ಇಂದು ರಾಜ್ಯ ಬಜೆಟ್
ಮೈಸೂರು

ಇಂದು ರಾಜ್ಯ ಬಜೆಟ್

February 8, 2019

ಬೆಂಗಳೂರು: ರೈತರಿಂದ ದವಸ ಧಾನ್ಯ, ಹಣ್ಣು-ಕಾಯಿಪಲ್ಲೆಯನ್ನು ನೇರವಾಗಿ ಸರ್ಕಾರವೇ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ವಿನೂತನ ಯೋಜನೆ ಜಾರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮುಂದಾಗಿದ್ದಾರೆ.

ಕೃಷಿಕನ ಬೆಳೆಗೆ ಮಾರುಕಟ್ಟೆ ಯಲ್ಲಿ ಸೂಕ್ತ ಬೆಲೆ ದೊರೆಯದೆ ಮಧ್ಯವರ್ತಿಗಳ ಪಾಲಾ ಗುತ್ತಿರುವುದನ್ನು ತಪ್ಪಿಸಿ ರೈತರು ಸಾಲದ ಸುಳಿಗೆ ಸಿಲುಕ ದಂತೆ ಮಾಡುವ ಯತ್ನ ಇದಾಗಿದೆ. ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಅವರು ನಾಳೆ ಮಧ್ಯಾಹ್ನ 12 ಗಂಟೆ 33 ನಿಮಿಷಕ್ಕೆ 2019-20ನೇ ಸಾಲಿನ ಮುಂಗಡ ಪತ್ರ ಮಂಡಿಸಲಿದ್ದಾರೆ. ಒಟ್ಟಾರೆ 2.40 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಇದಾಗಿದ್ದು ಕೃಷಿ, ಗ್ರಾಮೀಣಾಭಿ ವೃದ್ಧಿ ಹಾಗೂ ನೀರಾವರಿಗಾಗಿಯೇ ತಮ್ಮ ಬಜೆಟ್‍ನಲ್ಲಿ ಹೆಚ್ಚು ಒತ್ತು ಕೊಡಲಿದ್ದಾರೆ. ಉನ್ನತ ಮೂಲಗಳ ಪ್ರಕಾರ ಬೆಳೆದ ಫಸಲು ಲಾಭ ತರದೆ, ಮಾಡಿದ ಸಾಲ ತೀರಿಸಲಾಗದೆ, ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸುವ ಉದ್ದೇಶದಿಂದ ಇಡೀ ರಾಷ್ಟ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕೃಷಿಕ ಬೆಳೆದ ಆಹಾರ ಸಾಮಗ್ರಿಗಳನ್ನು ಸರ್ಕಾರವೇ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ಮಹತ್ವದ ಯೋಜನೆ ಪ್ರಕಟಿಸಲಿದ್ದಾರೆ. ಈ ಯೋಜನೆ ಅನು ಷ್ಠಾನಕ್ಕಾಗಿ 150 ಕೋಟಿ ರೂ.ಗಳನ್ನು ಮುಂಗಡಪತ್ರದಲ್ಲಿ ಮೀಸಲಿಡಲಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 28,000 ಕೋಟಿ ರೂ. ಮೌಲ್ಯದ ಆಹಾರ ಧಾನ್ಯ ಉತ್ಪಾದನೆ ಆಗುತ್ತಿದೆ. ರೈತರು ಬೆಳೆದ ಬೆಳೆ ಖರೀದಿಸುವ ಮಧ್ಯವರ್ತಿಗಳು 53,000 ಕೋಟಿ ರೂ.ಗೆ ಮಾರಾಟ ಮಾಡಿ ಹೆಚ್ಚಿನ ಲಾಭಾಂಶ ಇವರ ಜೇಬಿಗೆ ಹೋಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಇಂತಹ ನಿರ್ಧಾರ ಕೈಗೊಂಡಿರುವುದಲ್ಲದೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಸಂದರ್ಭದಲ್ಲಿ ಬೆಳೆ ಖರೀದಿಗೆ 500 ಕೋಟಿ ರೂ. ಬದಲು ಒಂದು ಸಾವಿರ ಕೋಟಿ ರೂ. ಇದಕ್ಕಾಗಿ ಮೀಸಲಿಡಲಿದ್ದಾರೆ.

ಕೇಂದ್ರ ವಿಮಾ ಯೋಜನೆ ಫಲ ರೈತರಿಗೆ ದಕ್ಕದಿ ರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಹೊಸ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಮಹಿಳಾ ಸ್ವಸಹಾಯ ಗುಂಪಿನ ಮೂರ್ನಾಲ್ಕು ಸದಸ್ಯರು ಸೇರಿ ವ್ಯವಸಾಯ ಮಾಡಲು ಮುಂದಾದಲ್ಲಿ ಅಂತಹವರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಹಾಗೂ ಆಧುನಿಕ ಯಂತ್ರೋಪಕರಣ ಗಳನ್ನು ನೀಡುವ ಯೋಜನೆ ಜಾರಿಗೆ ಬರಲಿದೆ. ಭೂಮೇಲ್ಮೈ ಪಾತ್ರ ಅಂದರೆ ನದಿ ಮತ್ತು ಇತರ ಜಲ ಮೂಲಗಳಿಂದ ಸಮೀಪದ ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರು ಕಲ್ಪಿಸುವ ಮಹತ್ವದ ಜಲಧಾರೆ ಯೋಜನೆಗೆ 3,000 ಕೋಟಿ ರೂ.ವರೆಗೆ ಮೀಸಲಿಡಲಿದ್ದಾರೆ. ಒಟ್ಟಾರೆ ಮುಂಬರುವ ಲೋಕಸಭಾ ಚುನಾವಣೆ ಮತ್ತು ಕೇಂದ್ರ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಅದರಲ್ಲೂ ಕೃಷಿಕರನ್ನು ಸೆಳೆಯಲು ಹತ್ತು ಹಲವು ಹೊಸ ಯೋಜನೆ ನೀಡುತ್ತಿದ್ದಾರೆ. ಇದಕ್ಕಾಗಿಯೇ ತಮ್ಮ ಯೋಜನಾ ಗಾತ್ರವನ್ನು ಹಿಗ್ಗಿಸಿ, ಎಲ್ಲಾ ಯೋಜನೆ ಗಳಿಗೆ ಹಣ ಮೀಸಲಿಡುತ್ತಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಅಭಿವೃದ್ಧಿಗೆ ಮೂಲಸೌಕರ್ಯ ಕಲ್ಪಿಸಲು ನೀಲ ನಕಾಶೆ ಸಿದ್ಧಪಡಿಸಿದ್ದಾರೆ. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಪೂರ್ಣ ಮನ್ನಾಕ್ಕೆ ಈ ಬಾರಿಯೇ ಹಣ ಮೀಸಲಿಡುತ್ತಿದ್ದಾರೆ.

ಕಳೆದ ಮುಂಗಡಪತ್ರದಲ್ಲಿ ಐದು ವರ್ಷಗಳಲ್ಲಿ ಹಂತ ಹಂತವಾಗಿ ಕೃಷಿ ಸಾಲ ಮನ್ನಾ ಹಣವನ್ನು ಬ್ಯಾಂಕ್‍ಗಳಿಗೆ ಭರಿಸುವುದಾಗಿ ತಿಳಿಸಿದ್ದರು. ಇದೇ ಮೊದಲ ಬಾರಿಗೆ ಸಂಸತ್ ಮಾದರಿಯಲ್ಲಿ ಮುಂಗಡ ಪತ್ರ ಮಂಡಿಸುತ್ತಿರುವ ಮುಖ್ಯಮಂತ್ರಿ ಅವರು, ಪೂರ್ಣವಾಗಿ ಬಜೆಟ್ ಮಂಡನೆ ನಂತರವೇ ವಿಧಾನಮಂಡಲ ಸದಸ್ಯರಿಗೆ, ಮಾಧ್ಯಮದವರಿಗೆ ಮತ್ತು ಅಧಿಕಾರಿಗಳಿಗೆ ಮುಂಗಡ ಪತ್ರದ ಪ್ರತಿ ದೊರೆಯಲಿದೆ. ಕಳೆದ ವರ್ಷ ಮೇನಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಗೊಂಡ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸುತ್ತಿರುವ ಎರಡನೇ ಬಜೆಟ್ ಇದಾಗಿದೆ.

ಬಿಜೆಪಿ ಸುಮ್ಮನಿದ್ದರೆ ನಾನೇ ವಿಶ್ವಾಸ ಮತ ಯಾಚಿಸುತ್ತೇನೆ
ಬೆಂಗಳೂರು: ಪ್ರತಿಪಕ್ಷ ಬಿಜೆಪಿ ಸದನದಲ್ಲಿ ಶಾಂತ ವಾಗಿದ್ದರೆ ನಾನೇ ಖುದ್ದಾಗಿ ಸದನದ ವಿಶ್ವಾಸ ಮತಯಾಚಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಇಂದಿಲ್ಲಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ನಮ್ಮ ಸರ್ಕಾರಕ್ಕೆ ಬಹು ಮತ ಇಲ್ಲ ಎಂದು ಸದನದ ಕಾರ್ಯ ಕಲಾಪಗಳಿಗೆ ಅಡ್ಡಿಪಡಿಸುವ ಮೂಲಕ ರಾಜಕೀಯ ಮಾಡಲು ಹೊರಟಿರುವ ಬಿಜೆಪಿ ನಾಯಕರು, ನಮಗೆ ಬಹು ಮತ ಇದೆಯೇ ಇಲ್ಲವೇ ಎಂಬುದನ್ನು ವಿಧಾನಸಭೆಯಲ್ಲೇ ಸಾಬೀತುಪಡಿ ಸಲು ಸಿದ್ಧನಿದ್ದೇನೆ. ಪ್ರತಿಪಕ್ಷ ಬಿಜೆಪಿಯೇ ನನ್ನ ವಿರುದ್ಧ ಅವಿಶ್ವಾಸ ಮಂಡಿಸಲಿ, ಇಲ್ಲದಿದ್ದರೆ ನನಗೆ ಅವಕಾಶ ಮಾಡಿ ಕೊಟ್ಟರೆ ನಾನೇ ವಿಶ್ವಾಸ ಮತ ಸಾಬೀತಿಗೆ ಮುಂದಾಗುತ್ತೇನೆ. ಆಪರೇಷನ್ ಕಮ ಲದ ಮೂಲಕ ಸರ್ಕಾರ ಉರುಳಿಸುವ ಯತ್ನ ವಿಫಲವಾದ ನಂತರ ವಿಧಾನ ಮಂಡಲದ
ಕಾರ್ಯಕಲಾಪಗಳಿಗೆ ಅಡ್ಡಿ ಪಡಿಸಿ, ಜನರಿಗೆ ತಪ್ಪು ಸಂದೇಶ ರವಾನಿಸುವ ಯತ್ನ ನಡೆಸುತ್ತಿದ್ದಾರೆ. ಬಹುಮತ ಕಳೆದುಕೊಂಡಿದ್ದೇನೆ ಎಂದು ಬೊಬ್ಬೆ ಹೊಡೆಯುವ ಇವರು ತಾಕತ್ತಿದ್ದರೆ ಸದನದಲ್ಲಿ ಸಂಖ್ಯಾ ಬಲ ಪ್ರದರ್ಶನ ನಡೆದೇ ಬಿಡಲಿ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡೇ ಬಿಜೆಪಿ ನಾಯಕರು ರಾಜಕೀಯ ಮಾಡು ತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಏಳಿಗೆಯನ್ನು ಇವರಿಂದ ಸಹಿಸಲು ಆಗುತ್ತಿಲ್ಲ, ಈ ಕಾರಣಕ್ಕಾಗಿ ನಾಳೆ ಮುಂಗಡಪತ್ರ ಮಂಡನೆಗೂ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇವರ ಆಟಾಟೋಪಗಳಿಗೆ ಜಗ್ಗುವು ದಿಲ್ಲ, ನನಗೆ ಸದನದಲ್ಲಿ ಬಹುಮತವಿದೆ, ಜನರ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡಿಸಿ ಸದನದ ಒಪ್ಪಿಗೆ ಪಡೆಯುತ್ತೇನೆ ಎಂದರು. ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ವಜೂಭಾಯ್ ವಾಲಾ ಅವರು ಮಾಡಿದ ಭಾಷಣದ ಸಂದರ್ಭದಲ್ಲೂ ಪ್ರತಿಪಕ್ಷ ಬಿಜೆಪಿ ಭಾರೀ ಗಲಭೆ ಎಬ್ಬಿಸಿ ಧರಣಿ ಮಾಡಿದ್ದರಿಂದ ರಾಜ್ಯಪಾಲರು ಸಭೆಯಿಂದ ನಿರ್ಗಮಿಸಬೇಕಾಯಿತು. ನನಗೆ ಬಹು ಮತ ಇಲ್ಲವೆಂದು ಇಂದೂ ಕೂಡ ವಿಧಾನಸಭೆಯಲ್ಲಿ ಗದ್ದಲ ಮಾಡಿ ಸದನದ ಕಲಾಪ ನಡೆಯದಂತೆ ಮಾಡಿ ದರು. ನಾಳೆಯೂ ಇದೇ ಪರಿಸ್ಥಿತಿ ಎದುರಾದರೂ ಬಜೆಟ್ ಮಂಡನೆ ಮಾತ್ರ ಖಚಿತ ಎಂದರು.

Translate »