ಬೆಳಗಿನ ಉಪಹಾರ ನಡೆಸಿ, ಸುದೀರ್ಘ ಚರ್ಚೆ ನಡೆಸಿದರು. ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಸಂಪುಟ ಪುನಾರಚನೆ ಮಾಡುತ್ತಿದ್ದು, ತಾವು ಅಧಿಕಾರದ ತ್ಯಾಗಕ್ಕೆ ಸಿದ್ದರಾಗಬೇಕು ಎಂದಿದ್ದಲ್ಲದೆ, ಅಲ್ಲಿ ಸೇರಿದ್ದ ಎಲ್ಲಾ ಸಚಿವರಿಂದ ರಾಜೀನಾಮೆ ಪಡೆದುಕೊಂಡರು.
ಕಾಂಗ್ರೆಸ್ ನಾಯಕ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಅಜ್ಞಾತ ಸ್ಥಳವೊಂದರಲ್ಲಿ ಮುಖ್ಯಮಂತ್ರಿಗಳು ಭೇಟಿ ಮಾಡಿ, ಸುದೀರ್ಘ ಸಮಾಲೋಚನೆ ನಡೆಸಿದ್ದಲ್ಲದೆ, ಅವರ ಮನವೊಲಿಸುವ ಕೆಲಸ ಮಾಡಿದ್ದಾರೆ. ಬೆಳ್ಳಂಬೆಳಿಗ್ಗೆ ತಮ್ಮ ಅಂಗ ರಕ್ಷಕರನ್ನು ದೂರವಿಟ್ಟು ಒಬ್ಬರೇ ಕಾರಿನಲ್ಲಿ ರೆಡ್ಡಿಯವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ರೆಡ್ಡಿ ಕೂಡಾ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರೂ, ಇತರೆ ಶಾಸಕರ ಜೊತೆ ಮುಂಬೈಗೆ ತೆರಳಿಲ್ಲ. ಇಷ್ಟರ ನಡುವೆಯು ಮುಖ್ಯಮಂತ್ರಿಯವರು ವಿಧಾನಸೌಧದಲ್ಲಿ ಮಂಡ್ಯ ಸಕ್ಕರೆ ಕಂಪನಿ ಪುನರಾರಂಭಿಸುವ ಉದ್ದೇಶದಿಂದ ರೈತ ಮುಖಂಡರು ಮತ್ತು ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆಡಳಿತದ ಕಡೆ ಗಮನ ಹರಿಸಿದ್ದೇನೆ. ಬಿಜೆಪಿಯವರು ಬೇರೆ ಯಾರೋ ಏನು ಮಾಡುತ್ತಾರೆ ಎಂಬುದು ನನಗೆ ಬೇಕಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಸರ್ಕಾರ ಉಳಿಸಲು ಮಿತ್ರ ಪಕ್ಷದ ಮುಖಂಡರು ಕಸರತ್ತು ನಡೆಸುತ್ತಿದ್ದರೆ, ರಾಜ್ಯ ಬಿಜೆಪಿ ಮುಖಂಡರು ಗೌಪ್ಯವಾಗಿ ಮತ್ತಷ್ಟು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ.