- ಕಾವೇರಿ ನೀರು ನಿರ್ವಹಣಾ ಸಮಿತಿಗೆ ಕೆಲಸವೇ ಇಲ್ಲ
- ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜು. 20ರಂದು ಕೆಆರ್‌ಎಸ್, ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಣೆ
ಬೆಂಗಳೂರು: ಅವಧಿಗೂ ಮುನ್ನವೇ ಆರಂಭಗೊಂಡ ಮುಂಗಾರಿ ನಿಂದ ರಾಜ್ಯ ಕಾವೇರಿ ಜಲಾನಯನ ಪಾತ್ರದಿಂದ ತಮಿಳುನಾಡಿಗೆ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ನೀರು ಹರಿದು ಹೋಗಿದೆ.
ಕೇರಳದ ವೈನಾಡು, ಕೊಡಗು ಹಾಗೂ ಪಶ್ಚಿಮ ಘಟ್ಟಗಳಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಕೃಷ್ಣರಾಜ ಸಾಗರ ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗುವ ಸಮಯಕ್ಕೆ ತಮಿಳುನಾಡಿನ ಮೆಟ್ಟೂರು ಜಲಾಶಯವೂ ತುಂಬುವ ಸಾಧ್ಯತೆಗಳಿವೆ. ಕಬಿನಿ ಜಲಾಶಯ ಕಳೆದ 3 ವಾರಗಳ ಹಿಂದೆಯೇ ಭರ್ತಿಯಾಗಿ ಪ್ರತಿನಿತ್ಯ ಜಲಾಶಯದಿಂದ ಮೂರರಿಂದ ನಾಲ್ಕು ಟಿಎಂಸಿ ನೀರು ತಮಿಳುನಾಡಿಗೆ ಹರಿಯುತ್ತಿದೆ.
ಸತತ ಬರಗಾಲದಿಂದ ಕಂಗೆಟ್ಟಿದ್ದ ಉಭಯ ರಾಜ್ಯಗಳು
ಈ ಬಾರಿಯ ವರುಣನ ಕೃಪೆಯಿಂದ ತಮಿಳುನಾಡಿಗೆ ಜೂನ್ ತಿಂಗಳಲ್ಲಿ ಕಾವೇರಿ ಪ್ರಾಧಿಕಾರ ನಿಗದಿಪಡಿಸಿದ್ದ ಕ್ಕಿಂತ ಹೆಚ್ಚು ನೀರು ಹರಿದಿದೆ. ಜೂನ್ ತಿಂಗಳಲ್ಲಿ ರಾಜ್ಯದಿಂದ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸಬೇಕಿತ್ತು, ಆದರೆ ಆ ತಿಂಗಳಲ್ಲೇ 13.29 ನೀರು ಹರಿದು ಹೋಗಿದೆ. ಜುಲೈನಲ್ಲಿ 31.24 ಟಿಎಂಸಿ ನೀರು ಹರಿಸಬೇಕಿದ್ದು, ತಿಂಗಳ ಪ್ರಾರಂಭದಲ್ಲೇ 14.72 ಟಿಎಂಸಿ ನೀರು ಹರಿದು ಹೋಗಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯದ ಶೇಖರಣಾ ಸಾಮಥ್ರ್ಯ 79ಅಡಿ ಇದ್ದು, ಈಗಾಗಲೇ 74.05 ಅಡಿ ತುಂಬಿದೆ.
ರಾಜ್ಯದ ಜಲಾನಯನ ಪ್ರದೇಶದ ಕಬಿನಿ ಮತ್ತು ಹಾರಂಗಿ ಭರ್ತಿಯಾಗಿದೆ. ಕೆಆರ್‌ಎಸ್ 120 ಅಡಿಗಳ ಆಸುಪಾಸಿನಲ್ಲಿದ್ದು, ಯಾವುದೇ ಸಮಯದಲ್ಲಿ ಜಲಾಶಯ ಭರ್ತಿಯಾಗುವ ಸೂಚನೆ ಇದೆ. ಮಳೆ ಹಾಗೂ ಒಳಹರಿವಿನ ಪ್ರಮಾಣ ಇದೇ ರೀತಿ ಮುಂದುವರಿದರೆ ಕೆಲವೇ ದಿನದಲ್ಲಿ ಎರಡು ರಾಜ್ಯಗಳ ಜಲಾಶಯಗಳೂ ಭರ್ತಿಯಾಗಲಿವೆ.
ನ್ಯಾಯಾಲಯದ ಆದೇಶದಂತೆ ಕೇಂದ್ರ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಿ, ಜಲಾಶಯಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಸಂದರ್ಭದಲ್ಲೇ ಅವರಿಗೆ ಕೆಲಸವೇ ಬೇಡ ಎನ್ನುವಂತೆ ಜಲಾಶಯಗಳು ಭರ್ತಿಯಾಗಿ, ಉಭಯ ರಾಜ್ಯಗಳ ರೈತರಲ್ಲಿ ಸಂತಸ ತಂದಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದೇ 20ರಂದು ಕೆಆರ್‌ಎಸ್, ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಲಿದ್ದಾರೆ.