ವಾಹನ ಚಾಲಕರ ಅನುಕೂಲಕ್ಕಾಗಿ ಹೆದ್ದಾರಿಯ  ಪ್ರತಿ 25 ಕಿಮೀಗೊಂದರಂತೆ ತಂಗುದಾಣ
ಮೈಸೂರು

ವಾಹನ ಚಾಲಕರ ಅನುಕೂಲಕ್ಕಾಗಿ ಹೆದ್ದಾರಿಯ  ಪ್ರತಿ 25 ಕಿಮೀಗೊಂದರಂತೆ ತಂಗುದಾಣ

June 27, 2018
  •  ಶಾಸಕ ಎಸ್.ಎ. ರಾಮದಾಸ್ ಪ್ರಕಟ
  • ಪ್ರಧಾನಿ ಮೋದಿಯವರ ಸದುದ್ದೇಶ ವಿವರಣೆ

ಮೈಸೂರು:  ವಾಹನ ಚಾಲಕರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿಯ ಪ್ರತಿ 25 ಕೀ.ಮಿ ಅಂತರದಲ್ಲಿ ಒಂದೊಂದು ತಂಗುದಾಣ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಶಾಸಕರೂ ಆದ ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.

ಮೈಸೂರಿನ ವೀಣೆ ಶೇಷಣ್ಣ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘದ 7ನೇ ವಾರ್ಷಿಕ ಸರ್ವಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಷನಲ್ ಪರ್ಮಿಟ್ ವಾಹನಗಳ ಚಾಲಕರು ದೇಶದ ಹಲವು ಭಾಗಗಳಲ್ಲಿ ಸಂಚರಿಸುತ್ತಾರೆ. ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿಯ ಪ್ರತಿ 25 ಕೀ.ಮಿ. ಅಂತರದಲ್ಲಿ ತಂಗುದಾಣ ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಚಾಲಕರು ಸ್ನಾನ, ಅಡುಗೆ ಮಾಡಿಕೊಳ್ಳಲು ಹಾಗೂ ವಿಶ್ರಾಂತಿ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ವಿಶೇಷವಾಗಿ ಪ್ರವಾಸಿ ವಾಹನಗಳ ಚಾಲಕರು ನಿತ್ಯ ಹೊಸ ಅತಿಥಿಗಳನ್ನು ನೋಡುತ್ತಿರುತ್ತಾರೆ. ಈ ವೇಳೆ ಒಬ್ಬ ಚಾಲಕನ ಮನೋಭಾವದ ಆಧಾರದ ಮೇಲೆ ಪ್ರವಾಸಿಗರು ಪ್ರವಾಸಿ ತಾಣದ ಚಿತ್ರಣವನ್ನು ಕಲ್ಪಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿ ವಾಹನ ಚಾಲಕರು ದೊಡ್ಡ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಬ್ರಿಟಿಷ್ ಕಾಲದಲ್ಲಿ ದೇಶದಲ್ಲಿದ್ದ ಸಾರಿಗೆ ನೀತಿಗೆ ಬದಲಾಗಿ ನೂತನ ಸಾರಿಗೆ ನೀತಿ ಜಾರಿಗೊಳಿಸಿ ಚಾಲಕರ ಹಿತಕಾಯಲು ಕೇಂದ್ರ ಸರ್ಕಾರ ಮುಂದಾಗಿತ್ತು. ಇದಕ್ಕೆ ಲೋಕಸಭೆಯಲ್ಲಿ ಅಂಗೀಕಾರವೂ ಸಿಕ್ಕಿತು. ಆದರೆ ರಾಜ್ಯ ಸಭೆಯಲ್ಲಿ ಅನುಮೋದನೆ ದೊರೆಯದಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ, ಕೇರಳ ವಿರೋಧ: ವಾಹನ ಚಾಲಕರು, ಅಸಂಘಟಿತ ವಲಯದಲ್ಲಿ ದುಡಿಯುವ ಶ್ರಮಜೀವಿಗಳಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ `ಆಯುಷ್ಮಾನ್ ಭಾರತ್’ ವಿಮಾ ಯೋಜನೆಯ ಒಡಂಬಡಿಕೆಗೆ ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಸಹಿ ಹಾಕಿದ್ದರೆ, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಮಾತ್ರ ಸಹಿ ಹಾಕಲು ನಿರಾಕರಿಸಿವೆ. ಯೋಜನೆಯಿಂದ 10 ಕೋಟಿ ಕುಟುಂಬಗಳಿಗೆ ಆರೋಗ್ಯ ಸೇವೆ ಲಭ್ಯವಾಗಲಿದ್ದು, ಸಹಿ ಹಾಕುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರಲ್ಲದೆ, ಚಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಉನ್ನತ ಹುದ್ದೆ ಅಲಂಕರಿಸುವಂತೆ ಮಾಡಬೇಕೆಂದು ಸಲಹೆ ನೀಡಿದರು.

ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು: ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪ್ರತಿ ದಿನ ಪ್ರವಾಸಿ ವಾಹನ ಚಾಲಕರು ಬೇರೆ ಬೇರೆ ಭಾಷೆಯ ಪ್ರವಾಸಿಗಳನ್ನು ನೋಡುತ್ತಾರೆ. ಜೊತೆಗೆ ಪ್ರಯಾಣ ಕರ ಸುರಕ್ಷತೆಯ ಹೊಣೆ ಹೊತ್ತಿರುತ್ತಾರೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಧ್ಯವಿರುವ ನೆರವು ನೀಡಲು ಸಿದ್ಧವಿದ್ದೇನೆ ಎಂದು ಭರವಸೆ ನೀಡಿದರು.

ಸಂಘದ ಗೌರವಾಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ, ಸರ್ಕಾರದ ವಸತಿ ಯೋಜನೆಯಡಿ ಸಂಘದ ವಸತಿರಹಿತರಿಗೆ ಸೂರು ಕಲ್ಪಿಸಿಕೊಡಬೇಕು ಹಾಗೂ ಸಂಘದ ಕಚೇರಿಗಾಗಿ ಸರ್ಕಾರದ ಯಾವುದಾದರೂ ಕಟ್ಟಡವನ್ನು ಕೈಗೆಟಕುವ ದರದಲ್ಲಿ ಬಾಡಿಗೆಗೆ ಕೊಡಿಸುವಂತೆ ಉಭಯ ಶಾಸಕರಿಗೆ ಮನವಿ ಮಾಡಿದರು.

ಇದೇ ವೇಳೆ ಸಂಘದ ಸದಸ್ಯರಿಗೆ ಸಮವಸ್ತ್ರ ಹಾಗೂ ಅವರ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಯಿತು. ಜೊತೆಗೆ ಶಾಸಕರಾದ ಎಸ್.ಎ.ರಾಮದಾಸ್ ಮತ್ತು ಎಲ್.ನಾಗೇಂದ್ರ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿಗಳಾದ ಸಿ.ಎ.ಜಯಕುಮಾರ್, ನಾಜೀರ್, ಮಾರ್ಸಲ್, ಸಂಘದ ಅಧ್ಯಕ್ಷ ಎಸ್.ನಾಗರಾಜ್, ಕಾರ್ಯದರ್ಶಿ ಕೆ.ಟಿ.ದಿವಾಕರ್ ಮತ್ತಿತರರು ಹಾಜರಿದ್ದರು.

Translate »