ಕಾವೇರಿ ನಿರ್ವಹಣಾ ಮಂಡಳಿ ರಚನೆ ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ
ಮೈಸೂರು

ಕಾವೇರಿ ನಿರ್ವಹಣಾ ಮಂಡಳಿ ರಚನೆ ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

June 27, 2018

ಮೈಸೂರು:  ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಯನ್ನು ವಿರೋಧಿಸಿ ಹಾಗೂ ಮಂಡಳಿಗೆ ನೇಮಕವಾಗಿರುವ ಸದಸ್ಯರನ್ನು ಈ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧೀ ಪುತ್ಥಳಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮೊದಲಿನಿಂದಲೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದೀಗ ಮಂಡಳಿ ರಚನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಡಳಿ ರಚನೆಯಿಂದ ರಾಜ್ಯ ಸರ್ಕಾರ ಕಬಿನಿ, ಕೆಆರ್‍ಎಸ್, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ಮೇಲೆ ತನ್ನ ಹಿಡಿತ ಕಳೆದುಕೊಳ್ಳಲಿದೆ. ಇದರಿಂದ ಬೊಗಸೆ ನೀರಿಗೂ ಪರದಾಡುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಮಂಡಳಿ ರಚನೆಯನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಮಾಡಿದ್ದು, ಆ ಮೂಲಕ ಕೇಂದ್ರ ಸರ್ಕಾರ ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ಕಾರ್ಯಕರ್ತರಾದ ಶಾಂತಮೂರ್ತಿ, ಶಾಂತರಾಜೇ ಅರಸ್, ಸುನಿಲ್ ಕುಮಾರ್, ನಂಜುಂಡಸ್ವಾಮಿ, ಗುರುಮಲ್ಲಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Translate »